ಮಂಗಳೂರು ಸಿಟಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ್ದ ಆರೋಪಿಯ ಬಂಧನ: ಪೊಲೀಸ್ ಕಮಿಷನರ್ ಎದುರೇ ಕಪಾಳಮೋಕ್ಷ ಮಾಡಿದ ಯುವತಿ..!

0
1228

ಸನ್ಮಾರ್ಗ ನ್ಯೂಸ್

ಮಂಗಳೂರು: ಇತ್ತೀಚೆಗೆ ಭಾರೀ ವೈರಲ್ ಆಗಿದ್ದ ಮಂಗಳೂರಿನ ಖಾಸಗಿ ಸಿಟಿ ಬಸ್ಸೊಂದರಲ್ಲಿ ಯುವತಿಯೋರ್ವಳಿಗೆ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಕೊನೆಗೂ ಆರೋಪಿಯ ಗುರುತನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಕಮೀಷನರ್ ಕಚೇರಿಯಲ್ಲಿ ಪೊಲೀಸ್ ಕಮೀಷನರ್ ಹಾಗೂ ಮಾಧ್ಯಮಗಳ ಎದುರಿನಲ್ಲಿಯೇ ಸಂತ್ರಸ್ತ ಯುವತಿಯು ಕಪಾಳಮೋಕ್ಷ ಮಾಡಿದ ಘಟನೆಯೂ ನಡೆದಿದೆ‌‌.

ಬಂಧಿತ ಆರೋಪಿಯನ್ನು ಕಾಸರಗೋಡು ಮೂಲದ ಹುಸೇನ್ (41) ಎಂದು ಗುರುತಿಸಲಾಗಿದೆ. ಆರೋಪಿಯ ಕುರಿತು ಮಾಹಿತಿ ನೀಡಲು ಪೊಲೀಸ್ ಆಯುಕ್ತರಾದ ಶಶಿಕುಮಾರ್ ರವರು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದರು‌.

ಈ ವೇಳೆ ಕಮಿಷನರ್‌ ಎದುರೇ ಯುವತಿ ಆರೋಪಿಯ ಕೆನ್ನೆಗೆ ಬಾರಿಸಿದ ಘಟನೆಯೂ ನಡೆಯಿತು. ಅಲ್ಲದೇ, ‘Moms Mangalore’ ಎಂಬ ಸಂಘಟನೆಯ ದಿವ್ಯಾ ಎಂಬವರು ಕೂಡ ಕಪಾಳ ಮೋಕ್ಷ ಮಾಡಿದರು.

ಜ.14ರಂದು ಯುವತಿ ದೇರಳಕಟ್ಟೆಯಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಆಕೆಯ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಹುಸೈನ್ ಆಕೆಗೆ ಕಿರುಕುಳ ನೀಡಿದ್ದ ಎನ್ನಲಾಗಿದ್ದು, ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ ಮೇಲೆ ಬಸ್ ನಿಂದ ಇಳಿದಿದ್ದ. ನಂತರ ಮತ್ತೊಂದು ಬಸ್‌ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಕಿರುಕುಳ ನೀಡಿದ್ದ. ಈ ವೇಳೆ ಫೋಟೋ ತೆಗೆದು ವೈರಲ್ ಮಾಡೋಡುವುದಾಗಿ ಯುವತಿ ಎಚ್ಚರಿಸಿದ್ದರೂ ಆತ ಚಾಳಿ ಬಿಟ್ಟಿರಲಿಲ್ಲ ಎನ್ನಲಾಗಿದೆ.

ಯುವತಿ ಆತನ ಪೋಟೋ ತೆಗೆದಾಗ ಹುಸೈನ್ ಫೋಟೋಗೆ ನಿರ್ಲಜ್ಜೆಯಿಂದ ಪೋಸ್ ಕೊಟ್ಟಿದ್ದು, ಇದಾದ ಬಳಿಕವೂ ತನ್ನ ಅನುಚಿತ ವರ್ತನೆ ಮುಂದುವರಿಸಿದ್ದ. ಇತರ ಪ್ರಯಾಣಿಕರ ಎದುರೇ ಆರೋಪಿಯು ಯುವತಿಗೆ ಕಿರುಕುಳ ನೀಡಿದರೂ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು ಎಂದು ಯುವತಿ ತಿಳಿಸಿದ್ದು, ಇದರಿಂದ ಬೇಸತ್ತ ಯುವತಿ ಆರೋಪಿಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಇದು ಕೆಲವೇ ಹೊತ್ತಿನಲ್ಲಿ ಭಾರೀ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿ ಖಾಸಗಿ ಸಿಟಿ ಬಸ್ ಡ್ರೈವರ್ ಮತ್ತು ನಿರ್ವಾಹಕನಿಗೆ ಪೊಲೀಸರು ಸಮನ್ಸ್ ನೀಡಿರುವುದಾಗಿ ತಿಳಿದು ಬಂದಿದೆ.