ಇಂಥ ಈದ್ ಮತ್ತೆ ಮತ್ತೆ ಬರುತ್ತಿರಲಿ

0
404

ಸನ್ಮಾರ್ಗ ಸಂಪಾದಕೀಯ

ಉಪವಾಸ ಮತ್ತು ಈದ್; ಈ ಎರಡನ್ನೂ ಕಣ್ಣೆದುರು ಹರಡಿಕೊಂಡು ಸುಮ್ಮನೆ ಒಮ್ಮೆ ಅವಲೋಕನ ನಡೆಸಿ. ಇವೆರಡರ ನಡುವೆ ಬಹಳ ದೊಡ್ಡ ವ್ಯತ್ಯಾಸ ಕಾಣಿಸುತ್ತದೆ. ಮುಂಜಾನೆಯಿಂದ ಮುಸ್ಸಂಜೆಯವರೆಗಿನ ಉಪವಾಸದ ಅವಧಿಯಲ್ಲಿ ಯಾರಿಗೂ ರಿಯಾಯಿತಿ ಇಲ್ಲ. ಉಪವಾಸದ ನಿಯಮಗಳಲ್ಲೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲವೂ ಏಕಪ್ರಕಾರ. ಉಪವಾಸದ ಈ ಅವಧಿಯಲ್ಲಿ ಮಹಿಳೆಯರಿಗೊಂದು ನಿಯಮ, ಪುರುಷರಿಗೊಂದು ನಿಯಮ, ವೃದ್ಧರಿಗೊಂದು ನಿಯಮ ಎಂಬ ಭೇದ ಇಲ್ಲ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಪುರುಷರೂ ನೀರು ಕುಡಿಯಬಾರದು. ಮಹಿಳೆಯರೂ ನೀರು ಕುಡಿಯಬಾರದು. ವೃದ್ಧರೂ, ಯುವಕ, ಯುವತಿಯರೂ ಸಹಿತ ಯಾರೆಲ್ಲ ಉಪವಾಸ ಆಚರಿಸುತ್ತಾರೋ ಅವರೆಲ್ಲರೂ ಒಂದೇ ನಿಯಮವನ್ನು ಪಾಲಿಸಬೇಕು.

ವೃದ್ಧರೆಂಬ ನೆಲೆಯಲ್ಲಿ ಮಧ್ಯಾಹ್ನದ ವರೆಗೆ ಉಪವಾಸ ಮಾಡಿದರೆ ಸಾಕು ಎಂಬ ರಿಯಾಯಿತಿ ಇಲ್ಲ. ಎಲ್ಲರಿಗೂ ನಿಯಮ ಒಂದೇ. ಶ್ರೀಮಂತ, ಬಡವ, ಭಾರತೀಯ, ಪಾಕಿಸ್ತಾನಿ; ಪಶ್ಚಿಮದವ, ಪೂರ್ವದವ; ಮೌಲಾನ, ಸಾಮಾನ್ಯ ಇತ್ಯಾದಿ ಎಲ್ಲರೂ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದೇ ನಿಯಮದಡಿ ಒಗ್ಗೂಡಬೇಕು. ನಾವೆಲ್ಲರೂ ಸಮಾನ ಮತ್ತು ಏಕ ನಿಯಮಕ್ಕೆ ಅಧೀನರು ಎಂಬುದನ್ನು ಸಾರಬೇಕು. ಆದರೆ,

