ನ್ಯಾಯಸಮ್ಮತ ಶರೀಅತ್; ದುರುದ್ದೇಶಪೂರಿತ ಸಿವಿಲ್ ಕೋಡ್

0
188

ಸನ್ಮಾರ್ಗ ವಾರ್ತೆ

✍️ ಎ.ಆರ್

ಸೂಕ್ಮವಾಗಿ ಕಲಿತು, ನಿಷ್ಪಕ್ಷವಾಗಿ ಮತ್ತು ಸತ್ಯಸಂಧವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರತಿಯೊಬ್ಬರಿಗೂ ಇಸ್ಲಾಮೀ ಶರೀಅತ್‌ನ  ಕೌಟುಂಬಿಕ ಕಾನೂನುಗಳು ಅತ್ಯಂತ ಸರಳ ಮತ್ತು ನ್ಯಾಯಪರ ಹಾಗೂ ನೆಮ್ಮದಿದಾಯಕ ಕುಟುಂಬ ಜೀವನವನ್ನು ಖಾತ್ರಿ ಪಡಿಸುತ್ತದೆಂದು ತಿಳಿದು ಕೊಳ್ಳಲು ಕಷ್ಟವೇನಿಲ್ಲ.

ಇಸ್ಲಾಮಿನಲ್ಲಿ ವಿವಾಹವೆಂದರೆ, ಪ್ರಾಯಪೂರ್ತಿಯಾದ ಗಂಡೂ ಹೆಣ್ಣೂ ಪರಸ್ಪರ ಅರಿತು, ಇಷ್ಟಪಟ್ಟು, ತಿಳಿದುಕೊಂಡು ಇಬ್ಬರು ಸಾಕ್ಷಿಗಳ ಮುಖಾಂತರ ನಿರ್ವಹಿಸಲ್ಪಡುವ ಅತ್ಯಂತ ಸರಳ ಕರ್ಮವಾಗಿದೆ. ಹೆಣ್ಣಿನ ಪೋಷಕರಾಗಿ ಅವಳ ತಂದೆಯೋ ಸಹೋದರರೋ, ಅವರಿಲ್ಲದಿದ್ದರೆ ಪಿತೃ ತಂದೆಯೋ ಸಹೋದರರೋ ಅಥವಾ ಕುಟುಂಬ ಸಂಬಂಧಿಕರಿಲ್ಲದಿದ್ದರೆ ನ್ಯಾಯಾಧೀಶರೋ ವಿವಾಹ ಕರ್ಮಕ್ಕೆ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ. ಕುಟುಂಬದ ಯಾರಾದರೂ ಹೆಣ್ಣಿನ ಪೋಷಕರಾಗಲು ವಿರೋಧ ವ್ಯಕ್ತಪಡಿಸಿದರೆ ಅತೀ ಹತ್ತಿರದ ಸಂಬಂಧಿಕರನ್ನು ಪೋಷಕರಾಗಿ ಸ್ವೀಕರಿಸಿಕೊಳ್ಳಬಹುದು. ವರನ ಕಡೆಯಿಂದ ಅವನೇ ಸಾಕಾಗುತ್ತದೆ. ವಧುವಿನ ಕಡೆಯಿಂದ ವರನಿಗೆ  ನಯಾ ಪೈಸೆಯೋ ಬೆಲೆಬಾಳುವ ವಸ್ತುಗಳನ್ನೋ ನೀಡಬೇಕಾಗಿಲ್ಲ. ಬದಲಾಗಿ, ವರನು ವಧುವಿಗೆ ತನ್ನ ಅಂತಸ್ತಿಗೆ ತಕ್ಕಂತೆ ಹಣವನ್ನೋ  ಇನ್ನಿತರ ವಸ್ತುಗಳನ್ನೋ ಮಹ್ರ್ (ವಧುಧನ)
ಆಗಿ ಕೊಡಲೇಬೇಕು.

