ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕಳೆದ 15 ದಿನಗಳಲ್ಲಿ ದೇಶದಲ್ಲಿನ ರೆಡ್ ಜೋನ್ಗಳ ಸಂಖ್ಯೆ ಶೇ.23ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಏಪ್ರಿಲ್ 15ರಂದು 170 ಇದ್ದ ರೆಡ್ಜೋನ್ಗಳ ಸಂಖ್ಯೆ, ಏಪ್ರಿಲ್ 30ಕ್ಕೆ 130ಕ್ಕೆ ಇಳಿದಿದೆ. ಅದರಂತೆ ಗ್ರೀನ್ ಜೋನ್ಗಳ ಸಂಖ್ಯೆಯೂ ಸಹ 356 ರಿಂದ 319ಕ್ಕೆ ಇಳಿಕೆಯಾಗಿದೆ.
ಆರೇಂಜ್ ಜೋನ್ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 207 ಜಿಲ್ಲೆಗಳಿಂದ 284ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ. 28 ದಿನಗಳ ಬದಲಾಗಿ 21 ದಿನ ಜಿಲ್ಲೆಯಲ್ಲಿ ಯಾವುದೇ ಸೋಂಕು ಕಾಣಿಸದಿದ್ದರೇ ಆ ಜಿಲ್ಲೆಯನ್ನು ಗ್ರೀನ್ ಜೋನ್ಗೆ ಸೇರಿಸಲಾಗುವುದು ಎಂದು ಸರಕಾರ ತಿಳಿಸಿದೆ.
ದೆಹಲಿ ಸೇರಿ ದೇಶದ ಎಲ್ಲ 7 ಮೆಟ್ರೋ ನಗರಗಳು ರೆಡ್ ಜೋನ್ನಲ್ಲಿದ್ದು, ಮುಂಬೈ ಮತ್ತು ದೆಹಲಿ ಎರಡರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 14 ರೆಡ್ ಜೋನ್ಗಳಿದ್ದರೆ, ಉತ್ತರ ಪ್ರದೇಶದಲ್ಲಿ 19 ರೆಡ್ ಜೋನ್ಗಳು ಸೃಷ್ಟಿಯಾಗಿವೆ. ದೆಹಲಿಯಲ್ಲಿ 11 ರೆಡ್ ಜೋನ್ಗಳಿದ್ದು, ಇಡೀ ದಿಲ್ಲಿಯನ್ನೇ ಕೆಂಪು ವಲಯ ಎಂದು ಪರಿಗಣಿಸಲಾಗಿದೆ.
ಇನ್ನು, ತಮಿಳುನಾಡು 12, ಪಶ್ಚಿಮ ಬಂಗಾಳ 10, ಗುಜರಾತ್ 9, ರಾಜಸ್ಥಾನ 8, ತೆಲಂಗಾಣ 6 ಹಾಗೂ ಕರ್ನಾಟಕದಲ್ಲಿ 3 ರೆಡ್ ಜೋನ್ಗಳಿವೆ ಎಂದು ಕೇಂದ್ರ ತಿಳಿಸಿದೆ. ಅತಿ ಹೆಚ್ಚು ಗ್ರೀನ್ ಜೋನ್ಗಳು ಅಸ್ಸಾಂನಲ್ಲಿವೆ. ಅಸ್ಸಾಂನಲ್ಲಿ 30 ಹಸಿರು ವಲಯದ ಪ್ರದೇಶಗಳಿವೆ ಎಂದು ಸರಕಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,993 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 73 ಸಾವುಗಳು ಕೂಡ ಸಂಭವಿಸಿವೆ.ದೇಶದಲ್ಲಿ ಇದುವರೆಗೂ 35,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿದ್ದು,1,147 ಕೊರೊನಾ ಸಾವುಗಳು ವರದಿಯಾಗಿವೆ.
ಓದುಗರೇ, sanmarga ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ












