ಸಂಪ್ರದಾಯ, ಕಟ್ಟುಪಾಡುಗಳ ನಡುವೆ ಕ್ಲಿಷ್ಟವಾಗುತ್ತಿರುವ ವಿವಾಹದ ತಯಾರಿ

0
1020

ಲೇಖಕಿ: ಖದೀಜ ನುಸ್ರತ್

ವಿವಾಹಕ್ಕೆಂದು ವಸ್ತ್ರಾಭರಣ, ಮನೆಯನ್ನು ಸುಂದರಗೊಳಿಸಿ ತಯಾರಾಗುವುದು ಆಧುನಿಕ ಕಾಲದಲ್ಲಿ ಸಾಮಾನ್ಯ ರೂಢಿಯಾಗಿದೆ. ಆದರೆ ಅದರೊಂದಿಗೆ ಕೆಲವು ವಿಷಯಗಳಲ್ಲಿ ಮಾನಸಿಕವಾಗಿಯೂ ಸಿದ್ಧರಾಗುವುದು ಅಗತ್ಯವಾಗಿದೆ. ಮಾನಸಿಕವಾಗಿಯೂ, ಶಾರೀರಿಕವಾಗಿಯೂ ಕುಟುಂಬವು ಆರೋಗ್ಯಪೂರ್ಣವಾದಾಗ ಮಾತ್ರ ಸಮಾಜ ಆರೋಗ್ಯಪೂರ್ಣವಾಗುವುದು. ಕುಟುಂಬವು ಉತ್ತಮವಾಗಬೇಕಾದರೆ ಅದರ ಸದಸ್ಯರ ಮಧ್ಯೆ ಉತ್ತಮ ಸಂಬಂಧವಿರಬೇಕಾದುದು ಅಗತ್ಯ. ಕುಟುಂಬ ಬಂಧಗಳು ಶಿಥಿಳಗೊಳ್ಳುತ್ತಿರುವ ಒಂದು ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ.

ನೀವು ಕೊಡುವುದು, ಪಡೆಯುವುದು, ಹಣ ಖರ್ಚು ಮಾಡುವುದು ಮತ್ತಿತರ ಎಲ್ಲಾ ವ್ಯವಹಾರಗಳನ್ನು ಪವಿತ್ರ ಕುರ್ ಆನ್, ಪ್ರವಾದಿ ವಚನಗಳ ಆಧಾರದಲ್ಲಿಯೇ ಮಾಡಿರಿ. ಪವಿತ್ರ ಕುರ್ ಆನ್ ಹಾಗೂ ಪ್ರವಾದಿ ವಚನಗಳು ಮಾನವರ ಹಿತದೃಷ್ಟಿಯಿಂದ ನ್ಯಾಯಪೂರ್ಣವಾಗಿಯೂ, ಯುಕ್ತಿಪೂರ್ಣವಾಗಿಯೂ ಇದೆ. ಯಾವುದಾದರೂ ಸಮಸ್ಯೆ ಬಂದಾಗ ಕುರ್ ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿಯೇ ಪರಿಹರಿಸಲು ಪ್ರಯತ್ನಿಸಬೇಕು. ಯಾವಾಗಲೂ ವಾದಮಾಡುವುದರಿಂದ ಫಲವಿಲ್ಲ.

“ಸ್ತ್ರೀಯರಿಗೆ ‘ಮಹ್ರ್'(ವಿವಾಹಧನ)ವನ್ನು ಆತ್ಮ ಸಂತೋಷದಿಂದ ಪಾವತಿ ಮಾಡಿರಿ.” (ಪವಿತ್ರ ಕುರ್‌ಆನ್ 4:4)

ವಿವಾಹಕ್ಕಿಂತ ಮುಂಚೆ ವರನ ಕಡೆಯವರು ವಧುವಿನ ಪೋಷಕರೊಂದಿಗೆ ಚರ್ಚಿಸಿ ವಿವಾಹಧನವನ್ನು ನಿಶ್ಚಯಿಸಬೇಕು. ವಿವಾಹಧನವನ್ನು ವಧು ಅಥವಾ ಅವಳ ಪೋಷಕರು ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ವಿವಾಹಧನವು ಒಂದು ಹೊರೆಯಾಗದಂತೆ ಜಾಗರೂಕತೆ ವಹಿಸುವುದು ಉತ್ತಮ. ಇದರ ಹೊರತು ಇತರ ಯಾವುದೇ ಉಡುಗೊರೆಗಳಿಗೆ ಪ್ರಾಧಾನ್ಯತೆ ನೀಡಬೇಡಿರಿ. ಎಷ್ಟು ಧಾರ್ಮಿಕ ಜ್ಞಾನವಿರುವವರು ಕೂಡಾ ಈ ವಿಷಯವನ್ನು ಕಡೆಗಣಿಸುವುದು ಖೇದಕರ ವಿಷಯವಾಗಿದೆ.

