ಸನ್ಮಾರ್ಗ ವಾರ್ತೆ
✍️ ಸ್ವಾಮಿ ರಂಗನಾಥಾನಂದ
ಪಕ್ಷಪಾತಿ ಮುಸ್ಲಿಮೇತರ ವಿಮರ್ಶಕರು ಮಾತ್ರವಲ್ಲ, ಆಕ್ರಮಣಕಾರಿಗಳಾದ, ದುರಾಸೆಯುಳ್ಳ ಭೌತಿಕವಾದಿ ಮುಸ್ಲಿಮರು ಸಹ ಪ್ರವಾದಿ ಮುಹಮ್ಮದ್(ಸ) ಅವರ ಪಾತ್ರವನ್ನು ತಪ್ಪಾಗಿ ಪ್ರತಿನಿಧಿಸುತ್ತಾರೆ. ತಮ್ಮ ಖಾಸಗಿ ಜೀವನದಲ್ಲಿ ಪ್ರವಾದಿಯವರು ಉನ್ನತ ಚಾರಿತ್ರ‍್ಯ, ಸಮಾನತೆ ಮತ್ತು ಪರೋಪಕಾರದ ವ್ಯಕ್ತಿಯಾಗಿ ಮಿಂಚಿದರು. ಕಾಯಕದ ಮಹತ್ವವನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಅವರು ಅತ್ಯಂತ ಸರಳ ಜೀವನವನ್ನು ನಡೆಸಿದರು, ಅನಂತರದ ಜೀವನದಲ್ಲಿ ಅವರು ತನ್ನಲ್ಲಿ, ಸಕಲ ಮಾನವ ಕುಲಕ್ಕೆ ಮತ್ತು ವಿಶೇಷತಃ ಅರೇಬಿಯಾದ ಜನರ ಮೇಲೆ ಒಂದು ಕಾರ್ಯ ಅರ್ಪಿತವಾಗಿದೆ ಎಂದು ಭಾವಿಸಿದರು. ತಮ್ಮ ಹೊಣೆ ನಿರ್ವಹಣೆಗೆ ಸಿದ್ಧರಾದರು ಮತ್ತು ತಮ್ಮ ಜೀವಿತಾವಧಿಯಲ್ಲೇ ಅದನ್ನು ಸಾಧಿಸಿ ತೋರಿಸುವಲ್ಲಿ ಯಶಸ್ವಿಯಾದರು. ಅವರ ಜೀವಿತಾವಧಿಯಲ್ಲಿ ಅರೇಬಿಯಾದ ಜನರನ್ನು ತನ್ನ ಧರ್ಮಾಧಾರಿತ ರಾಜಕೀಯ ಸಿದ್ಧಾಂತದ ಮೂಲಕ ಸಮನ್ವಯ ಗೊಳಿಸಲು ಪ್ರಯತ್ನಿಸಿದರು ಹಾಗೂ ಅವರು ಜಾಗತಿಕ ಸಾಂಸ್ಕೃತಿಕ ಶಕ್ತಿಯಾಗಬೇಕಾದ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಸಲು ಸಾಧ್ಯವಾಯಿತು.