ದಾಂಪತ್ಯ ಬದುಕು ಜೀವನದಾದ್ಯಂತ ಮುಂದುವರಿಯಬೇಕಾದ ಒಂದು ಕರಾರಾಗಿದೆ. ಏನಾದರೂ ಕೌಟುಂಬಿಕ ಸಮಸ್ಯೆಗಳು ಎದುರಾದರೆ ಇಬ್ಬರೂ ಪರಸ್ಪರ ಕ್ಷಮೆಯೊಂದಿಗೆ ಪರಿಹರಿಸಿಕೊಳ್ಳಬೇಕು. ಪರಸ್ಪರ ಪರಿಹರಿಸಿಕೊಳ್ಳಲು ಸಾಧ್ಯವಾಗದಿದ್ದರೆ ದಂಪತಿಯರ ಕುಟುಂಬಸ್ಥರು ಪರಿಹಾರವನ್ನು ಕಂಡುಕೊಳ್ಳಬೇಕು. ಪ್ರಸಕ್ತ ಕಾಲದಲ್ಲಿ ಕೌನ್ಸಿಲಿಂಗ್‌ನ ಮೂಲಕವೂ ಪರಿಹಾರವನ್ನು ಕಂಡುಕೊಳ್ಳಬಹುದು. ಯಾವುದೇ ರೀತಿಯಲ್ಲೂ ದಾಂಪತ್ಯ ಜೀವನವನ್ನು ಮುಂದುವರಿಸಿಕೊಂಡು ಹೋಗಲು ಪತ್ನಿಗೆ ಸಾಧ್ಯವಿಲ್ಲವೆಂದಾದರೆ ಪತಿಗೆ ತನ್ನ  ಮಹ್ರ್ ಅನ್ನು ಹಿಂತಿರುಗಿಸಿ ‘ಖುಲಾ’ ದೊಂದಿಗೆ ವಿಚ್ಛೇದನವನ್ನು ಪಡಕೊಳ್ಳಬಹುದು. ಅದಕ್ಕೆ ತನ್ನ ಪತಿ ಸಮ್ಮತಿಸದಿದ್ದರೆ ನ್ಯಾಯಾಲಯದಲ್ಲಿ ತಕ್ಕುದಾದ ಕಾರಣ ತಿಳಿಸಿ ತಾನಾಗಿಯೇ ವಿವಾಹ ಬಂಧವನ್ನು ವಿಚ್ಛೇದಿಸಿಕೊಳ್ಳಬಹುದು. ಅದಕ್ಕೆ ಪಾರಿಭಾಷಿಕದಲ್ಲಿ ‘ಫಸ್ಕ್’  ಎನ್ನಲಾಗುತ್ತದೆ. ಪತಿಯ ಹಿಂಸೆ, ಗುಣವಾಗದ ರೋಗ, ಜೀವನಾಂಶ ಕೊಡದೇ ಇರುವುದು, ಲೈಂಗಿಕ ದೌರ್ಬಲ್ಯ, ಸುದೀರ್ಘವಾದ ಜೈಲು ವಾಸ, ನಾಪತ್ತೆಯಾಗಿರುವುದು ಇತ್ಯಾದಿ ಕಾರಣಗಳಿಂದೆಲ್ಲ ವಿವಾಹ ವಿಚ್ಛೇದನ ಸಾಧ್ಯವಿದೆ.

ಗಂಡಿಗೆ ವಿವಾಹ ವಿಚ್ಛೇದನದ ಅನಿವಾರ್ಯತೆ ಕಂಡು ಬಂದರೆ, ‘ನಾನು ನಿನಗೆ ತಲಾಕ್ ಕೊಟ್ಟಿರುತ್ತೇನೆ’ ಎಂದು ಸಾಕ್ಷಿಗಳ ಸಮ್ಮುಖದಲ್ಲಿ ಹೇಳಬೇಕು. ಮೂರು ತಿಂಗಳೊಳಗೆ ತನ್ನ ಪತ್ನಿಯನ್ನು ಮರಳಿ ಪಡಕೊಂಡರೆ ತಲಾಕ್ ಅನೂರ್ಜಿತಗೊಳ್ಳುತ್ತದೆ. ಅವಳಿಗೆ ಪುನಃ ಪತ್ನಿಯಾಗಿ ಮುಂದುವರಿಯಬಹುದು. ಕುಟುಂಬ ಕಲಹ ಮರುಕಳಿಸಿ ಸಂಧಾನ ಪ್ರಯತ್ನ ಮುರಿದು ಬಿದ್ದರೆ ಪುನಃ ಮೊದಲಿನ  ಕ್ರಮವನ್ನು ಕೈಗೊಳ್ಳಬಹುದು. ಇದ್ದಾ (ಪತಿಯಿಂದ ದೂರವಿರುವ ಸಮಯ)ದಲ್ಲಿ ಪುನಃ ಮರಳಿ ಪಡೆಯಬಹುದು. ಇನ್ನು ಬೇರ್ಪಡಲೇಬೇಕೆಂಬ ಪರಿಸ್ಥಿತಿ ಮೂರನೇ ಬಾರಿಯೂ ಬಂದು ಬಿಟ್ಟರೆ- ಅಂದರೆ, ಮೂರು ಬಾರಿ ತಲಾಕ್ ಹೇಳಿದ ನಂತರ ಅವಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ನಂತರ ಅವರಿಬ್ಬರೂ ಬೇರೆಯೇ ಸಂಗಾತಿಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಅದೂ ಕೂಡಾ ಪರಾಜಿತಗೊಂಡರೆ, ಹಳೆಯ ಸಂಬಂಧವನ್ನು ಹೊಸ ನಿಖಾಹ್ (ವಿವಾಹ)ದೊಂದಿಗೆ ಮರು ಸ್ಥಾಪಿಸಲು ಸಾಧ್ಯವಾಗುತ್ತದೆ.