ಎಲ್ಲರೂ ಇನ್ನೊಬ್ಬರ ಮನಃಸ್ಸಮಾಧಾನ ಹಾಗೂ ನೆಮ್ಮದಿಗೆ ಕಾರಣವಾಗಬೇಕು. ಇನ್ನೊಬ್ಬರಿಗೆ ತಲೆನೋವು ಹಾಗೂ ಸಮಸ್ಯೆಯನ್ನು ಸೃಷ್ಟಿಸುವವರಾಗಬಾರದು. ನಿಮ್ಮ ಕುಟುಂಬದಲ್ಲಿ ಯಾರದೇ ಗೌಪ್ಯತೆ ಹಾಗೂ ರಹಸ್ಯ ವಿಷಯಗಳನ್ನು ಹೊರಗಿನರೊಂದಿಗೆ ಹೇಳಬೇಡಿರಿ. ಎಲ್ಲರನ್ನೂ ನಿಮ್ಮ ಕುಟುಂಬದ ಭಾಗವೆಂದು ಪರಿಗಣಿಸಿ, ಎಲ್ಲರ ಅಭಿಪ್ರಾಯಗಳಿಗೆ ಗೌರವ ನೀಡಿರಿ. ಮನೆಯ ವಿಷಯದಲ್ಲಿ ಇತರರಿಗೆ ಯಾವುದೇ ಆದ್ಯತೆ ನೀಡದೆ ತಾನು ಹೇಳಿದ ಮಾತು ಕೊನೆ, ಎಲ್ಲ ತೀರ್ಮಾನಗಳನ್ನು ಒಬ್ಬರೇ ಕೈಗೊಳ್ಳುವುದಾದರೆ ಅಲ್ಲಿ ಸಮಾಧಾನ ಉಂಟಾಗಲು ಸಾಧ್ಯವಿಲ್ಲ. ಮನೆಯಲ್ಲಿ ಸಮಾನತೆಯ ಪರಿಸರವಿರಬೇಕು. ಆಪ್ತ ಸಮಾಲೋಚನೆಗೆ ಪವಿತ್ರ ಕುರ್ ಆನ್ ಬಹಳ ಪ್ರಾಮುಖ್ಯತೆ ನೀಡುತ್ತದೆ. ಆಪ್ತ ಸಮಾಲೋಚನೆಯು ಪತಿ ಪತ್ನಿಯರಿಂದ ಆರಂಭವಾಗಿ ಮಾತಾಪಿತರು, ಮಕ್ಕಳು ಹೀಗೆ ಎಲ್ಲರೊಂದಿಗೂ ಚರ್ಚಿಸಬೇಕು.

“ತಮ್ಮ ವ್ಯವಹಾರಗಳನ್ನು ಪರಸ್ಪರ ಸಮಾಲೋಚನೆಯಿಂದ ನಡೆಸುತ್ತಾರೆ.” (ಪವಿತ್ರ ಕುರ್‌ಆನ್ 42 :38)

ಟಿವಿ ಮತ್ತು ಮೊಬೈಲ್‌ಗಳ ಆಗಮನದಿಂದಾಗ ಕುಟುಂಬದ ಸದಸ್ಯರು ಪರಸ್ಪರ ಮುಖ ನೋಡಿ ಮಾತನಾಡಲು ಸಮಯವಿಲ್ಲದ ಪರಿಸ್ಥಿತಿ ಉಂಟಾಯಿತು. ಮುಖ ಮುಖ ನೋಡಿ ನಗುತ್ತಾ ಮಾತನಾಡುವುದರಿಂದ ಹೆಚ್ಚಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದು. ತಮ್ಮ ಸಂಬಂಧಿಕರೊಂದಿಗೆ ಉತ್ತಮ ಬಂಧವನ್ನಿಡುವುದು ಹೆಚ್ಚಿನವರಿಗೆ ಒಂದು ಸವಾಲಾಗಿದೆ. ಕುಟುಂಬದ ಸದಸ್ಯರ ಮಧ್ಯೆ ಸ್ವಭಾವ, ವ್ಯಕ್ತಿತ್ವ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಇನ್ನಿತರ ವಿಷಯಗಳಲ್ಲಿ ಅಭಿಪ್ರಾಯ ವ್ಯತ್ಯಾಸ ಇರುವುದು ಸಹಜ. ಅಭಿಪ್ರಾಯ ವ್ಯತ್ಯಾಸವೆಂಬುದು ತಪ್ಪಲ್ಲ. ಅದು ಅವರ ವ್ಯಕ್ತಿತ್ವದ ಸೂಚನೆಯಾಗಿರುತ್ತದೆ. ಆದರೆ ಈ ಅಭಿಪ್ರಾಯ ವ್ಯತ್ಯಾಸವನ್ನು ಗೌರವಿಸಿ ಯಾವ ರೀತಿ ವರ್ತಿಸುತ್ತೇವೆಂಬುದು ಮುಖ್ಯ ವಿಷಯವಾಗಿರುತ್ತದೆ.

