ಮಂಗಳೂರು ‘ಎಂ ಫ್ರೆಂಡ್ಸ್‌’ನಿಂದ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಿನೂತನ ಕೊಡುಗೆ ‘ಕಂಪ್ಯೂಟರ್ ಬಸ್’: ಈ ಬಸ್ ನಲ್ಲಿ ಏನಿದೆ ವಿಶೇಷ?

0
220

ಸನ್ಮಾರ್ಗ ವಾರ್ತೆ

ಶಿಕ್ಷಣದಲ್ಲಿ ನವ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಕಲಿಯಲು ಪ್ರಾಥಮಿಕ ಹಂತದಲ್ಲೇ ಕಂಪ್ಯೂಟರ್ ಕಲಿಕೆಯು ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆ. ಗ್ರಾಮೀಣ ಮತ್ತು ಹಳ್ಳಿಗಾಡು ಪ್ರದೇಶದ ಮಕ್ಕಳು ಅದರಲ್ಲೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಇದನ್ನು ಮನಗಂಡ ಮಂಗಳೂರಿನ ಪ್ರಸಿದ್ಧ ಸೇವಾ ಸಂಸ್ಥೆಯಾಗಿರುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ತನ್ನ ದಶಮಾನೋತ್ಸವದ ಸ್ಮರಣಾರ್ಥ, ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ‘ಡಿಜಿಟಲ್ ಕಂಪ್ಯೂಟರ್ ಬಸ್’ ಒಂದನ್ನು ತಯಾರಿಸಿ ಲೋಕಾರ್ಪಣೆಗೊಳಿಸುತ್ತಿದೆ.

“ಕ್ಲಾಸ್ ಆನ್ ವ್ಹೀಲ್ಸ್(Class On Wheels)” ಎಂಬ ಹೆಸರಲ್ಲಿ ಐಷಾರಾಮಿ ಹವಾ ನಿಯಂತ್ರಿತ ಬಸ್ ಈಗಾಗಲೇ ರೆಡಿಯಾಗಿ ನಿಂತಿದೆ. ಮುಂದೆ ಈ ಬಸ್ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉಚಿತ ಸೇವೆಯೊಂದಿಗೆ ಕಾರ್ಯಾಚರಿಸಲಿದೆ. ವಾರ್ಷಿಕ ಐದು ಸಾವಿರ ಮಕ್ಕಳಿಗೆ ಕಂಪ್ಯೂಟರ್‌ನ ಮೂಲಭೂತ ಶಿಕ್ಷಣ ನೀಡುವ ಗುರಿ ಮತ್ತು ಅದಮ್ಯವಾದ ಬಯಕೆಯನ್ನು ಎಂ.ಫ್ರೆಂಡ್ಸ್ ಸಂಸ್ಥೆ ಈ ಡಿಜಿಟಲ್ ಬಸ್ ಮೂಲಕ ಹೊಂದಿದೆ.

ಈ ವಿನೂತನ ಯೋಜನೆಯ ಲೋಕಾರ್ಪಣೆ ಸಮಾರಂಭವು ನ.18ರ ಶನಿವಾರ ಬೆಳಗ್ಗೆ 8.45ಕ್ಕೆ ಮಂಗಳೂರಿನಲ್ಲಿ ಹಸಿರು ನಿಶಾನೆ ದೊರೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಪುತ್ತೂರಿನಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಎಂ ಫ್ರೆಂಡ್ಸ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಮಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಅಬೂಬಕರ್ ಕೆ., ಕಾರ್ಯದರ್ಶಿ. ಮುಹಮ್ಮದ್ ಆರಿಫ್ ಪಡುಬಿದ್ರಿ, ಟ್ರಸ್ಟಿ ಅಬೂಬಕ್ಕರ್ ಪುತ್ತು ಉಪಸ್ಥಿತರಿದ್ದರು.

ಬಸ್‌ನಲ್ಲಿ ಏನೆಲ್ಲ ಸೌಲಭ್ಯಗಳಿರಲಿವೆ?
ಕಂಪ್ಯೂಟರ್ ಬಸ್ ಅನ್ನು ಸಂಪೂರ್ಣ ಕ್ಲಾಸ್ ರೂಮ್ ಆಗಿ ಪರಿವರ್ತಿಸಲಾಗಿದೆ. ತರಗತಿಯೊಳಗೆ ಎರಡು ಎ.ಸಿ. ಅಳವಡಿಸಲಾಗಿದೆ. ಏಕಕಾಲದಲ್ಲಿ 16 ಅಥವಾ 32 ವಿದ್ಯಾರ್ಥಿಗಳು ಕಲಿಯಲು 16 ಲ್ಯಾಪ್ ಟಾಪ್ ಕಂಪ್ಯೂಟರ್, ಕೂರಲು 16 ರಿವೋಲ್ವಿಂಗ್ ಕುರ್ಚಿಗಳು, 16 ಮಡಚುವ ವ್ಯವಸ್ಥೆ ಇರುವ ಡೆಸ್ಕ್‌ಗಳನ್ನು ಅಳವಡಿಸಲಾಗಿದೆ. ಶಿಕ್ಷಕರಿಗೆ ಪ್ರತ್ಯೇಕ ಕಂಪ್ಯೂಟರ್, ಕುರ್ಚಿ, ಡೆಸ್ಕ್ ನಿರ್ಮಿಸಲಾಗಿದೆ.