ಈ ಮಧ್ಯೆ ಪತ್ನಿಯ ಸಂಪತ್ತಿನಿಂದ ಪತಿ ಪಡಕೊಂಡಿದ್ದರೆ ಅದನ್ನು ಹಿಂತಿರುಗಿಸಬೇಕೆಂಬ ವ್ಯವಸ್ಥೆಯಿದೆ. ಆದರೆ ಪತ್ನಿಗೆ ಪತಿ ಬಂಗಾರದ ರಾಶಿ ಕೊಟ್ಟಿದ್ದರೂ ಅದನ್ನು ಮರಳಿ ಪಡೆಯುವಂತಿಲ್ಲ. ಅವಳಾಗಿ ಕೊಟ್ಟರೆ ಹೊರತು. ಇನ್ನು, ಮೂರು ಸಂದರ್ಭಗಳಲ್ಲಿ ಉಪಯೋಗಿಸಬೇಕಾದ ತಲಾಕ್, ಒಂದೇ ಉಸಿರಿನಲ್ಲಿ ‘ಮೂರು ತಲಾಕನ್ನೂ ಹೇಳಿದೆ’ ಎಂದು ಪತಿಯಾದವನು ಹೇಳಿಕೆ ನೀಡಿದರೆ  ಅಥವಾ ಬರೆದು ಕೊಟ್ಟರೆ ಅದಕ್ಕೆ ತ್ರಿವಳಿ ತಲಾಕ್ ಎನ್ನಲಾಗುತ್ತದೆ. ತ್ರಿವಳಿ ತಲಾಕ್ ಎಂಬುದು ಕಾನೂನು ಬಾಹಿರವಾಗಿದೆ. ಅದು  ಪ್ರೋತ್ಸಾಹಿಸಲ್ಪಡಬೇಕಾದ ವಿಷಯವೇ ಅಲ್ಲ. ಆದರೆ, ಮೂರು ತಲಾಕನ್ನು ಒಮ್ಮೆಲೇ ಹೇಳಿದರೆ ಅದನ್ನು ಒಂದಾಗಿ ಪರಿಗಣಿಸಬೇಕೇ?  ಅಥವಾ ಮೂರಾಗಿ ಪರಿಗಣಿಸಬಹುದೇ? ಪ್ರಸ್ತುತ ವಿಷಯದಲ್ಲಿ ಕರ್ಮಶಾಸ್ತ್ರಿಯವಾಗಿ ಭಿನ್ನಾಭಿಪ್ರಾಯಗಳಿವೆ. ತ್ರಿವಳಿ ತಲಾಕನ್ನು ಇದೀಗ  ಸುಪ್ರೀಮ್ ಕೋರ್ಟ್ ಅಸಿಂಧುವೆಂದು ಘೋಷಿಸಿದೆ. ಆದ್ದರಿಂದ ಅದಕ್ಕೆ ಯಾವುದೇ ರೀತಿಯ ಕಾನೂನಿನ ಬೆಂಬಲವಿಲ್ಲ. ಆದರೆ,  ಮೋದಿ ಸರಕಾರ ಕಾನೂನು ನಿರ್ಮಾಣದೊಂದಿಗೆ ತ್ರಿವಳಿ ತಲಾಕ್ ಅನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿತು. ತ್ರಿವಳಿ ತಲಾಕ್ ಕೊಟ್ಟ ಪತಿ ತನ್ನ ಹಿಂದಿನ ಪತ್ನಿಗೆ ಜೀವನಾಂಶ ಮತ್ತು ನಷ್ಟ ಪರಿಹಾರ ಕೊಡಬೇಕೆಂದು ಮೋದಿ ಸರಕಾರ ಆದೇಶ ನೀಡಿತು. ಅದರೊಂದಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಬೇಕು ಎಂದು ಹೇಳಿತು. ಇವೆರಡೂ ಒಂದೇ ಬಾರಿಗೆ ಹೇಗೆ ಪ್ರಾಯೋಗಿಕಗೊಳಿಸಬಹುದು ಎಂಬ ಬಗ್ಗೆ ಸರಕಾರ ಚಿಂತಿಸಲಿಲ್ಲ. ಆ ಕಾರಣದಿಂದಲಾದರೂ ಇನ್ನಷ್ಟು ಮುಸ್ಲಿಮ್ ಪುರುಷರು ಜೈಲು  ಪಾಲಾಗಲಿ ಎಂದೇ ಸರಕಾರ ಭಾವಿಸಿತು.