ಸ್ತ್ರೀಯು ತಂದೆ, ಸಹೋದರ, ಪತಿ, ಪುತ್ರ ಹೀಗೆ ಯಾವುದಾದರೂ ಪುರುಷನ ಆಶ್ರಯ ಬಯಸುವುದು ನೈಸರ್ಗಿಕವಾಗಿರುತ್ತದೆ. ಆದರೆ ನೀವು ಯಾರ ಮೇಲೆಯೂ ಅತಿಯಾದ ನಿರೀಕ್ಷೆ, ಭರವಸೆಗಳನ್ನಿಡಬೇಡಿರಿ. ನಿಮ್ಮ ನಿರೀಕ್ಷೆ, ಭರವಸೆಗಳೆಲ್ಲವೂ ಅಲ್ಲಾಹನ ಮೇಲಿರಲಿ. ಜಗತ್ತಿನಲ್ಲಿ ಮನುಷ್ಯನ ಎಲ್ಲ ಆಸೆ, ಆಕಾಂಕ್ಷೆ, ಬೇಡಿಕೆಗಳು ಈಡೇರುವುದಿಲ್ಲ. ಜಗತ್ತು ಹೀಗೆಯೇ. ಮನುಷ್ಯನ ಎಲ್ಲ ಬೇಡಿಕೆಗಳು ಈಡೇರಿದರೆ ಅವನನ್ನು ನಿಯಂತ್ರಿಸಲು ಅಸಾಧ್ಯ. ಎಲ್ಲರೂ ಪರಸ್ಪರರ ಕೋಣೆಯನ್ನು ಪ್ರವೇಶಿಸುವಾಗ ಅನುಮತಿ ಪಡೆಯಬೇಕು. ಕುಟುಂಬದ ಎಲ್ಲ ಸಂಬಂಧಿಕರ ಬಗ್ಗೆ ಸಕಾರಾತ್ಮ ಭಾವನೆಯನ್ನಿಟ್ಟುಕೊಳ್ಳಬೇಕು. ಇನ್ನೊಬ್ಬರಲ್ಲಿ ಕುಂದುಕೊರತೆಯನ್ನು ಹುಡುಕಲು ಹೋಗಬೇಡಿರಿ. ಕುಟುಂಬದಲ್ಲಿ ಎಲ್ಲ ಗುರಿ ಒಂದೇ. ಪರಲೋಕದ ವಿಜಯ.

“ಪುಣ್ಯ ಹಾಗೂ ದೇವಭಯದ ಕಾರ್ಯಗಳಲ್ಲಿ ಎಲ್ಲರ ಜೊತೆ ಸಹಕರಿಸಿರಿ ಮತ್ತು ಪಾಪ ಹಾಗೂ ಅತಿರೇಕ ಕಾರ್ಯಗಲ್ಲಿ ಯಾರೊಂದಿಗೂ ಸಹಕರಿಸಬೇಡಿರಿ. ಅಲ್ಲಾಹನನ್ನು ಭಯಪಡಿರಿ.” (ಪವಿತ್ರ ಕುರ್‌ಆನ್ 5: 2)

“ಸತ್ಯವಿಶ್ವಾಸಿಗಳೇ, ಮಾನವರೂ ಶಿಲೆಗಳೂ ಇಂಧನವಾಗಲಿರುವ ಅಗ್ನಿಯಿಂದ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ರಕ್ಷಿಸಿಕೊಳ್ಳಿರಿ.” (ಪವಿತ್ರ ಕುರ್‌ಆನ್ 66: 6)