ಕಾನ್ಫರೆನ್ಸ್‌ಗಾಗಿ ಪ್ರಾಜೆಕ್ಟರ್, ಟಿ.ವಿ., ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆ, ಮೈಕ್ ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಎಲ್ಇಡಿ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ.

ಅಂತರ್ಜಾಲದ ಕಲಿಯುವಿಕೆಗಾಗಿ ವೈ-ಫೈ, ಇಂಟರ್ನೆಟ್ ಅನ್ನೂ ಒಳಗೊಂಡಿದೆ. ಅವಶ್ಯಕತೆಗಾಗಿ ಕಲರ್ ಪ್ರಿಂಟರ್, ಫೋಟೋ ಕಾಪಿ ಮತ್ತು ಸ್ಕ್ಯಾನರ್ ಇದೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಾಜರಾತಿಗೆ ಬಸ್ ಬಾಗಿಲ ಬಳಿ ಅತ್ಯಾಧುನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನೂ ಸ್ಥಾಪಿಸಲಾಗಿದೆ.

ಇತರ ಸಮಯಗಳಲ್ಲಿ 25 ಜನರ ಸಭೆ ಸಮಾರಂಭಗಳನ್ನು ಬಸ್‌ನೊಳಗೆ ಎಲ್ಲಿ ಬೇಕಾದರೂ ಮಾಡುವಂತಹ ಮಲ್ಟಿ ಸ್ಪೆಷಾಲಿಟಿ ವ್ಯವಸ್ಥೆ ಇದೆ. ತರಗತಿ ಒಳ ಹೋಗಲು ಮೂರು ಪ್ರವೇಶ ದ್ವಾರಗಳಿವೆ. ಮಕ್ಕಳ ಸುರಕ್ಷತೆ ಗಾಗಿ ಸಿ.ಸಿ.ಟಿ.ವಿ ಕ್ಯಾಮರಾ ಕೂಡಾ ಅಳವಡಿಸಲಾಗಿದೆ.

ಸ್ವಂತ ವಿದ್ಯುತ್ ಸಂಚಲನಕ್ಕಾಗಿ 6.8 ಕೆ.ವಿ.ಯ ಅತ್ಯಾಧುನಿಕ ಜನರೇಟರ್, ಹೊರಗಿನ ವಿದ್ಯುತ್ ಸಂಪರ್ಕದ ಸೌಲಭ್ಯದ ಪಾಯಿಂಟ್, ಕೈ ಮುಖ ತೊಳೆಯಲು ಬಸ್ ಟಾಪಲ್ಲಿ 200 ಲೀಟರಿನ ನೀರಿನ ಟ್ಯಾಂಕ್, ವಾಶ್ ಬೇಸಿನ್, 40 ಲೀಟರಿನ ಕುಡಿಯುವ ನೀರಿನ ಸೌಲಭ್ಯ, ಎರಡು ಎಸಿ ಔಟ್ ಡೋರ್ ಯೂನಿಟ್, ಬ್ಯಾಟರಿ ಬಾಕ್ಸ್, ಟೂಲ್ ಬಾಕ್ಸ್, ಪವರ್ ಪಾಯಿಂಟ್ ಮೊದಲಾದವನ್ನು ಬಸ್ ಹೊಂದಿದೆ.