ಅದೇನಿದ್ದರೂ, ತ್ರಿವಳಿ ತಲಾಕನ್ನು ಮಾತ್ರ ನಿಷೇಧಿಸಲಾಗಿದೆಯೇ ಹೊರತು ತಲಾಕ್ ಇಂದಿಗೂ ಸಿಂಧುವಾಗಿದೆ. ತ್ರಿವಳಿ ತಲಾಕ್ ಅಸಿಂಧುಗೊಳಿಸಿದ ಬಳಿಕ ವಿವಾಹ ವಿಚ್ಛೇದನ 96% ಕಡಿಮೆಯಾಗಿದೆ ಎಂದು ಕೇರಳದ ರಾಜ್ಯಪಾಲ ಆರಿಫ್ ಖಾನ್ ಇತ್ತೀಚೆಗೆ ನೀಡಿದ ಹೇಳಿಕೆ ಬಾಲಿಶವಾಗಿದೆ. ಯಾರಾದರೂ ಈ ಬಗ್ಗೆ ಸರ್ವೇ ಅಥವಾ ಅಧ್ಯಯನವನ್ನು ನಡೆಸಿದ್ದಾರೆಯೇ? ತಲಾಕ್ ಪ್ರಕ್ರಿಯೆ ಕಡಿಮೆಯಾಗುತ್ತಿರುವ ಬಗ್ಗೆ ಕೆಲವು ಪ್ರಮುಖ ಮೀಡಿಯಾಗಳು ಈ ಹಿಂದೆ ಅಭಿಪ್ರಾಯ ಸಂಗ್ರಹ ನಡೆಸಿತ್ತು. ಅದರಿಂದ ಹೊರಬಂದ ಸತ್ಯವೇನೆಂದರೆ, 1986ರ ಮುಸ್ಲಿಮ್ ಮಹಿಳಾ (ವಿವಾಹ ವಿಚ್ಛೇದನ) ಕಾನೂನು ಜಾರಿಗೆ ಬಂದ ನಂತರ ತಲಾಕ್ ಪ್ರಕರಣಗಳು ಕಡಿಮೆಗೊಂಡಿವೆ ಎಂದಾಗಿತ್ತು. ಅದಕ್ಕೆ ಕಾರಣವೇನೆಂದರೆ, ವಿವಾಹ ವಿಚ್ಛೇದಿತೆಗೆ ನ್ಯಾಯಾಲಯಗಳು ದೊಡ್ಡ ಮೊತ್ತವನ್ನು ನಷ್ಟ  ಪರಿಹಾರವಾಗಿ ವಿಧಿಸುತ್ತಿತ್ತು. ರಾಜೀವ್ ಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ, ಮುಸ್ಲಿಮ್ ಸಂಘಟನೆಗಳ ನಾಯಕರು ಹಾಗೂ  ವಿದ್ವಾಂಸರು ಮಂಡಿಸಿದ ಸಮರ್ಪಕವಾದ ನಿರ್ದೇಶನಗಳನ್ನು ಮುಂದಿಟ್ಟುಕೊಂಡು ರಚಿಸಿದ ಬಿಲ್ಲನ್ನು ಪಾರ್ಲಿಮೆಂಟ್‌ನಲ್ಲಿ ಅನುಮೋದಿಸಿ ಕಾನೂನು ರಚಿಸಲಾಗಿತ್ತು. ಶಾಬಾನು ಬೇಗಂ ಪ್ರಕರಣದಲ್ಲಿ 1985 ಎಪ್ರಿಲ್ ಮೂರರಂದು ಸುಪ್ರೀಮ್ ಕೋರ್ಟ್ ನೀಡಿದ  ತೀರ್ಪಿನಲ್ಲಿ ಎಲ್ಲ ಧರ್ಮದವರಿಗೆ ಬಾಧಕವಾದ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ತಡವಾಗಿದೆ ಎಂಬ ಹೇಳಿಕೆಯನ್ನು  