ಜನರ ನಡುವೆ ಸೇತುವೆಯಂತಿರುವ ಮೌಲ್ಯಾಧಾರಿತ ಪತ್ರಿಕೆಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ: ನಾಝ್ಮಿನ್ ಖಾನ್

0
565

ಗೋವಾದ ಮಡ್ಗಾಂವ್‌ನಲ್ಲಿ ಅನುಪಮ ಮಾಸಿಕದ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ

ಸನ್ಮಾರ್ಗ ವಾರ್ತೆ

ಮಡ್ಗಾಂವ್(ಗೋವಾ): ಹಲವಾರು ಪತ್ರಿಕೆಗಳ ಮಧ್ಯೆ ಜನರ ನಡುವೆ ಸೇತುವೆಯಂತೆ ಕೆಲಸ ಮಾಡುವ ಮೌಲ್ಯಾಧಾರಿತ ಪತ್ರಿಕೆಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ವಾಸ್ಕೋದ ನಿಕಟಪೂರ್ವ ಅಧ್ಯಕ್ಷೆ ನಾಝ್ಮಿನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಂದು ಗೋವಾದ ಮಡ್ಗಾಂವ್ ನಲ್ಲಿ ಅನುಪಮ ಮಾಸಿಕದ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ವ್ಯಾಪಾರದ ಉದ್ದೇಶವಿಲ್ಲದೆ ಸಮಾಜದ ಉನ್ನತಿಗೆ ಕೆಲಸ ಮಾಡುತ್ತಿರುವ ಅನುಪಮದಂತಹ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೋಗುವುದು ಸಣ್ಣ ವಿಷಯವಲ್ಲ. ಪ್ರತಿದಿನ ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಕನ್ನಡಿಗರೆಲ್ಲರೂ ಇದನ್ನು ಖರೀದಿಸಿ ಓದಬೇಕು. ಕನ್ನಡ ಬಾರದವರು ಕೂಡ ಇದಕ್ಕಾಗಿ ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಮಹಾರಾಷ್ಟ್ರದ ರತ್ನಗಿರಿ ಸಂಚಾಲಕಿ ಹೆಣ್ಣು ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಅನುಪಮವೇ ಸಾಕ್ಷಿ.‌ ಮುಸ್ಲಿಂ ಮಹಿಳೆಯರೇ ನಡೆಸುತ್ತಿರುವ ಪತ್ರಿಕೆಯಾದರೂ ಎಲ್ಲರ ಮೆಚ್ಚುಗೆ ಪಡೆಯುವಲ್ಲಿ ಅನುಪಮಕ್ಕೆ ಸಾಧ್ಯವಾಗಿದೆ. ಅನುಪಮ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನುಪಮ ಮಹಿಳಾ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ., ಮಹಿಳೆಯರು ಪತ್ರಿಕೋದ್ಯಮದಲ್ಲಿ ವಿರಳವಾಗಿದ್ದ 20 ವರ್ಷಗಳ ಹಿಂದೆ ಆರಂಭವಾದ ಪತ್ರಿಕೆಯು ಕಷ್ಟದ ಹೆಜ್ಜೆಯನ್ನಿಟ್ಟು ಮುಂದುವರಿದಿದೆ. ಇದರ ಹಾದಿ ಸುಲಭದ್ದಲ್ಲ ಕಠಿಣ ಪರಿಶ್ರಮದಿಂದ ಕೌಟುಂಬಿಕ ಪತ್ರಿಕೆಯಾಗಿ ಜನಪ್ರಿಯವಾಗಿದೆ. ಕುಟುಂಬದಲ್ಲಿ ಪ್ರತಿಯೊಬ್ಬರ ಪಾತ್ರವೇನು, ನಿರ್ವಹಿಸಬೇಕಾದ ಹೊಣೆಗಾರಿಕೆಯೇನು ಎಂಬುದನ್ನು ಮನವರಿಕೆ ಮಾಡಿಸುವ ಪ್ರಯತ್ನವನ್ನು ಅನುಪಮ ನಿರಂತರ ಮಾಡುತ್ತಾ ಬಂದಿದೆ‌. ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯು ಒಂದು ಕುಟುಂಬದಿಂದ ಆರಂಭವಾಗುತ್ತದೆ. ಆದುದರಿಂದ ಕುಟುಂಬದ ಭದ್ರತೆಗೆ ತನ್ನದೇ ಕೊಡುಗೆಯನ್ನು ನೀಡುತ್ತಾ ಬಂದಿದೆ. ಎಲೆಮರೆಯ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದೆ‌. ನಮ್ಮ ಸಹೋದರಿಯರ ಸಹಕಾರವನ್ನು ಅನುಪಮ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಹೂಡೆ ತೋನ್ಸೆ ಗ್ರಾಮ ಪಂಚಾಯತ್ ಸದಸ್ಯೆ ಜಮೀಲ ಸದೀದ, ಮಡ್ಗಾಂವ್ ಜಮಾಅತೆ ಇಸ್ಲಾಮಿ ಹಿಂದ್ ಸಂಚಾಲಕಿ ಗುಲ್ಝಾರ್ , ಸದಸ್ಯೆ ಸಾಯಿರ, ಉಪಸ್ಥಿತರಿದ್ದರು.

ಖುರತುಲ್ ಐನ್ ಆರಂಭದಲ್ಲಿ ಕುರಾನ್ ಪಠಿಸಿದರು. ಅನುಪಮ ಸಹಸಂಪಾದಕಿ ಸಬೀಹಾ ಫಾತಿಮಾ ‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಹೀದಾ ಉಮರ್ ಕಾರ್ಯಕ್ರಮ ನಿರೂಪಿಸಿದರು.