ಬಸ್ ಕನಸು ಕಂಡು ಸಾಕ್ಷಾತ್ಕರಿಸಿದ್ದು ಹೇಗೆ?
ಹನೀಫ್ ಪುತ್ತೂರು ಅವರು ಸದ್ಯ ದುಬೈಯ ಮಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯದಲ್ಲಿ ಕ್ಲೌಡ್ & ಇನ್ಫ್ರಾ ಸ್ಟ್ರೆಕ್ಚರ್ ಮೆನೇಜರ್ ಆಗಿ ಉದ್ಯೋಗದಲ್ಲಿದ್ದು, ಯುಎಇ ಗೋಲ್ಡನ್ ವೀಸಾ ಹೊಂದಿದ್ದಾರೆ. ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯುಎಇಯ ಅಬುಧಾಬಿಯಲ್ಲಿನ ಸಂಸ್ಥೆಯೊಂದು ಹಮ್ಮಿಕೊಂಡಿರುವ ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಆರ್ಯಾಪು ಗ್ರಾಮದ ಬಲ್ಲೇರಿ ಅಬ್ಬಾಸ್ ಹಾಜಿ ಅವರ ಪುತ್ರ ಮಹಮ್ಮದ್ ಹನೀಫ್ ಅವರು ವಿಜೇತರಾಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಸರು ತಂದಿದ್ದರು.

ಹನೀಫ್ ಪುತ್ತೂರು

ಹನೀಫ್ ಅವರು ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಂದು ಮೊಬೈಲ್ ಬಸ್ ನ್ನು ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟರು.

ಈ ಯೋಜನೆಯನ್ನು ಮೆಚ್ಚಿ ಲಕ್ಷಾಂತರ ಜನರು ಆನ್ಲೈನ್ ವೋಟ್ ಮಾಡುವ ಮೂಲಕ ಅವರನ್ನು ವಿಜೇತರನ್ನಾಗಿಸಿದ್ದರು. ಅದರಲ್ಲಿ ದೊರೆತ ಬಹುಮಾನದ ಮೊತ್ತಕ್ಕೆ ತಮ್ಮಿಂದಾಗುವ ಹಣವನ್ನು ಸೇರಿಸಿ ತಾನು ಸೇವೆಗೈಯ್ಯುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಗೆ ಆ ಮೊತ್ತ ಹಸ್ತಾಂತರಿಸಿ ಬಸ್ ಕನಸನ್ನು ಸಾಕ್ಷಾತ್ಕರಿಸಿದ್ದಾರೆ.

ಬಸ್‌ಗೆ ಒಟ್ಟು 60 ಲಕ್ಷ ರೂ. ಖರ್ಚು ಆಗಿದ್ದು, ಹೆಚ್ಚುವರಿ ಭಾಗಶಃ ಮೊತ್ತವನ್ನು ಎಂ.ಫ್ರೆಂಡ್ಸ್ ಟ್ರಸ್ಟ್ ಭರಿಸಿದೆ. ಅರವಿಂದ್ ಮೋಟಾರ್ಸ್‌ನ ಟಾಟಾ ಕಂಪೆನಿಯ ಹೀರಾ ಮಾಡೆಲಿನ ಈ ಬಸ್ ಅನ್ನು ಕಂಪ್ಯೂಟರ್ ಕ್ಲಾಸ್ ರೂಮ್ ಆಗಿ ಸುಸಜ್ಜಿತವಾಗಿ ಪರಿವರ್ತಿಸಿದವರು ಬೈಕಂಪಾಡಿಯ ರೋಡ್ರಿಕ್ಸ್ ಇಂಡಸ್ಟ್ರೀಸ್‌ನವರು.

ಈ ಬಸ್ ಜಿಲ್ಲೆಯ ಗ್ರಾಮೀಣ ವಿದ್ಯಾಸಂಸ್ಥೆಗಳಿಗೆ ತೆರಳಿ ಶಾಲಾ ಆವರಣದಲ್ಲೇ ಕಂಪ್ಯೂಟರ್ ಶಿಕ್ಷಣ ನೀಡಲಿದೆ. ಒಂದು ವಿದ್ಯಾರ್ಥಿಗೆ ಕನಿಷ್ಟ 15 ರಿಂದ 20 ತಾಸುಗಳ ತರಬೇತಿಯನ್ನು ಹಂತ ಹಂತವಾಗಿ ಕೊಡಲಿದೆ. ಒಂದು ದಿನದಲ್ಲಿ ಮೂರು ಅಥವಾ ನಾಲ್ಕು ಶಾಲೆಗಳಿಗೆ ತೆರಳಿ ತಲಾ ಒಂದರಿಂದ ಒಂದೂವರೆ ತಾಸಿನ ತರಗತಿಯನ್ನು ಬಿತ್ತರಿಸಲಿದೆ. ಇದಕ್ಕಾಗಿಯೇ ಪ್ರತ್ಯೇಕ ಪಠ್ಯಕ್ರಮವನ್ನೂ ರಚಿಸಲಾಗಿದೆ.