ವಿರೋಧಿಸಿ ಮುಸ್ಲಿಮ್ ಸಮುದಾಯ ಸಾರ್ವತ್ರಿಕವಾಗಿ ನಡೆಸಿದ ಪ್ರತಿಭಟನೆಯ ಫಲವಾಗಿ ರಾಜೀವ್ ಗಾಂಧಿ ಸರಕಾರ ಮುಸ್ಲಿಮ್  ವಿವಾಹ ವಿಚ್ಛೇದಿತೆಯರಿಗೆ ನಷ್ಟ ಪರಿಹಾರ ನೀಡುವ ಕಾನೂನನ್ನು ಜಾರಿಗೆ ತಂದಿತು. ಆದರೆ, ಆರಿಫ್ ಮುಹಮ್ಮದ್ ಖಾನ್ ಒಳಗೊಂಡಂತೆ ಜಾತ್ಯತೀತರೆಂದು ಕರೆಸಿಕೊಳ್ಳುವ ಒಂದು ಗುಂಪು, ಅಂದಿನಿಂದ ಇಂದಿನ ತನಕ ರಾಜೀವ್ ಗಾಂಧಿ ಸರಕಾರ ಮೂಲಭೂತವಾದಿಗಳಿಗೆ ಮಂಡಿಯೂರಿದೆ ಎಂಬ ಆರೋಪವನ್ನು ನಿರಂತರವಾಗಿ ಮಾಡುತ್ತಿದೆ. ವಿವಾಹ ವಿಚ್ಛೇದಿತೆಗೆ ಅವಳು ಪುನರ್ ವಿವಾಹವಾಗುವ ತನಕ ಹಿಂದಿನ ಪತಿ ಪ್ರತಿ ತಿಂಗಳು ಕನಿಷ್ಠ 500 ರೂ. ಜೀವನಾಂಶ ಕೊಡಬೇಕೆಂದು ಸಿ.ಆರ್.ಪಿ.ಸಿ.ಯ 125ನೇ ಪರಿಚ್ಛೇದದಲ್ಲಿ ಹೇಳಲಾಗಿದೆ. ತೀರ್ಪು ವಿವಾಹ ವಿಚ್ಛೇದಿತೆಯ ಪರವಾಗಿ ಬಂದರೂ ಹಿಂದಿನ ಹೆಚ್ಚಿನ ಪತಿಯಂದಿರು ಅದನ್ನು  ಜಾರಿಗೊಳಿಸಲು ಸಿದ್ಧರಿರುವುದಿಲ್ಲ. ಆ ಕಾರಣದಿಂದಾಗಿ ಪುನಃ ಕೇಸಿನ ಮೇಲೆ ಕೇಸು ನಡೆಯುತ್ತಿರುತ್ತದೆ. ಇದು ಮಹಿಳೆಯರೊಂದಿಗೆ  ತೋರಿಸುವ ನ್ಯಾಯವೇ? ಅಥವಾ ದೊಡ್ಡ ಮೊತ್ತವೊಂದನ್ನು ಪಡಕೊಂಡು ತನ್ನ ಪತಿಯಾಗಿದ್ದವನನ್ನು ಅವನ ಪಾಡಿಗೆ ಬಿಟ್ಟು ಬಿಡುವುದು ನ್ಯಾಯವೇ? ಈ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಖ್ಯಾತ ಲೇಖಕಿ ಮಾಧವಿ ಕುಟ್ಟಿ ಎಂಬ ಕಮಲಾ ಸುರಯ್ಯ ಹೇಳಿದ ಮಾತು ಚಿಂತನಾರ್ಹವಾಗಿದೆ. “ತನ್ನ ಕೈ ಬಿಟ್ಟವನ ಹಿಂದೆ ಜೀವನಾಂಶಕ್ಕಾಗಿ ಬೇಡುತ್ತಾ ಹೋಗುವುದು  ಆತ್ಮಾಭಿಮಾನವಿರುವ ಒಂದು ಹೆಣ್ಣಿಗೆ ಖಂಡಿತಕ್ಕೂ ಭೂಷಣವಲ್ಲ. ಅವನು ಅವನ ಪಾಡಿಗೆ ಹೋಗಲಿ ಬಿಡಿ” ಎಂದವರು  ಮಾರ್ಮಿಕವಾಗಿ ಹೇಳಿದ್ದರು.