ಅರಬ್ಬರಲ್ಲಿ ಜ್ಞಾನದ ದಾಹವನ್ನು ತುಂಬಿದರು. ಕೇವಲ ಡೇರೆಗಳು ಮತ್ತು ಮರುಭೂಮಿಗಳಾಗಿದ್ದ ಹಿಂದುಳಿದ ಪ್ರದೇಶವಾದ ಅರೇಬಿಯಾವು ಕ್ಷಿಪ್ರಗತಿಯಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಯುರೇಷಿಯಾದ ಅದೃಷ್ಟ ಪ್ರಾಂತ್ಯವಾಯಿತು. ಆ ನಾಲ್ಕು ಶತಮಾನಗಳು ಬೌದ್ಧಿಕ, ವಾಣಿಜ್ಯೋದ್ಯಮ ಹಾಗೂ ಪ್ರಬಲ ಅಂತಾರಾಷ್ಟ್ರೀಯ ಸಂಬಂಧಗಳ ಸಂಸ್ಥಾನವಾಯಿತು. ಇದು ಇಸ್ಲಾಮೀ ಚಿಂತನೆಯ ಸಾರ್ವತ್ರಿಕ ಆಧ್ಯಾತ್ಮಿಕ ಪ್ರಭಾವದ ಕಾಲಘಟ್ಟವಾಗಿತ್ತು. ಈ ಸಂದೇಶಗಳ ಬೌದ್ಧಿಕ ಮತ್ತು ವೈಜ್ಞಾನಿಕ ಹಿರಿಮೆ ಮುಸ್ಲಿಮ್ ಜನಮಾನಸದಲ್ಲಿ ಎದ್ದು ಕಾಣುತ್ತಿತ್ತು. ಇದು ಅವರಿಗೆ ಅಪಾರ ಆಧ್ಯಾತ್ಮಿಕ ಸ್ಫೂರ್ತಿ ಮತ್ತು ಜಿಜ್ಞಾಸೆಯನ್ನು ಮೂಡಿಸಿತು. ಇದು ಅವರಲ್ಲಿ ಸಮಕಾಲೀನ ಭಾರತೀಯ ಸಂಸ್ಕೃತಿ, ಚೀನೀ ಸಂಸ್ಕೃತಿ ಮತ್ತು ಗ್ರೀಕೋ-ರೋಮನ್ ಸಂಸ್ಕೃತಿ ಮುಂತಾದುವುಗಳನ್ನು ತಿಳಿಯಲು ಪ್ರೇರೇಪಿಸಿತು. ಆ ಅಧ್ಯಯನಗಳು ವಿಜ್ಞಾನ, ತತ್ವಶಾಸ್ತ್ರ ಮತ್ತು ಕಲೆಯಲ್ಲಿ ವೈವಿಧ್ಯಮಯ ಸಾಧನೆ ತೋರಲು ಅವರನ್ನು ಉತ್ತೇಜಿಸಿದವು. ಆದರೆ ಏಸುಕ್ರಿಸ್ತರ ಬಳಿಕ 13ನೇ ಶತಮಾನದಲ್ಲಿ ಮಂಗೋಲ್ ಆಕ್ರಮಣ ಮತ್ತು 1258ರಲ್ಲಿ ಬಾಗ್ದಾದ್ ಸಂಪೂರ್ಣ ನಾಶವಾದ ನಂತರ, ಲಕ್ಷಾಂತರ ಮಂದಿ ಕೊಲ್ಲಲ್ಪಟ್ಟರು. ವಿಶಾಲವಾದ ಭೂಭಾಗವು ನಿರ್ಜನ ಮತ್ತು ಬಂಜರು ಪ್ರದೇಶವಾಯಿತು. ಎರಡು ಶತಮಾನಗಳ ಕಾಲ ಈಜಿಪ್ಟ್ ಮತ್ತು ಸ್ಪೇನ್‌ನಲ್ಲಿ ಅರೇಬಿಕ್ ಸಂಸ್ಕೃತಿಯನ್ನು ಉಳಿಸಿಕೊಂಡು, ಇಸ್ಲಾಮೀ ಜಗತ್ತಿನ ಕೇಂದ್ರವನ್ನು ರಾಜಕೀಯ ಸಂಸ್ಕಾರ ಇಲ್ಲದ ಜನರಿಗೆ ಹಸ್ತಾಂತರಿಸಲಾಯಿತು.
