ಕೂಲಿಗಾರ ಅಪ್ಪ, ಬೀಡಿ ಸೂಪಿನ ಅಮ್ಮ

0
1202

ಸನ್ಮಾರ್ಗ ವಾರ್ತೆ

ಸಫ್ವಾನ್ ಸವಣೂರು

ಹೊತ್ತು ಮೂಡುವ ಮುನ್ನ
ಎಚ್ಚೆತ್ತು ನಿತ್ಯವಿಧಿಗಳ ಪೂರೈಸಿ
ಎಂದಿನಂತೆಯೇ ಅಪ್ಪ
ಕೂಲಿ ಕೆಲಸಕ್ಕೆ ತೆರಳುತ್ತಾರೆ…!
ಹೊತ್ತು ಕಂತುವವರೆಗೂ
ದುಡಿದು ಪಡೆದ ಬಿಡಿಗಾಸಿಗೆ
ಮಡದಿ ಮಕ್ಕಳ ಉದರ
ತುಂಬಿಸಲು ದಿನಸಿ ವಸ್ತುಗಳ
ಕೊಂಡು ಮನೆಗೆ ಮರಳುತ್ತಾರೆ…!!

ಕೋಳಿ ಕೂಗುವ ಮೊದಲೇ
ನಿದ್ದೆಯಿಂದೆದ್ದು ಒಲೆಯ ಉರಿಸಿ
ಕರುಳಕುಡಿಗಳಿಗೂ ಗಂಡನಿಗೂ
ಹೊಟ್ಟೆಗೆ ಹಿಟ್ಟು ಬೇಯಿಸಿಕೊಟ್ಟು
ಮನೆಕೆಲಸಗಳನ್ನೆಲ್ಲಾ ಮುಗಿಸುತ್ತಾಳೆ…!
ಒಂದರೆಗಳಿಗೆ ಸಿಗುವ ಬಿಡುವಿನಲ್ಲೂ
ದಣಿವಾರಿಸಿಕೊಳ್ಳದೆ ಪವಡಿಸಿ
ಮಡಿಲ ಮೇಲೆ ಬೀಡಿಸೂಪನ್ನಿರಿಸಿ
ಬೀಡಿಸುರುಳಿಗಳ ಸುರುಟುತ್ತಾಳೆ…!!

ಸಂಸಾರದ ನೊಗ ಹೆಗಲಿಗೇರಿಸಿ
ದುಡಿಯುವ ಅಪ್ಪ ಅಪ್ಪಟ ಕಾರ್ಮಿಕ,
ಸಂಸಾರ ನೌಕೆಯ ದಡಸೇರಿಸಲು
ಹೆಣಗಾಡುವ ಅಮ್ಮನೂ ಕಾರ್ಮಿಕೆ…!
ಬದುಕಿನ ಬಂಡಿಯು ಸಾಗುವ
ಹಾದಿಯ ಹದಗೊಳಿಸಲು ಸದಾ
ಹರಸಾಹಸಪಡುವ ಹೆತ್ತವರಿಗೆ
ಕಾರ್ಮಿಕರ ದಿನದ ಶುಭಾಶಯಗಳು…!!

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.