ಭಾರತದಲ್ಲಿ ಈಗಲೂ ಕೂಡಾ ಮೇಲೆ ಪ್ರಸ್ತಾಪಿಲ್ಪಟ್ಟ ಸ್ಪಿರಿಟ್ ಇಲ್ಲದ ವೈಯಕ್ತಿಕ ಕಾನೂನು ನೆಲೆನಿಂತಿದೆ ಎಂದರೆ ತಪ್ಪಾಗಲಾರದು.  ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿ ಯವರು ಇಸ್ಲಾಮಿನ ದಾಂಪತ್ಯ ಜೀವನ ಪುಸ್ತಕದಲ್ಲಿ ಹೇಳಿದಂತೆ, ಬ್ರಿಟಿಷ್ ನಿರ್ಮಿತ  ವೈಯಕ್ತಿಕ ಕಾನೂನು ಮುಸ್ಲಿಮರ ಕುಟುಂಬ ಜೀವನವನ್ನು ನರಕಸದೃಶಗೊಳಿಸಿ ಬಿಟ್ಟಿದೆ. ಹನಫೀ, ಶಾಫೀ, ಶಿಯಾ ಮದ್‌ಹಬ್‌ಗಳನ್ನು  ಮಾತ್ರ ಆಧಾರವಾಗಿಟ್ಟುಕೊಂಡು 1937 ರಲ್ಲಿ ಹೊರತಂದ ಶರೀಅತ್ ಆ್ಯಕ್ಟನ್ನು ಮುಂದಿಟ್ಟುಕೊಂಡು ಮೌದೂದಿಯವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮುಸ್ಲಿಮ್ ವೈಯಕ್ತಿಕ ಕಾನೂನುಗಳನ್ನಾದರೋ ಈ ತನಕ ಕೂಡಾ ಕ್ರೋಢೀಕರಿಸಲಾಗಿಲ್ಲ. 1937ರ ಆ್ಯಕ್ಟ್ ನಲ್ಲಿ  ಇಸ್ಲಾಮ್ ಮಹಿಳೆಗೆ ನೀಡಿದ ವಿವಾಹ ವಿಚ್ಛೇದನಾ ಹಕ್ಕು ಅತ್ಯಂತ ಸಂಕೀರ್ಣ ಹಾಗೂ ಅಪ್ರಾಯೋಗಿಕವಾಗಿತ್ತು. ಇದು ಧರ್ಮ ಪರಿತ್ಯಾಗಕ್ಕೂ ಕಾರಣವಾದಾಗ ಮುಸ್ಲಿಮ್ ವಿದ್ವಾಂಸರು ವಿವಿಧ ಮದ್ ಹಬ್‌ಗಳನ್ನು ಆಧಾರವಾಗಿಟ್ಟುಕೊಂಡು ಮೇಲೆ ಸೂಚಿಸಲ್ಪಟ್ಟ  ಕಾರಣಗಳಿಂದ ‘ಫಸ್ಕ್’ ಮಾಡುವ ಹಕ್ಕನ್ನು ಮಹಿಳೆಗೆ ನೀಡುವ ಕಾನೂನು ಪರಿಷ್ಕರಣೆಯನ್ನು ಸರಕಾರದ ಮುಂದೆ ಸಮರ್ಪಿಸಿದರು. ಅದರ ಪ್ರಕಾರ 1939ರಲ್ಲಿ ಮ್ಯಾರೇಜ್ ಡಿಸೊಲೂಶನ್ ಆ್ಯಕ್ಟ್ ಜಾರಿಗೆ ತರಲಾಯಿತು.

