ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಇನ್ನೂ ಸತ್ತಿಲ್ಲ; ಶೀಘ್ರದಲ್ಲೇ ಸಾರ್ವಜನಿಕರೆದುರು ಬರಲಿದ್ದಾರೆ: ನೆಡುಮಾರನ್ ಸ್ಫೋಟಕ ಹೇಳಿಕೆ

0
179

ಸನ್ಮಾರ್ಗ ವಾರ್ತೆ

ಚೆನ್ನೈ: ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದ ಹದಿನಾಲ್ಕು ವರ್ಷಗಳ ನಂತರ, ತಮಿಳುನಾಡಿನ ಹಿರಿಯ ರಾಜಕಾರಣಿ ಪಜಾ ನೆಡುಮಾರನ್ ಅವರು, ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ಶೀಘ್ರದಲ್ಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ(ಎಲ್‌ಟಿಟಿಇ) ಅನ್ನು ಸ್ಥಾಪಿಸಿದ ಮತ್ತು ದ್ವೀಪ ರಾಷ್ಟ್ರದಲ್ಲಿ ತಮಿಳು ರಾಜ್ಯಕ್ಕಾಗಿ ವ್ಯಾಪಕವಾದ ಗೆರಿಲ್ಲಾ ಅಭಿಯಾನದ ನೇತೃತ್ವ ವಹಿಸಿದ್ದ ಪ್ರಭಾಕರನ್, ಮುಲ್ಲಿವೈಕಲ್‌ನಲ್ಲಿ ಸೇನೆಯ ಕಾರ್ಯಾಚರಣೆಯ ನಂತರ ಮೇ 18, 2009 ರಂದು ಸತ್ತಿದ್ದಾರೆಂದು ಶ್ರೀಲಂಕಾ ಸರ್ಕಾರ ಘೋಷಿಸಿತ್ತು. ಆ ವೇಳೆ ಲಂಕಾ ಸರ್ಕಾರವನ್ನು ಮಹಿಂದ ರಾಜಪಕ್ಸೆ ಅಧ್ಯಕ್ಷರಾಗಿದ್ದರು. ಹೀಗೆ ಘೋಷಿಸಿದ 14 ವರ್ಷಗಳ ಬಳಿಕ ಅವರು ಇನ್ನೂ ಜೀವಂತವಿದ್ದಾರೆ ಎಂದು ನೆಡುಮಾರನ್ ಬಹಿರಂಗವಾಗಿ ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷರಾಗಿರುವ ನೆಡುಮಾರನ್ ಅವರು ತಂಜಾವೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡುತ್ತಾ, “ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಜಗತ್ತಿಗೆ ಘೋಷಿಸಲು ನಾವು ಸಂತೋಷಪಡುತ್ತೇವೆ. ಅವರು ತಮಿಳು ಈಳಂಗಾಗಿ ತಮ್ಮ ಯೋಜನೆಗಳನ್ನು ಘೋಷಿಸುತ್ತಾರೆ” ಎಂದಿದ್ದಾರೆ.

“ಶ್ರೀಲಂಕಾದಲ್ಲಿನ ದಂಗೆಯ ನಂತರ ರಾಜಪಕ್ಸೆ ಸರ್ಕಾರದ ಪತನವು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಇದು ಅವರ (ಪ್ರಭಾಕರನ್) ಎಂಟ್ರಿಗೆ ಸರಿಯಾದ ಸಮಯ” ಎಂದು ಹೇಳಿದರು.

2009 ರಲ್ಲಿ ಶ್ರೀಲಂಕಾ ಸರ್ಕಾರವು ಪ್ರಭಾಕರನ್ ಸಾವಿನ ಬಗ್ಗೆ ಘೋಷಿಸಿದ ನಂತರ, ದೇಹದ ಹಲವಾರು ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗಿತ್ತು. ಈ ಹತ್ಯೆಯ ವೇಳೆ ಪ್ರಭಾಕರನ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಎಲ್‌ಟಿಟಿಇ ನಾಯಕನ ಪ್ರಸ್ತುತ ಸ್ಥಳದ ಕುರಿತು ಪಜಾ ನೆಡುಮಾರನ್ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.