ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಹೊತ್ತಿ ಉರಿಯುತ್ತಿರುವ ಬೆನ್ನಲ್ಲೇ, ಭಾರತದ ಪ್ರಮುಖ ಸುದ್ದಿ ಸಂಸ್ಥೆ NDTVಯ ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ದೊಡ್ಡ ರಾಜತಾಂತ್ರಿಕ ಮತ್ತು ಪತ್ರಿಕೋದ್ಯಮ ಚರ್ಚೆಗೆ ನಾಂದಿ ಹಾಡಿದೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗಳು ನಡೆಯುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ, ಆದಿತ್ಯ ರಾಜ್ ಕೌಲ್ ಅವರು ಇರಾನ್ ಸರ್ಕಾರವನ್ನು “ಭಯೋತ್ಪಾದಕ ಆಡಳಿತ” (Terrorist Regime) ಎಂದು ಎಕ್ಸ್ (X) ನಲ್ಲಿ ಬಣ್ಣಿಸಿದ್ದರು. ಭಾರತವು ಇರಾನ್ ಜೊತೆಗೆ ಸುದೀರ್ಘ ರಾಜತಾಂತ್ರಿಕ ಸಂಬಂಧವನ್ನು ಹೊಂದಿರುವಾಗ, ಮುಖ್ಯವಾಹಿನಿಯ ಪತ್ರಕರ್ತರೊಬ್ಬರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು.
ರಾಜತಾಂತ್ರಿಕ ಶಿಷ್ಟಾಚಾರದ ಉಲ್ಲಂಘನೆ: ಲೇಖಕ ಸಲ್ಮಾನ್ ಅನೀಸ್ ಸೋಝ್ ಸೇರಿದಂತೆ ಹಲವು ಗಣ್ಯರು ಈ ನಡೆಯನ್ನು ಖಂಡಿಸಿದ್ದಾರೆ. “ಭಾರತವು ಸ್ನೇಹ ಸಂಬಂಧ ಹೊಂದಿರುವ ದೇಶದ ಬಗ್ಗೆ ಇಂತಹ ಪದಬಳಕೆ ಆಘಾತಕಾರಿ. ಪತ್ರಕರ್ತರು ವರದಿಗಾರರಾಗಿರಬೇಕೇ ಹೊರತು ಒಂದು ಪಕ್ಷದ ವಕ್ತಾರರಾಗಬಾರದು” ಎಂದು ಸೋಝ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕ ಪತ್ರಕರ್ತರು ಮತ್ತು ನೆಟ್ಟಿಗರು, ಇದು “ಪತ್ರಿಕೋದ್ಯಮವಲ್ಲ, ಬದಲಾಗಿ ಒಂದು ದೇಶದ ಪರವಾಗಿ ನಡೆಸುತ್ತಿರುವ ಪ್ರಚಾರ” ಎಂದು ಟೀಕಿಸಿದ್ದಾರೆ. ವರದಿಗಾರಿಕೆ ಮತ್ತು ರಾಜಕೀಯ ವಕಾಲತ್ತಿನ ನಡುವಿನ ಗೆರೆಯನ್ನು ಸಂಪಾದಕರು ಮರೆತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವ್ಯಾಪಕ ಟೀಕೆ ಮತ್ತು ಸ್ಕ್ರೀನ್ ಶಾಟ್ಗಳು ವೈರಲ್ ಆದ ಬೆನ್ನಲ್ಲೇ ಆದಿತ್ಯ ರಾಜ್ ಕೌಲ್ ತಮ್ಮ ವಿವಾದಾತ್ಮಕ ಪೋಸ್ಟ್ ಅನ್ನು ಅಳಿಸಿಹಾಕಿದ್ದಾರೆ.
ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ‘Karvaan India’, ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಮತ್ತು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ. ಇಂತಹ ನಿರೂಪಣೆಗಳ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡುವಂತೆ ಕೋರಿದೆ.













