ರೈಹಾನ್ ವಿ.ಕೆ ಸಚೇರಿಪೇಟೆ
ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಅದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ವಿಷಯ. ದೇಶ ಹತ್ತು ಹಲವು ಚಿಕ್ಕ ದೊಡ್ಡ ರಾಜ್ಯಗಳಲ್ಲಿ ಹಂಚಿಹೋಗಿತ್ತು. ಕಟ್ಟ ಕಡೆಗೆ ಬ್ರಿಟಿಷರು ವ್ಯಾಪಾರಕ್ಕಾಗಿ ಬಂದು ಇಡೀ ದೇಶವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡರು. ಅವರ ಅಕ್ರಮ, ದೌರ್ಜನ್ಯ, ಹಿಂಸೆ, ಶೋಷಣೆ, ಅನ್ಯಾಯದ ವಿರುದ್ಧ ಭಾರತೀಯರೆಲ್ಲರೂ ಒಟ್ಟಾಗಿ ಸಂಘಟಿತ ಹೋರಾಟಕ್ಕೆ ಅಣಿಯಾದರು. ಸುಮಾರು ಎರಡು ಶತಮಾನದ ಹೋರಾಟದ ನಂತರ ಬ್ರಿಟಿಷರು ತೊಲಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಅಂದಿನಿಂದ ದೇಶವನ್ನು ಭಾರತೀಯರೇ ಆಳುತ್ತಿದ್ದಾರೆ. ಬಹಳ ಯೋಜನೆಯನ್ನು ಹಾಕಿಕೊಂಡು ಯೋಜನಾಬದ್ಧವಾಗಿ ಪ್ರಗತಿಯತ್ತ ಕೊಂಡು ಹೋಗುವುದರಲ್ಲಿ ಯಶಸ್ಸನ್ನು ಗಳಿಸಿದೆವು.
ನಮ್ಮದು ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ನಮ್ಮ ದೇಶದ ಅತಿ ದೊಡ್ಡ ವೈಶಿಷ್ಟ್ಯವು ವಿವಿಧತೆಯಲ್ಲಿ ಏಕತೆಯಾಗಿದೆ. ಲೋಕದ ಎಲ್ಲ ಪ್ರಧಾನ ಮತ-ಧರ್ಮಗಳ ಅನುಯಾಯಿಗಳು ಇಲ್ಲಿದ್ದಾರೆ. ನಮ್ಮ ದೇಶದಲ್ಲಿ ಸುಮಾರು 1700 ಭಾಷೆಗಳಿವೆ. 130 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಸುಮಾರು 6000 ಜಾತಿಗಳಿವೆ. ಲೋಕದ ಪ್ರಧಾನ ಜನಾಂಗೀಯ ವರ್ಗಗಳಲ್ಲಿ ಆರು ವರ್ಗಗಳ ಜನರು ಇಲ್ಲಿದ್ದಾರೆ.
ಈ ರೀತಿ ವೈವಿಧ್ಯತೆಗಳಿದ್ದರೂ ಈ ದೇಶದ ಜನತೆ ಶತ ಶತಮಾನಗಳಿಂದ ಶಾಂತಿ, ಸಮಾಧಾನದಿಂದ ಬದುಕುತ್ತಿದ್ದಾರೆ ಎಂಬುದು ಲೋಕದ ಹೆಚ್ಚಿನವರಿಗೆ ವಿಚಿತ್ರವಾಗಿ ತೋರುತ್ತದೆ.
ಅತಿಥಿ ದೇವೋಭವ ನಮ್ಮ ದೇಶದ ಸಂಸ್ಕೃತಿ. ವಸುದೃವ ಕುಟುಂಬ ಎನ್ನುವುದು ನಮ್ಮ ದೇಶದ ಹೆಮ್ಮೆ. ಆಹಾರ ಉಡುಗೆ ತೊಡುಗೆಗಳಲ್ಲಿ ನಮ್ಮ ದೇಶದ ಸಂಸ್ಕೃತಿ ಮಾದರಿಯೋಗ್ಯವೆನಿಸಿದೆ. ನಮ್ಮ ದೇಶವು ನೈಸರ್ಗಿಕವಾಗಿ ಸಂಪದ್ಭರಿತ ರಾಷ್ಟ. ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಯಲ್ಲಿ ನಾವೇನು ಕಮ್ಮಿ ಇಲ್ಲ.
ಅದೆಷ್ಟೋ ಕವಿಗಳು ನಮ್ಮ ದೇಶದ ಭಾವೈಕ್ಯತೆಯನ್ನು ಕೊಂಡಾಡಿ ಅದೆಷ್ಟೋ ಕವಿತೆಗಳನ್ನು ರಚಿಸಿದರು. ಸಾರೇ ಜಹಾನ್ ಸೆ ಅಚ್ಛಾ ಎಂದು ಹೊಗಳಿ ಹಾಡಿದರು. ಈಶ್ವರ್ ಅಲ್ಲಾಹ್ ತೇರೇ ನಾಮ್…..ಎಂಬ ಭಾವೈಕ್ಯತೆಯನ್ನು ಈಗಲೂ ಜನ ಮೆಚ್ಚುತ್ತಿದ್ದಾರೆ. ಸುಂದರವಾದ ತೋಟದ ವಿವಿಧ ಬಣ್ಣದ ಪುಷ್ಪಗಳಂತೆ ಅರಳಿ ಕಂಗೊಳಿಸಿದ ಉತ್ಕೃಷ್ಟವಾದ ಚರಿತ್ರೆ ಪರಂಪರೆ ನಮ್ಮದು.
