ಮಂಗಳೂರು; ಟೇಕಾಫ್ ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ; ತಪ್ಪಿದ ಭಾರೀ ದುರಂತ

0
186

ಸನ್ಮಾರ್ಗ ವಾರ್ತೆ

ಮಂಗಳೂರು: ಟೇಕಾಫ್‌ಗೆ ಸಿದ್ಧವಾಗಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ತಪ್ಪಿದೆ ಎಂದು ವರದಿಯಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಹಿತ ಬೆಳಗ್ಗೆ 8.30ಕ್ಕೆ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಢಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

ಅಪಾಯದ ಸೂಚನೆ ಅರಿತು ತಕ್ಷಣ ಪೈಲಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಿಮಾನವನ್ನು ವಾಪಾಸ್ ತರಲಾಗಿದ್ದು ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.

ಪ್ರಯಾಣಿಕರಿಗೆ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ದುಬೈಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.