ಮಹಾರಾಷ್ಟ್ರ, ಹರಿಯಾಣ ಮತಗಟ್ಟೆಗೆ

0
578

ಸನ್ಮಾರ್ಗ ವಾರ್ತೆ

ಮುಂಬೈ,ಅ.21: ಇಂದು ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು ಬಿಜೆಪಿ ಸುಲಭ ಜಯ ಸಾಧಿಸುವ ಹುಮ್ಮಸ್ಸಿನಲ್ಲಿದೆ. ಪ್ರತಿಪಕ್ಷ ಕಾಂಗ್ರೆಸ್ -ಎನ್‌ಸಿಪಿ ಸಖ್ಯ ಆರ್ಥಿಕ ಮಾಂದ್ಯ, ನಿರುದ್ಯೋಗ, ರೈತ ಸಮಸ್ಯೆಯನ್ನು ಎತ್ತಿಹಿಡಿದು ಚುನಾವಣೆಯಲ್ಲಿ ಪ್ರಚಾರ ನಡೆಸಿತ್ತು. ಬಿಜೆಪಿ ಕಾಶ್ಮೀರ ವಿಷಯವನ್ನು ಮುಖ್ಯವಾಗಿ ಚರ್ಚಿಸಿತ್ತು. ಜತೆಗೆ ಪಾಕಿಸ್ತಾನದ ಕೇಂದ್ರಗಳಿಗೆ ಸೇನೆ ನಡೆಸಿದ ದಾಳಿಯೂ ಬಿಜೆಪಿಗೆ ಸಹಾಯಕವಾಗಲಿದೆ ಎನ್ನಲಾಗುತ್ತಿದೆ.

ಶಿವಸೇನೆ ಬಿಜೆಪಿಯೊಂದಿಗೆ ಸಖ್ಯವನ್ನು ಹೊಂದಿದ್ದು, ಟೀಕೆಯನ್ನೂ ಮಾಡುತ್ತಿದೆ. ಬಿಜೆಪಿ ಉಮೇದುವಾರರಿರುವಲ್ಲಿ ಶಿವಸೇನೆಯ ಬಂಡುಕೋರರು ಸ್ಪರ್ಧಿಸುತ್ತಿದ್ದು ಇವರ ಕುರಿತು ಶಿವಸೇನೆ ಮೃದುಧೋರಣೆಯನ್ನು ತಳೆದಿದೆ.

3000ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಕಣದಲ್ಲಿದ್ದು 1007 ಮಂದಿ ಕೋಟ್ಯಧೀಶರು. 916 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆ. ಬಿಜೆಪಿಯ 155 ಮತ್ತು ಶಿವಸೇನೆ 116 ಮಂದಿ ಕೋಟ್ಯಧೀಶರು. ಕಾಂಗ್ರೆಸ್ಸಿನ 126, ಎನ್‍ಸಿಪಿ 101 ಅಭ್ಯರ್ಥಿಗಳು ಕೋಟ್ಯಧೀಶರು ಕಣದಲ್ಲಿದ್ದಾರೆ.

ಬಿಜೆಪಿಯ ಪರಾಗ್ ಶಾ 500 ಕೋಟಿ ರೂ. ಒಡೆಯ, ಬಿಜೆಪಿಯ ಮಂಗಲ್‍ ಪ್ರತಾಪ್ ಲೋಧ 440 ಕೋಟಿರೂ. ಒಡೆಯ. ಕಾಂಗ್ರೆಸ್ಸಿನ ಸಂಜಯ್ ಜಗತಾಪ್‍ರಲ್ಲಿ 245 ಕೋಟಿ ರೂಪಾಯಿ ಆಸ್ತಿ ಇದೆ.

ಇದೇ ವೇಳೆ ಸೋಲಾಪುರದ ರೈತರು ಬಿಜೆಪಿ ವಿರುದ್ಧ ಮತಹಾಕುತ್ತೇವೆ ಎಂದು ಘೋಷಿಸಿದ್ದಾರೆ. ಹರಿಯಾಣದಲ್ಲಿ ಆರ್ಥಿಕ ಕುಸಿತ, ನಿರುದ್ಯೋಗ ಬಿಜೆಪಿಯ ಹಿನ್ನಡೆಯುವಂತೆ ಮಾಡುವಲ್ಲಿ ಯಶಸ್ಸು ಕಂಡಿಲ್ಲ. ಇದೇ ವೇಳೆ 90ರಲ್ಲಿ 75 ಸೀಟಿಗೆ ಸ್ಪರ್ಧಿಸುತಿರುವ ಬಿಜೆಪಿಗೆ ಬಂಡುಕೋರರ ಉಪಟಳ ದೊಡ್ಡ ತಲೆನೋವಾಗಿದೆ. ಸೇನೆಯಲ್ಲಿ ಕೆಲಸ ಮಾಡುವವರು ಹರ್ಯಾಣದಲ್ಲಿ ಹೆಚ್ಚು ಇದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಎನ್‍‌ಆರ್‌ಸಿ ಬಿಜೆಪಿ ಪ್ರಚಾರದ ಆಯುಧವನ್ನಾಗಿ ಇಲ್ಲಿ ಬಳಸಿಕೊಂಡಿತ್ತು.