ಸನ್ಮಾರ್ಗ ವಾರ್ತೆ
ಮುಂಬೈ: ಮಹಾರಾಷ್ಟ್ರದಲ್ಲಿ ಹೊಸದಾಗಿ ಜಾರಿಗೆ ತರಲಾದ ‘ಮತಾಂತರ ನಿಷೇಧ ಕಾಯ್ದೆ’ಯಡಿ ಬಂಧಿತನಾಗಿದ್ದ ಮುಸ್ಲಿಂ ಯುವಕನಿಗೆ ಮುಂಬೈ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಹಿಂದೂ ಮಹಿಳೆಯನ್ನು ಬಲವಂತವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸಿದ ಆರೋಪದ ಮೇಲೆ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಹೊಸ ಕಾಯ್ದೆಯಡಿ ಮುಂಬೈನಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಅಲ್ಲದೆ, ರಾಜ್ಯದಲ್ಲಿ ಈ ಕಾಯ್ದೆಗೆ ಸಂಬಂಧಿಸಿದ ಮೊದಲ ನಿರೀಕ್ಷಣಾ ಜಾಮೀನು ಅರ್ಜಿಯೂ ಇದಾಗಿರುವ ಸಾಧ್ಯತೆಯಿದೆ.
ನವೆಂಬರ್ 20 ರಂದು ದಿಂಡೋಶಿಯ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ.ಎ. ಸಾನೆ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಹಿಂದೂ ಮಹಿಳೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅಕ್ರಮ ಮತಾಂತರದ ಆರೋಪಗಳನ್ನು ಹೊರಿಸಲಾಗಿತ್ತು. ದೂರುದಾರರು ಮತ್ತು ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಮತ್ತು ಮಹಿಳೆ ಬುರ್ಖಾ ಧರಿಸಿರುವ ಫೋಟೋವನ್ನು ಸಾಕ್ಷ್ಯವಾಗಿ ಹಾಜರುಪಡಿಸಿದ್ದರು. ಮಹಿಳೆಯ ಹೆಸರನ್ನು ಒಳಗೊಂಡಿದ್ದ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಸಲ್ಲಿಸಲಾಗಿತ್ತು.
ಆದಾಗ್ಯೂ, ಇಬ್ಬರೂ ಅಕ್ಟೋಬರ್ 16 ರಂದು ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಬೆಟ್ಟು ಮಾಡಿದೆ. ವಿವಾಹಕ್ಕೆ ಅಗತ್ಯವಾದ ಕಾನೂನುಬದ್ಧ ನೋಟಿಸ್ ಪ್ರಕ್ರಿಯೆಗಳೂ ಪೂರ್ಣಗೊಂಡಿದ್ದವು. ಮೌಲ್ವಿಯಿಂದ ಪೊಲೀಸರು ವಶಪಡಿಸಿಕೊಂಡಿರುವ ರಿಜಿಸ್ಟರ್ನಲ್ಲಿ ಧಾರ್ಮಿಕವಾಗಿ ನಿಕಾಹ್ ನಡೆದಿರುವುದನ್ನು ದೃಢಪಡಿಸುವ ಯಾವುದೇ ದಾಖಲೆಗಳಿಲ್ಲ ಎಂದೂ ನ್ಯಾಯಾಲಯ ಗಮನಿಸಿದೆ. ಮಹಿಳೆ ಕೂಡ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಯಾವುದೇ ಬಲವಂತ, ಬೆದರಿಕೆ, ಒತ್ತಡ ಅಥವಾ ಆಮಿಷವಿಲ್ಲದೆ ತಾನು ಸ್ವಇಚ್ಛೆಯಿಂದ ವಿವಾಹವಾಗಿರುವುದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಹೆಸರನ್ನು ಸೇರಿಸಲಾಗಿದೆ ಎಂಬ ಮಾತ್ರಕ್ಕೆ ಮತಾಂತರ ನಡೆದಿದೆ ಎಂದು ಪರಿಗಣಿಸಲು ಸಾಧ್ಯವೇ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಪ್ರಶ್ನಿಸಿದ್ದಾರೆ. ನಿಕಾಹ್ ನಡೆದಿರುವುದಕ್ಕೆ ಪುರಾವೆಗಳಿಲ್ಲದಿರುವಾಗ ಮಹಿಳೆ ಬುರ್ಖಾ ಧರಿಸಿರುವ ಫೋಟೋ ಮತಾಂತರವನ್ನು ದೃಢಪಡಿಸಲು ಸಾಕಾಗುವ ಸಾಕ್ಷ್ಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಅಕ್ರಮ ಮತಾಂತರಕ್ಕೆ ಅಗತ್ಯವಿರುವ ಅಂಶಗಳು ಕಂಡುಬಂದಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಬ್ಬರೂ ಕೋವಿಡ್ ಕಾಲದಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಅವರು ವಯಸ್ಕರಾಗಿದ್ದು ಪರಸ್ಪರ ಒಪ್ಪಿಗೆಯಿಂದ ವಿವಾಹವಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಬಲವಂತದ ಅಥವಾ ವಂಚನೆಯ ಮತಾಂತರದ ಆರೋಪವನ್ನು ನಂಬುವುದು ಕಷ್ಟ ಎಂದು ಆದೇಶದಲ್ಲಿ ಹೇಳಲಾಗಿದೆ.
ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಪರಿಗಣಿಸಿದ ನ್ಯಾಯಾಲಯ, 50,000 ರೂ.ಗಳ ವೈಯಕ್ತಿಕ ಶ್ಯೂರಿಟಿ ಮೇಲೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರವಾಗಿ ವಕೀಲರಾದ ಕರೀಂ ಪಠಾಣ್, ಫಜಲ್ ಶೇಖ್ ಮತ್ತು ಪಿ.ಪಿ. ತಿವಾರಿ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ಎಸ್. ಕನೋಜಿಯಾ ಮತ್ತು ದೂರುದಾರರ ಪರವಾಗಿ ವಕೀಲ ಅಭಿಷೇಕ್ ದುಬೆ ಹಾಜರಾಗಿದ್ದರು.