ಪ್ರಜೆಗಳ ಹಿತವನ್ನು ಬಯಸುವ ಉತ್ಕೃಷ್ಟ ಸಂವಿಧಾನ ನಮಗಿದೆ.ನಮಗೆ ಬೇಕೆನಿಸುವ ನಾಯಕನನ್ನು ನಮಗಾಗಿ ಆರಿಸುವಂತಹ ಹಕ್ಕು ನಮಗಿದೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಮ್ಮೆ ಪಡುವಂತಹ ಉದಾತ್ತ ಮೌಲ್ಯಗಳನ್ನೂ ಕಾಪಾಡಿಕೊಂಡು ಬಂದಂತಹ ದೇಶ.
ಆದರೆ, ಬರಬರುತ್ತಾ ಇತ್ತೀಚಿನ ದಶಕಗಳಲ್ಲಿ ಯಾಕೋ ನಾವು ಹಿನ್ನಡೆಗೆ ಸಾಗುತ್ತಿದ್ದೇವೆ ಅನಿಸುತ್ತಿದೆ. ನೈತಿಕ ಅಧಃಪತನ ಎತ್ತಿ ತೋರುತ್ತಿದೆ. ಮಾನವೀಯ ಮೌಲ್ಯಗಳು ಜೀವಂತವಾಗಿ ಹೂಳಲ್ಪಡ್ತಾ ಇದೆ.ರಾಜಕೀಯ ಭ್ರಷ್ಟಾಚಾರ ದಿನೇ ದಿನೇ ಗೆದ್ದಲಿನಂತೆ ಒಳಗಿಂದೊಳಗೆ ಕೊರೆಯುತ್ತಿದೆ. ಬಡತನ ನಿರುದ್ಯೋಗ, ಬಡ್ಡಿ, ಜೂಜು, ನಶೆ, ಶರಾಬು ರಾರಾಜಿಸುತ್ತಿವೆ. ಶರಾಬಿಗಾಗಿ ಬಹಳ ಮಾನ್ಯತೆಯಿಂದ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಜನರ ಸಮಸ್ಯೆ ಗೋಳನ್ನು ಯಾರು ಚರ್ಚಿಸಬೇಕಿತ್ತೋ ಅವರು ಧಾರ್ಮಿಕ ವಿಷಯಗಳ ಬಗ್ಗೆ ಅನಗತ್ಯ ಚರ್ಚೆಯನ್ನು ತಂದು ಜನರ ಮಧ್ಯೆ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಕೋಮು ವಿಷವನ್ನು ಜನರಿಗೆ ಕುಡಿಸಿ ಅನ್ಯಾಯ ಅಕ್ರಮ ದರೋಡೆ ಹೆಚ್ಚುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಭಾವನಾತ್ಮಕ ವಿಷಯಗಳನ್ನು ತಂದು ಹಾಕಿ ಪ್ರಜ್ಞಾವಂತ ಪ್ರಜೆಗಳ ಮನಸ್ಸನ್ನು ಡೈವರ್ಟ್ ಮಾಡುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಸಾಮಾಜಿಕ ಕೊಡುಕೊಳ್ಳುವಿಕೆಯ ಕೊರತೆ, ಸಂಬಂಧದ ಕೊರತೆ, ದೇಶವಾಸಿಗಳಲ್ಲಿ ಪರಸ್ಪರ ಸಹಕಾರವಿಲ್ಲದೆ ಪರಸ್ಪರ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಈ ಬೆಳವಣಿಗೆಯು ಅಪಾಯಕಾರಿ ಬೆಳವಣಿಗೆ.
ಆದ್ದರಿಂದ ಶಾಂತಿ, ನೆಮ್ಮದಿಯ ದೇಶವನ್ನು ಕಟ್ಟಲು ಪ್ರಜ್ಞಾವಂತ ನಾಗರಿಕರು ಒಂದಾಗಬೇಕು. ಆದರೆ ಬರೇ ನಾಗರಿಕರಿಂದ ಇದು ಅಸಾಧ್ಯ. ಸಾಮರ್ಥ್ಯವಿರುವ ನಾಯಕರ ಪ್ರಯತ್ನ ಅತೀ ಅಗತ್ಯ. ಕೆಡುಕು ಮುಕ್ತ, ಬಡತನ ನಿರ್ಮೂಲನೆಯ, ಸಾಮರಸ್ಯ, ಸೌಹಾರ್ದಯುತ ಭಾರತ ನಮ್ಮ ಕನಸು.
ಪ್ರಾಮಾಣಿಕ ರಾಜಕೀಯ ದೇಶದ ತುರ್ತು ಅನಿವಾರ್ಯ ಅವಶ್ಯಕತೆ ಯಾಗಿದೆ. ದೇಶದ ಬೆನ್ನೆಲುಬಾದ ರೈತ ವರ್ಗಕ್ಕೆ ಎಲ್ಲಾ ತರದ ಸೌಕರ್ಯಗಳನ್ನು ಒದಗಿಸುವುದು, ನೈತಿಕತೆ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳುವ ನಮ್ಮ ಕನಸಿನ ಸುಂದರ ಭಾರತವನ್ನು ನಾವು ಕಟ್ಟಲು ಜಾತಿ, ಧರ್ಮವನ್ನು ಬದಿಗಿರಿಸಿ, ನೋವು ಎಲ್ಲರಿಗೂ ಒಂದೇ ಎಂದು ಅರ್ಥಮಾಡಿಕೊಂಡು ಎಲ್ಲರ ನೋವು ಕಷ್ಟಗಳಲ್ಲಿ ಸ್ಪಂದಿಸುತ್ತಾ, ನಾವೆಲ್ಲರೂ ಒಂದೇ ಮನುಷ್ಯ ಜಾತಿ ಎಂದರಿತು ಆದರ್ಶದಾಯಕ ಆಡಳಿತವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ.