ಹೆಚ್ಚಿನ ತಾಯಿಯಂದರಲ್ಲಿ ಮಗನ ವಿವಾಹದೊಂದಿಗೆ ಮಗನು ನಷ್ಟವಾಗುತ್ತಾನೆಂಬ ತಪ್ಪು ಕಲ್ಪನೆಯ ಮಾನಸಿಕ ಮನೋಭಾವ ಹಿಂದಿನಿಂದಲೇ ಇದೆ. ಮಗನ ವಿವಾಹದೊಂದಿಗೆ ಮಗನು ನಷ್ಟವಾಗುವುದಿಲ್ಲ. ಅವನು ಜೀವನದ ಇನ್ನೊಂದು ಹೆಜ್ಜೆಗೆ ಪ್ರವೇಶಿಸುತ್ತಾನೆ ಅಷ್ಟೆ. ಮಗನ ವಿವಾಹ, ಅವನು ಪತ್ನಿಯೊಂದಿಗೆ ಸಂತೋಷವಾಗಿರುವುದರಲ್ಲಿ,  ಮೊಮ್ಮಕ್ಕಳಾಗುವುದರಲ್ಲಿ ತಾಯಿ ಸಂತೋಷ ಪಡಬೇಕು. ಮಗನು ವಿವಾಹದ ನಂತರ ಶೀಘ್ರದಲ್ಲೇ ಅಥವಾ ಕೆಲವು ಸಮಯದ ನಂತರ ಬೇರೆ ಮನೆ ಮಾಡಿ ವಾಸಿಸಲು ಆರಂಭಿಸುವನು ಎಂದು ತಾಯಿ ಮಾನಸಿಕವಾಗಿ ತಯಾರಾಗಿರಬೇಕು. ಜಗತ್ತು ಮುಂದುವರೆಯುತ್ತಾ ಬಂದಿರುವುದು ಹೀಗೆಯೇ. ನೀವು ಕೂಡ ಒಂದು ಕಾಲದಲ್ಲಿ ಬೇರೆ ಮನೆ ಮಾಡಿ ವಾಸಿಸಲು ಆರಂಭಿಸಿದ್ದೀರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ತಾಯಿಯು ಮಗನ ಮನೆಯಲ್ಲಿ ಹೋಗಿ ವಾಸಿಸಬಹುದು. ದೂರವಿರುವಾಗಲೂ ತನ್ನ ಮೂಲಭೂತ ಬೇಡಿಕೆಗಳನ್ನು ಪೂರೈಸಲು ಆದೇಶಿಸಬಹುದು. ಎಲ್ಲಾ ಹೆತ್ತವರು ತಮ್ಮ ಮಕ್ಕಳ ವಿದ್ಯಾಭ್ಯಾಸ, ವ್ಯಾಪಾರ, ಉದ್ಯೋಗದಲ್ಲಿ ಯಶಸ್ಸನ್ನು ಬಯಸುತ್ತಾರೆ. ಅದೇ ರೀತಿ ಮಕ್ಕಳ ವೈವಾಹಿಕ ಜೀವನದಲ್ಲಿಯೂ ಅವರ ಯಶಸ್ಸನ್ನು ಆಗ್ರಹಿಸಬೇಕು ಮತ್ತು ಅದಕ್ಕಾಗಿ ಪ್ರಾರ್ಥಿಸಬೇಕು. ಅದಕ್ಕೆ ಅವಕಾಶ, ಸೌಲಭ್ಯವನ್ನು ಮಾಡಿಕೊಡಬೇಕು. ವಿವಾಹದ ನಂತರ ಅವರಿಗೆ ಜವಾಬ್ದಾರಿ ಹೆಚ್ಚುವುದರಿಂದ ಮೊದಲಿನಂತೆ ಖರ್ಚು ಮಾಡಲು ಸಾಧ್ಯವಿಲ್ಲವೆಂದು ಅರ್ಥಮಾಡಿಕೊಳ್ಳಬೇಕು.

ವಿವಾಹ ಮತ್ತು ಮತ್ತಿತರ ವಿಷಯಗಳಲ್ಲಿ ನಾವೇ ಉಂಟು ಮಾಡಿದ ಹಲವಾರು ಸಂಪ್ರದಾಯ, ಕಟ್ಟುಪಾಡುಗಳಿಂದ ಸಮಸ್ಯೆಗಳನ್ನೆದುರಿಸುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ನಿಮ್ಮ ಮಕ್ಕಳು ಅಥವಾ ಸೊಸೆ ಈ ಸಂಪ್ರದಾಯಗಳನ್ನು ಎದುರಿಸಿದರೆ ಅವರನ್ನು ಪ್ರೋತ್ಸಾಹಿಸಿ. ಅವರು ಸಮಾಜದಲ್ಲಿ ಬದಲಾವಣೆಗಳನ್ನು ಮಾಡುವ ಮತ್ತು ನಾವೇ ಸೃಷ್ಟಿಸಿರುವ ಸಮಸ್ಯೆಗಳನ್ನು ಪರಿಹರಿಸುವ ಅಸಾಮಾನ್ಯ ವ್ಯಕ್ತಿಗಳಾಗಿರುತ್ತಾರೆ.