ಸುರತ್ಕಲ್ ಟೋಲ್ ತೆರವಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ಹೋರಾಟ ಮಾಡದವರು ಈಗ ಮಾಡ್ತಿದ್ದಾರೆ: ನಳಿನ್ ಕುಮಾರ್ ಕಟೀಲ್

0
379

ಸನ್ಮಾರ್ಗ ವಾರ್ತೆ

ಮಂಗಳೂರು: ಈ ಪ್ರಜಾಪ್ರಭುತ್ವದ ದೇಶದಲ್ಲಿ ಎಲ್ಲರಿಗೂ ಹೋರಾಟ ಮಾಡಲು ಹಕ್ಕಿದೆ. ಅದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ಕಾನೂನು ನಿಯಮಗಳಡಿಯಲ್ಲಿ ನಾವು ಸುರತ್ಕಲ್ ಟೋಲ್ ತೆರವು ಮಾಡ್ತೇವೆ. ಸುರತ್ಕಲ್ ಟೋಲ್ ತೆರವಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗ ಹೋರಾಟ ಮಾಡದವರು ಈಗ ಮಾಡ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಇಂದು ಮುಖ ಕಪ್ಪಗೆ ಮಾಡಿ ಪ್ರತಿಭಟನೆ ಮಾಡುವ ಕಾಂಗ್ರೆಸ್ ನ ಶಾಸಕರು, ನಾಯಕರು ಹಾಗೂ ಇತರರು ಕಾಂಗ್ರೆಸ್ ಸರ್ಕಾರ ಇದ್ದಾಗ ಹೋರಾಟ ಏನು ಮಾಡ್ತಾ ಇದ್ರು. ಆಗ ಪ್ರತಿಭಟನೆ ಮಾಡದವರು ಈಗ ಪ್ರತಿಭಟನೆ ಮಾಡ್ತಿರೋದು ರಾಜಕೀಯ ನಾಟಕವಷ್ಟೇ. ಆಗ ಆಸ್ಕರ್ ಫೆರ್ನಾಂಡೀಸ್ ಕೇಂದ್ರ ಸಚಿವರಾಗಿದ್ರು. ಆಗ ಯಾಕೆ ಇವರೆಲ್ಲರೂ ಮನವಿ ಕೊಡಲಿಲ್ಲ, ಪ್ರತಿಭಟನೆ ನಡೆಸಲಿಲ್ಲ ಎಂದು ಪ್ರಶ್ನೆ ಮಾಡಿದರು.

ಟೋಲ್ ತೆರವಿನ ಸಂಬಂಧ ಲೋಕಸಭೆಯಲ್ಲಿ ನಿತಿನ್ ಗಡ್ಕರಿಯವರೇ ಉತ್ತರ ನೀಡಿದ್ದಾರೆ. ಇವತ್ತೇ ಮಾಡಿ ನಾಳೆಯೇ ಮಾಡಿ ಎಂದು ಹೇಳಿದರೆ ಆಗುವುದಿಲ್ಲ. ನಿಯಮಗಳ ಪ್ರಕಾರವೇ ಟೋಲ್ ತೆರವು ಆಗೇ ಆಗುತ್ತದೆ ಎಂದು ತಿಳಿಸಿದ್ದಾರೆ.

ಟೋಲ್ ಹೋರಾಟ ಸಮಿತಿಯಿಂದ ಇಂದು ಕವಿಗೋಷ್ಠಿ

ಇಂದು(ನ.1) ಕರ್ನಾಟಕ ರಾಜ್ಯೋತ್ಸವ. ಟೋಲ್ ಗೇಟ್ ತೆರವು ಅನಿರ್ದಿಷ್ಟಾವಧಿ ಧರಣಿಗೆ 5 ನೇ ದಿನ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಧರಣಿ ಮಂಟಪದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿಯು ‘ಟೋಲ್ ಗೇಟ್ ಕವಿತೆಗಳು’ ಎಂಬ ಕವಿಗೋಷ್ಠಿ ಹಮ್ಕಿಕೊಂಡಿದೆ. ತುಳುನಾಡಿನ ಹಲವು ಖ್ಯಾತ ಕವಿಗಳು ಸುರತ್ಕಲ್ ಟೋಲ್ ಸುಲಿಗೆ, ಹೋರಾಟದ ಕುರಿತು ಮಾರ್ಮಿಕ ಕವಿತೆಗಳನ್ನು ಬರೆದು ವಾಚಿಸಲಿದ್ದಾರೆ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

“ಇದೊಂದು ಸಾಂಸ್ಕೃತಿಕ ಪ್ರತಿರೋಧ. ನಮ್ಮ ಹೋರಾಟಕ್ಕೆ ಕವಿಗಳು ಬಂಡಾಯ ಪದ್ಯಗಳ ಮೂಲಕ ಬಲ ತುಂಬಲಿದ್ದಾರೆ. ಮುಖ ಮರೆಸಿ ತಿರುಗುತ್ತಿರುವ ಸಂಸದ, ಶಾಸಕರುಗಳಿಗೆ ಚಾಟಿ ಬೀಸಲಿದ್ದಾರೆ. ಸಾರ್ವಜನಿಕರು ಭಾಗವಹಿಸಿ ಬೆಂಬಲ ನೀಡಬೇಕು” ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.