ಈದ್ ಇದಕ್ಕಿಂತ ತೀರಾ ಭಿನ್ನ. ಅದು ಭಿನ್ನತೆಯಲ್ಲಿ ಏಕತೆಯನ್ನು ಸಾರುತ್ತದೆ. 5 ಮಂದಿಯಿರುವ ಒಂದು ಮನೆಯಲ್ಲಿ ಐದು ಬಗೆಯ ಈದ್ ಸಂಭ್ರಮವಿರುತ್ತದೆ. ಓರ್ವರ ಬಟ್ಟೆಯ ಬಣ್ಣದಂತೆ ಇನ್ನೊಬ್ಬರದ್ದಿರುವುದಿಲ್ಲ. ಬಟ್ಟೆಯ ವಿನ್ಯಾಸದಲ್ಲೂ ಈ ವ್ಯತ್ಯಾಸ ಇರುತ್ತದೆ. ಈದ್‌ನ ದಿನ ಮಸೀದಿಯಲ್ಲಿ ಎಲ್ಲರೂ ಒಟ್ಟಿಗೆ ಸೇರುವರಾದರೂ ಎಲ್ಲರ ಭಾವ-ಭಂಗಿಗಳೂ ವಿಭಿನ್ನವಾಗಿರುತ್ತದೆ. ಕೆಲವರ ಆಲಿಂಗನ ದೀರ್ಘವಾಗಿರುತ್ತದೆ. ಕೆಲವರದು ಹೃಸ್ವ. ಟೋಪಿ ಧರಿಸಿದವರೂ ಧರಿಸದವರೂ ಇರುತ್ತಾರೆ. ಉಪವಾಸದ ದಿನಗಳಲ್ಲಿ ಮಸೀದಿಯಲ್ಲಿ ದೀರ್ಘ ಪ್ರಾರ್ಥನೆ ಮಾಡುವುದು ಸಾಮಾನ್ಯವಾದರೆ ಈದ್ ನಮಾಝï‌ನ ಬಳಿಕ ಅದಕ್ಕೆ ತದ್ವಿರುದ್ಧ ಸನ್ನಿವೇಶ ಇರುತ್ತದೆ. ಖುಷಿ, ನಗು, ಕುಶಲೋಪರಿ ಇತ್ಯಾದಿಗಳಿಂದ ಮಸೀದಿ ನಳನಳಿಸುತ್ತದೆ. ಇದರ ಜೊತೆಗೇ ಉಪವಾಸದ ನಿಯಮಗಳಲ್ಲಿ ಇರುವ ಶಿಸ್ತು ಈದ್‌ನ ಸಂಭ್ರಮಕ್ಕೆ ಇರುವುದಿಲ್ಲ. ಈದ್ ನಮಾಝ್‌ ಕಡ್ಡಾಯ ಅಲ್ಲ. ಈದ್ ಖುತ್ಬಾ ಕಡ್ಡಾಯ ಅಲ್ಲ. ಮಸೀದಿಯಲ್ಲಿ ಒಟ್ಟು ಸೇರದಿದ್ದರೆ ವ್ಯಕ್ತಿ ತಪ್ಪಿತಸ್ಥರಾಗುವುದಿಲ್ಲ. ಅಂದರೆ,