ಇದರಿಂದಾಗಿ ನಿರಂತರತೆಯಿಂದ ಕೂಡಿದ್ದ ಸಾರ್ವತ್ರಿಕ ಮತ್ತು ಸಂವೇದನಾಶೀಲ ಹಂತಗಳು ನಿಧಾನವಾಗಿ ಅವನತಿಯ ಜಾಡನ್ನು ಹಿಡಿದವು, ಒಣ ವಿಚಾರ ಮತ್ತು ಅಸಹಿಷ್ಣುತೆಯ ಅಭಿವ್ಯಕ್ತಿಗಳ ಆಧಿಪತ್ಯವು ಆರೋಹಣವನ್ನು ಕಂಡಿತು. ಮಂಗೋಲರು, ಆನಂತರ ತುರ್ಕರು ಇಸ್ಲಾಂ ಧರ್ಮಕ್ಕೆ ಶೀಘ್ರದಲ್ಲೇ ಮತಾಂತರಗೊಂಡು ಇಸ್ಲಾಂ ಧರ್ಮ, ಸಂಸ್ಕೃತಿ ಮತ್ತು ರಾಜಕೀಯ ಶಕ್ತಿಯ ವಾಹಕರಾದರು. ಇತರರನ್ನು ಹೊರತುಪಡಿಸಿ ಈ ಹೊಸ ಮುಸ್ಲಿಮ್ ಗುಂಪುಗಳು ಇಸ್ಲಾಮಿನ ವೈಚಾರಿಕತೆ ಮತ್ತು ಸಾರ್ವತ್ರಿಕತೆಗಿಂತಲೂ ಸೈದ್ಧಾಂತಿಕತೆ ಹಾಗೂ ಅಸಹಿಷ್ಣುತೆಯ ತೆಕ್ಕೆಗೆ ಬಿದ್ದಿದ್ದವು. ಇಸ್ಲಾಮಿನ ಹೆಸರನ್ನು ಬಳಸಿಕೊಂಡು, ಅನೇಕ ಆಕ್ರಮಣಕಾರಿ ಸೇನಾ ಗುಂಪುಗಳು ಹೇರಳವಾಗಿ ಇತರ ದೇಶಗಳು ಮತ್ತು ಸಂಸ್ಕೃತಿಗಳನ್ನು ನಾಶಪಡಿಸಲು ಮತ್ತು ಲೂಟಿ ಮಾಡಲು ಕಾರಣವಾಗಿವೆ. ಇದು ಈ ಮಹಾನ್ ಧರ್ಮದ ಅಪಖ್ಯಾತಿಗೆ ಕಾರಣವಾಯಿತು.
ಸಾರ್ವತ್ರಿಕ ಪಾಠಗಳು
ಎಲ್ಲ ಧರ್ಮಗಳಲ್ಲಿರುವಂತೆ, ಪ್ರವಾದಿಯ ಸಂದೇಶಗಳಲ್ಲಿ ಸ್ಥಳೀಯ ಮತ್ತು ತಾತ್ಕಾಲಿಕ ಸಾಮಾಜಿಕ-ರಾಜಕೀಯ ಅಂಶಗಳ ಮಿಶ್ರಣವನ್ನು ಶಾಶ್ವತ, ಸಾರ್ವತ್ರಿಕ, ನೈತಿಕ ಮತ್ತು ಆಧ್ಯಾತ್ಮಿಕ ಅಂಶಗಳೊಂದಿಗೆ ಕಾಣಬಹುದು. ಇವು ಎಲ್ಲಾ ಧಾರ್ಮಿಕ ಸಂಪ್ರದಾಯಗಳ ಎರಡು ತತ್ವಗಳನ್ನು ಪ್ರತಿನಿಧಿಸುತ್ತವೆ. ಮೊದಲನೆಯದಾಗಿ, ದೇವನೆಡೆಗಿನ ಹಾದಿ, ಎರಡನೆಯದಾಗಿ ಮಾನವ ಸಮೂಹಕ್ಕೆ ರಾಜಕೀಯ ಪ್ರಜ್ಞೆ ಎಂಬ ನೆಲೆಯಲ್ಲಿ. ಇಸ್ಲಾಮೀ ನಂಬಿಕೆಯ ಪ್ರಕಾರ ವಿಶ್ವಾಸಿಗಳು ಪ್ರಥಮವಾಗಿ ಕುರ್‌ಆನ್‌ನಿಂದ ಮತ್ತು ದ್ವಿತೀಯವಾಗಿ ಕುರ್‌ಆನ್‌ನ ನಿರ್ದೇಶನದಂತೆ ಶರಿಯಾ ಹಾಗೂ ಹದೀಸ್‌ನಿಂದ ಸ್ಫೂರ್ತಿಯನ್ನು ಪಡೆಯುತ್ತಾರೆ. ಈ ಮೂರೂ ವಿಷಯಗಳು ಕ್ರಮವಾಗಿ ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಶ್ರುತಿ ಮತ್ತು ಸ್ಮೃತಿಯಲ್ಲಿ ವಿವಿಧ ಪ್ರಮಾಣದಲ್ಲಿ ಅಡಕವಾಗಿವೆ.