ಬಸ್‌ನಲ್ಲಿ ಇಬ್ಬರು ಕಂಪ್ಯೂಟರ್ ಶಿಕ್ಷಕಿಯರು, ಅನುಭವಿ ಚಾಲಕ ಮತ್ತು ನಿರ್ವಾಹಕರು ಇರುತ್ತಾರೆ. ಸರಕಾರಿ ರಜೆ ಹೊರತುಪಡಿಸಿ ಬೆಳಗ್ಗೆ 9 ರಿಂದ ಸಂಜೆ 4ರ ತನಕ ಡಿಜಿಬಸ್ ಕಾರ್ಯಾಚರಿಸಲಿದೆ. ಈ ಯೋಜನೆಗೆ ವಾರ್ಷಿಕ 10 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ.

ಡಿಜಿಬಸ್ ಯೋಜನೆಯ ಕನಸಿನ ರೂವಾರಿ ಹನೀಫ್ ಅವರು ಪ್ರಾಥಮಿಕ ಶಾಲಾ ಶಿಕ್ಷಣ ಪಡೆದ ಕುಂಜೂರು ಪಂಜ ಶಾಲೆಯಿಂದಲೇ ಈ ಡಿಜಿ ಬಸ್ ಪ್ರಾರಂಭವಾಗಲಿದ್ದು, ತಾನು ಉನ್ನತ ಹುದ್ದೆಗೇರಿದಾಗ ಕಲಿತ ಶಾಲೆಯನ್ನು ಮರೆತು ಬಿಡುವವರಿಗೆ ಇದೊಂದು ಪ್ರೇರಣಾ ಶಕ್ತಿಯಾಗಿ ಕಲಿತ ಶಾಲೆಗೂ, ಊರಿಗೂ ಹೆಮ್ಮೆಯ ಪ್ರತೀಕವಾಗಲಿದೆ.

ಎಂ.ಫ್ರೆಂಡ್ಸ್ ನ ಈ ಕಂಪ್ಯೂಟರ್ ಬಸ್ ರಾಜ್ಯಕ್ಕೆ ಹೊಸ ಯೋಜನೆಯಾಗಿದೆ. ತನ್ನ ದಶಮಾನೋತ್ಸವದ ಸವಿ ನೆನಪಿಗಾಗಿ ಈ ಶೈಕ್ಷಣಿಕ ಯೋಜನೆಯನ್ನು ಬಿಡುಗಡೆಗೊಳಿಸಿದೆ.

ಎಂ ಫ್ರೆಂಡ್ಸ್ ಸಂಸ್ಥೆಯ ಕುರಿತು ಒಂದಿಷ್ಟು
2013ರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಪ್ರಾರಂಭವಾದ ಎಂ. ಫ್ರೆಂಡ್ಸ್ ತಂಡ ಇಂದು ಕರಾವಳಿ ಭಾಗದಲ್ಲಿ ಪ್ರಸಿದ್ಧ ಸಮಾಜ ಸೇವಾ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. ಕಳೆದ 10 ವರ್ಷದಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ಹಲವಾರು ಸೇವಾ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ.

ಅನಾರೋಗ್ಯ ಪೀಡಿತರ ಸೇವೆ ಮೂಲಕ ಪ್ರಾರಂಭವಾದ ಟ್ರಸ್ಟ್‌ನ ಸೇವೆ ಜಿಲ್ಲೆಯ 8 ಕುಗ್ರಾಮಗಳನ್ನು ಸಮೀಕ್ಷೆ ಮಾಡಿ ಅಲ್ಲಿನ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸ, ಆರೋಗ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

ಅನ್ನದಾನದ ಮಹತ್ವವನ್ನು ಅರಿತು ಕಳೆದ ಆರು ವರ್ಷಗಳಿಂದ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಹವರ್ತಿಗಳಿಗೆ ದಿನನಿತ್ಯ ಸುಮಾರು 500 ಬಡ-ಅಶಕ್ತರಿಗೆ ರಾತ್ರಿಯ ಭೋಜನವನ್ನು ಉಚಿತವಾಗಿ ವಿತರಿಸುತ್ತಿದೆ. ಇದೀಗ ಕಂಪ್ಯೂಟರ್ ಡಿಜಿಟಲ್ ಬಸ್ಸಿನ ಹೊಸ ಯೋಜನೆ ಸಹಸ್ರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದು ಎಂ ಫ್ರೆಂಡ್ಸ್ ತಿಳಿಸಿದೆ.

ಈ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ಇದ್ದವರು ಕ್ಲಾಸ್ ಆನ್ ವ್ಹೀಲ್ಸ್, ಕಂಪ್ಯೂಟರ್ ಸಾಕ್ಷರತಾ ಡಿಜಿ ಬಸ್, ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅವರ ಮೊಬೈಲ್ ಸಂಖ್ಯೆ 9019111177 ಸಂಪರ್ಕಿಸಬಹುದು.