ವೈಯಕ್ತಿಕ ಕಾನೂನಿನಲ್ಲಿ ಎರಡನೆಯದಾಗಿ ಮಾಡಲಾದ ತಿದ್ದುಪಡಿ, 1986ರ ಮುಸ್ಲಿಮ್ ಮಹಿಳಾ (ವಿವಾಹ ವಿಚ್ಛೇದನ) ಕಾನೂನಾಗಿದೆ. ಮೂರನೆಯದಾಗಿ, ತ್ರಿವಳಿ ತಲಾಕ್ ಕಾನೂನು ಬಾಹಿರವೆಂದು ಸುಪ್ರೀಮ್ ಕೋರ್ಟು ನೀಡಿದ ತೀರ್ಪಾಗಿದೆ. ಇನ್ನು ಕೂಡಾ  ಶರೀಅತ್‌ನ ನೈಜ ಸ್ಪಿರಿಟ್‌ನೊಂದಿಗೆ ಪರಿಷ್ಕರಣೆ ಹಾಗೂ ತಿದ್ದುಪಡಿಗಳನ್ನು ನಡೆಸಬಹುದಾಗಿದೆ. ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕು ಎಂಬ ತತ್ವದೊಂದಿಗೆ ವಿರೋಧ ವ್ಯಕ್ತಪಡಿಸಲು ಇಸ್ಲಾಮೀ ಶಿಕ್ಷಣಗಳೊಂದಿಗೆ ಬದ್ಧತೆಯಿರುವ ಯಾರಿಗೂ ಸಾಧ್ಯವಾಗಲಾರದು. ಮೂಲಭೂತವಾದಿ ಪೌರೋಹಿತ್ಯದ ಕಟ್ಟುಕತೆಗಳಿಗೆ ಇಲ್ಲಿ ಸ್ಥಾನವಿಲ್ಲ. ಏಕರೂಪ ನಾಗರಿಕ ಸಂಹಿತೆ ಅಪ್ರಾಯೋಗಿಕವೆಂದೂ ಆದರೆ, ಕೌಟುಂಬಿಕ ಕಾನೂನುಗಳನ್ನು ನ್ಯಾಯೋಚಿತವಾಗಿ ಪರಿಷ್ಕರಿಸಬೇಕೆಂದೂ ಮೋದಿ ಸರಕಾರ ನಿಯೋಗಿಸಿದ 21ನೇ ಲಾ ಕಮೀಷನ್ ನೀಡಿದ ಶಿಫಾರಸ್ಸಿಗೆ ಇಲ್ಲಿ ಮಹತ್ವವಿದೆ. ಸಮಾನ ಸಿವಿಲ್ ಕೋಡನ್ನು ಬೆಂಬಲಿಸುವವರು ಮತ್ತು  ವಿರೋಧಿಸುವವರು ಒಂದೇ ರೀತಿಯಲ್ಲಿ ರಾಜಕೀಯ ಲಾಭ ಪಡೆಯುವ ಹಂತಕ್ಕೆ ಈ ಸಮಸ್ಯೆ ಇದೀಗ ಬೆಳೆದು ನಿಂತಿದೆ. ಜಾತ್ಯತೀತ  ಭಾರತಕ್ಕೆ ವಿವಿಧ ಕೌಟುಂಬಿಕ ಕಾನೂನುಗಳು ಅಸಂಗತವೆಂದು ನಿರಂತರವಾಗಿ ವಾದಿಸುವವರ ಉದ್ದೇಶ ಶುದ್ಧಿ ಸಂಶಯ ಪಡುವಷ್ಟು ನಿಗೂಢವಾಗಿದೆ. ಯಾವುದೇ ಸಮುದಾಯದಲ್ಲಿ ಜನಿಸಿದವನಾದರೂ ಧರ್ಮದಲ್ಲಿ ಆಸಕ್ತಿಯಿಲ್ಲದಿದ್ದರೆ ಅವನಿಗೆ 1954ರ ಸ್ಪೆಷಲ್  ಮ್ಯಾರೇಜ್ ಆ್ಯಕ್ಟ್ ಪ್ರಕಾರ ವಿವಾಹವಾಗಬಹುದು. ಹಲವು ಮುಸ್ಲಿಮ್ ನಾಮಧಾರಿಗಳು ಅದನ್ನೇ ಈಗಲೂ ಮಾಡುತ್ತಿದ್ದಾರೆ. ಇತರರು ಕೂಡಾ ಹಾಗೇ ಮಾಡಬೇಕೆಂಬ ಒತ್ತಾಯ ಏಕೆ?