ಉಪವಾಸದ ನಿಯಮಗಳು ಏಕತೆಯ ಕಟು ತರಬೇತಿಯನ್ನು ನೀಡಿದರೆ ಈದ್, ವಿಭಿನ್ನತೆಯಲ್ಲಿ ಏಕತೆಯನ್ನು ಕಲಿಸುತ್ತದೆ. ಈದ್ ಎಂಬುದು ಬಹುತ್ವದ ಸಂಕೇತ. ವಿವಿಧ ಮನಸ್ಥಿತಿ, ವಿವಿಧ ಅಭಿರುಚಿ, ವಿವಿಧ ದೃಷ್ಟಿಕೋನ, ವಿವಿಧ ಆಸಕ್ತಿಗಳನ್ನು ಗೌರವಿಸುವುದಕ್ಕೆ ಮತ್ತು ಅವುಗಳ ಅಭಿವ್ಯಕ್ತಿಗೆ ಮುಕ್ತ ಅವಕಾಶವನ್ನು ಒದಗಿಸುವುದಕ್ಕೆ ಈದ್ ಕರೆ ಕೊಡುತ್ತದೆ. ಈದ್‌ನ ದಿನದಂದು ಖರ್ಜೂರ ಮತ್ತು ನೀರನ್ನು ಸೇವಿಸಿ ಮನೆಯಿಂದ ಮಸೀದಿಗೆ ತೆರಳುವ ಪ್ರವಾದಿಯವರು(ಸ) ಬೇರೆ ದಾರಿಯಾಗಿ ಮನೆಗೆ ಮರಳುತ್ತಿದ್ದರು. ಅಂದರೆ ಬೆಳಗ್ಗಿನ ಖರ್ಜೂರ ಮತ್ತು ನೀರಿನೊಂದಿಗೆ ಉಪವಾಸದ ಏಕಪ್ರಕಾರ ನಿಯಮ ಕೊನೆಗೊಳ್ಳುತ್ತದೆ. ಆ ಬಳಿಕದ್ದು ವಿಭಿನ್ನ ಹಾದಿ. ಹೋದ ದಾರಿಯಲ್ಲಿ ಮರಳುವುದು ಉಪವಾಸವಾದರೆ, ಹೋಗುವ ಮತ್ತು ಮರಳುವ ದಾರಿಗಳು ವಿಭಿನ್ನವಾಗುವುದು ಈದ್. ಈ ಎರಡೂ ಗುಣಗಳು ಮುಸ್ಲಿಮರಲ್ಲಿ ಇರಬೇಕು ಎಂಬುದನ್ನು ಉಪವಾಸ ಮತ್ತು ಈದ್‌ಗಳು ಸೂಚಿಸುತ್ತವೆ.

ಉಪವಾಸದ ದಿನಗಳಲ್ಲಿ ಕಠಿಣ ನಿಯಮಗಳನ್ನು ಪಾಲಿಸುತ್ತಾ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾ ಹೇಗೆ ಬದುಕಿದ್ದೇವೋ ಇವುಗಳ ಪರೀಕ್ಷೆಯ ದಿನ ಈದ್‌ನಿಂದ ಪ್ರಾರಂಭವಾಗುತ್ತದೆ. ಶವ್ವಾಲ್‌ನಿಂದ ಮುಂದಿನ ಶಅಬಾನ್ ವರೆಗೆ ಕಡ್ಡಾಯ ಉಪವಾಸ ಇರುವುದಿಲ್ಲ. ಈ ಉಪವಾಸ ರಹಿತ 11 ತಿಂಗಳಲ್ಲಿ ಮುಸ್ಲಿಮರು ಹೇಗಿರುತ್ತಾರೆ ಎಂಬುದನ್ನು ಈದ್ ವೀಕ್ಷಿಸುತ್ತಿರುತ್ತದೆ. ರಮಝಾನ್‌ನಲ್ಲಿ ಅಳವಡಿಸಲಾದ ಮೌಲ್ಯಗಳನ್ನು ಯಾರೆಲ್ಲ ಶವ್ವಾಲ್‌ನಿಂದ ಶಅಬಾನ್‌ವರೆಗಿನ 11 ತಿಂಗಳಲ್ಲೂ ಮುಂದುವರಿಸುತ್ತಾರೋ ಅವರಿಗೆ ಪ್ರತಿದಿನವೂ ಈದ್ ಆಗಿರುತ್ತದೆ. ಅವರು ಶವ್ವಾಲ್ ಪ್ರಥಮ ದಿನದಂದು ಖರ್ಜೂರ ತಿಂದು ನೀರು ಕುಡಿದು ಮಸೀದಿಯತ್ತ ನಡೆದ ಪ್ರವಾದಿಯನ್ನು(ಸ) ನಿಜಾರ್ಥದಲ್ಲಿ ಅರ್ಥ ಮಾಡಿಕೊಂಡ ಅನುಯಾಯಿಗಳಾಗುತ್ತಾರೆ.

ಈ ಕಾರಣಕ್ಕಾಗಿ ಈದ್ ಮತ್ತೆ ಮತ್ತೆ ಬರುತ್ತಿರಲಿ.