ಇತ್ತೀಚೆಗೆ ಶ್ರುತಿಯ ಮೇಲಿನ ಸ್ಮೃತಿಯ ಪ್ರಾಬಲ್ಯದಿಂದಾಗಿ ಸನಾತನ ಧರ್ಮಕ್ಕೆ ನಿಷ್ಕ್ರಿಯತೆ ಮತ್ತು ದೌರ್ಬಲ್ಯ ಬಾಧಿಸಿದಂತೆ ಇಸ್ಲಾಮಿಗೂ ಸಂಭವಿಸಿತು. ಇವರು ವೈಜ್ಞಾನಿಕ ವಿಧಾನವನ್ನು ಸ್ವೀಕರಿಸಿ; ಶಾಶ್ವತ, ಸಾರ್ವತ್ರಿಕ ಮತ್ತು ಆಧ್ಯಾತ್ಮಿಕ ಅಂಶಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಚಾರಿತ್ರಿಕ ಪ್ರಗತಿಗೆ ಅನುಗುಣವಾಗಿ ಸಕಾಲಿಕ ಮತ್ತು ಸ್ಥಳೀಯ ಅಂಶಗಳನ್ನು ಸೌಮ್ಯತೆಯಿಂದ ನಿಯಂತ್ರಿಸಿದರು. ಈ ಮೂಲಕ ನಿರಂತರವಾಗಿ ದುರ್ಬಲವಾಗುತ್ತಿರುವ ಮಾನವ ಸಮಾಜದ ಮೇಲೆ ಪ್ರಸ್ತುತ ಸಂಪ್ರದಾಯವಾದಿ ಗುಂಪು ಪ್ರಾಬಲ್ಯವನ್ನು ಗಳಿಸಿತು.
ಕುರ್‌ಆನ್‌ನ ಈ ಕೆಳಗಿನ ಆಯ್ದ ಸೂಕ್ತಗಳು ಶ್ರುತಿಯ ಅಥವಾ ಸಾರ್ವತ್ರಿಕವಾದ ತತ್ವಗಳನ್ನು ಪ್ರತಿಪಾದಿಸುತ್ತವೆ.
ಅಪಾರ ದಯಾಳು, ಕರುಣಾಮಯಿಯಾದ ಅಲ್ಲಾಹನ ನಾಮದಿಂದ.
ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.
ಅವನು ಅಪಾರ ದಯಾಳು, ಕರುಣಾಮಯಿ.
ಪ್ರತಿಫಲದ ದಿನದ ಮಾಲಕ.
ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ. (1: 1-5)
ಮುಹಮ್ಮದ್ ಮತ್ತು ಅವರ ಸಂದೇಶಗಳ ಸಾರ್ವತ್ರಿಕತೆಯ ಬಗ್ಗೆ ಕುರ್‌ಆನ್ ಹೀಗೆ ಹೇಳುತ್ತದೆ:
ನಾವು ನಿಮ್ಮನ್ನು ಸರ್ವಲೋಕಗಳಿಗೆ ಅನುಗ್ರಹವಾಗಿ ಕಳಿಸಿರುವೆವು. (21: 107)
ಕುರ್‌ಆನ್‌ನ ಎರಡನೇ ಅಧ್ಯಾಯವು ವಿಶ್ವಾಸಿಗಳಾಗಿರಲು ನಮಗೆ ಆದೇಶಿಸುತ್ತದೆ. ಮುಹಮ್ಮದ್‌ರಿಗೆ ಅವತರಿಸಿದ್ದನ್ನು ಮಾತ್ರವಲ್ಲ; ಅವರ ಹಿಂದಿನವರಿಗೆ ಅವತರಿಸಿದ್ದುದರ ಮೇಲೂ ನಂಬಿಕೆ ಇರಿಸಬೇಕೆಂದು ಆದೇಶಿಸುತ್ತದೆ. ಪ್ರವಾದಿಯವರು (ಸ) ಅನೇಕ ಸತ್ಯಾಧಾರಿತ ಧರ್ಮಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಅದರಲ್ಲಿ ಇಸ್ಲಾಂ ಧರ್ಮವೂ ಒಂದು. ಪ್ರವಾದಿಯವರ ಸಂದೇಶಗಳ ಸಾರ್ವತ್ರಿಕತೆಯು ಅವರ ಬೋಧನೆಗಳಲ್ಲಿಯೂ ವ್ಯಕ್ತವಾಗುತ್ತದೆ. ಅದು ಹೇಗೆಂದರೆ ಯಾರು ಒಳ್ಳೆಯದು ಮಾಡುತ್ತಾರೋ ಅವರು ತಮ್ಮ ಹೃದಯ ಮತ್ತು ದೇವನಿಗೆ ಹತ್ತಿರವಾಗಿದ್ದಾರೆ.