“ಏಕರೂಪ ನಾಗರಿಕ ಸಂಹಿತೆಯನ್ನು ಯಾವ ಪಾರ್ಟಿ ಜಾರಿ ಗೊಳಿಸುತ್ತಿದೆ ಎಂದು ನೋಡಬೇಕಾಗಿಲ್ಲ. ಅದು ಸಮಾನ ಲಿಂಗ ಪರವೋ ನ್ಯಾಯ ಪರವೋ ಎಂದು ನೋಡಿದರೆ ಸಾಕು” ಎಂದು ಪ್ರಮುಖ ಮಾಧ್ಯಮವೊಂದರ ಪ್ರಸ್ತಾಪ ಕೂಡಾ ಅದರ ನಿಜ ಬಣ್ಣವನ್ನು ಬಯಲುಗೊಳಿಸುತ್ತಿದೆ. (ಮಾತೃಭೂಮಿ 2023 ಜುಲೈ 4ರ ವರದಿ)

ಆರ್.ಎಸ್.ಎಸ್. ಹರಿಕಾರ ಎಂ.ಎಸ್.  ಗೋಲ್ವಾಳ್ಕರ್ ಕೂಡಾ ನಿರಾಕರಿಸಿದ ಸಮಾನ ನಾಗರಿಕ ಸಂಹಿತೆಯನ್ನು ಒಂಭತ್ತು ವರ್ಷಗಳ ಆಡಳಿತದ ಕೊನೆಯ ಗಳಿಗೆಯಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಭರದಲ್ಲಿ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಸಮಾನ ಸಿವಿಲ್ ಕೋಡ್‌ಗಾಗಿ ಮೋದಿ ಸರಕಾರ ನಡೆಸುತ್ತಿರುವ ಕಸರತ್ತು ಯಾವ ಉದ್ದೇಶಕ್ಕಾಗಿ ಎಂಬುದು ಅಲ್ಪಮತಿಗಳಿಗೂ  ಅರ್ಥವಾಗುತ್ತದೆ. ಫ್ಯಾಸಿಸ್ಟ್ ಸರಕಾರ ಈ ತನಕ ಯಾವುದೇ ರೂಪರೇಖೆಯನ್ನು ಬಿಡುಗಡೆಗೊಳಿಸದೆ, ಮುಸ್ಲಿಮೇತರ ಹಲವು ಸಮುದಾಯಗಳನ್ನು ಕಾನೂನಿನ ಚೌಕಟ್ಟಿನಿಂದ ಹೊರಗಿಡಲಾಗುವುದೆಂಬ ಖಾತ್ರಿಯೊಂದಿಗೆ ಜಾರಿಗೆ  ತರಲು ಪ್ರಯತ್ನಿಸುತ್ತಿರುವ ಪ್ರಸ್ತುತ ಸಮಾನ ಸಿವಿಲ್ ಕೋಡ್ ಯಾರನ್ನು ಗುರಿಯಾಗಿಸುತ್ತಿದೆ ಎಂಬುದು ಜಗಜ್ಜಾಹೀರುಗೊಂಡಿರುವ ಪ್ರಸಕ್ತ ಸನ್ನಿವೇಶದಲ್ಲಿ ‘ಜಾರಿಗೊಳಿಸುವುದು ಯಾವ ಪಾರ್ಟಿಯಾದರೇನು?’ ಎಂಬ ಹೇಳಿಕೆಯ ಹಿಂದಿನ ನಿಗೂಢ ಉದ್ದೇಶವನ್ನು ಅನಾವರಣಗೊಳಿಸಬೇಕಾದ ಅಗತ್ಯವಿಲ್ಲ.