ಕುರಾನ್‌ನ ಅನೇಕ ಅಧ್ಯಾಯಗಳಲ್ಲಿ ಅದರ ಸಾರ್ವತ್ರಿಕ ನಿಲುವನ್ನು ನಮಗೆ ದರ್ಶಿಸಬಹುದು:
“ನಾವು ನಿಮ್ಮ ಪೈಕಿ ಪ್ರತಿಯೊಂದು ವಿಭಾಗಕ್ಕೂ ನಿರ್ದಿಷ್ಟ ನಿಯಮ ಹಾಗೂ ದಾರಿಯೊಂದನ್ನು ನಿಗದಿಪಡಿಸಿದ್ದೇವೆ. ಅಲ್ಲಾಹನು ಬಯಸಿದ್ದರೆ ನಿಮ್ಮೆಲ್ಲರನ್ನು ಒಂದೇ ಸಮುದಾಯವಾಗಿಸುತ್ತಿದ್ದನು. ಆದರೆ ಅವನು, ನಿಮಗೆ ಏನನ್ನು ನೀಡಿರುವನೋ ಅದರ ಮೂಲಕವೇ ನಿಮ್ಮನ್ನು ಪರೀಕ್ಷಿಸಬಯಸುತ್ತಾನೆ. ನೀವೀಗ ಒಳಿತಿನಲ್ಲಿ ಪರಸ್ಪರ ಸ್ಪರ್ಧಿಸಿರಿ. ಕೊನೆಗೆ ನೀವೆಲ್ಲರೂ ಅಲ್ಲಾಹನೆಡೆಗೇ ಮರಳಲಿಕ್ಕಿದೆ- ಆಗ ಅವನು, ನೀವು ಭಿನ್ನತೆ ತಾಳಿದ್ದ ವಿಷಯಗಳ ಕುರಿತು ನಿಮಗೆ ತಿಳಿಸುವನು. (5:48)
ಧಾರ್ಮಿಕತೆಯು, ನೀವು (ಆರಾಧನೆಗಾಗಿ) ನಿಮ್ಮ ಮುಖಗಳನ್ನು ಪೂರ್ವದೆಡೆಗೆ ತಿರುಗಿಸುವಿರೋ ಪಶ್ಚಿಮದೆಡೆಗೆ ತಿರುಗಿಸುವಿರೋ ಎಂಬುದರಲ್ಲಿಲ್ಲ. ನಿಜವಾಗಿ ಒಬ್ಬ ವ್ಯಕ್ತಿ ಅಲ್ಲಾಹನಲ್ಲಿ, ಪರಲೋಕದಲ್ಲಿ, ಮಲಕ್‌ಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ನಂಬಿಕೆ ಇಟ್ಟು, ಅವನ ಪ್ರೀತಿಯನ್ನು ಸಂಪಾದಿಸಲಿಕ್ಕಾಗಿ ತನ್ನ ಸಂಪತ್ತನ್ನು ಬಂಧುಗಳು, ಅನಾಥರು, ಬಡವರು, ಪ್ರಯಾಣಿಕರು ಮತ್ತು ಯಾಚಕರಿಗಾಗಿ ಹಾಗೂ ದಾಸ್ಯದಲ್ಲಿರುವವರ ವಿಮೋಚನೆಗಾಗಿ ಖರ್ಚು ಮಾಡುತ್ತಾ, ನಮಾಝನ್ನು ನಿರ್ವಹಿಸುತ್ತಾ, ಝಕಾತ್ ಅನ್ನು ಪಾವತಿಸುತ್ತಾ ಇರುವುದು ಮತ್ತು ಕರಾರು ಮಾಡಿದ ಮೇಲೆ ತಮ್ಮ ಕರಾರಿನ ಪಾಲಕರಾಗಿರುವುದು ಹಾಗೂ ಸಂಕಷ್ಟದಲ್ಲೂ, ಹೋರಾಟದ ವೇಳೆಯೂ ಸಹನಶೀಲರಾಗಿರುವುದೇ ನಿಜವಾದ ಧಾರ್ಮಿಕತೆಯಾಗಿದೆ. ಅಂಥವರೇ ನಿಜವಾದ ಸತ್ಯವಂತರು ಮತ್ತು ನಿಜವಾದ ದೇವಭಕ್ತರು. (2: 177)
“ಹೇಳಿರಿ: ಅಲ್ಲಾಹನನ್ನು, ಅವನು ನಮಗೆ ಅವತೀರ್ಣಗೊಳಿಸಿದ ಸಂದೇಶವನ್ನು ಮತ್ತು ಅವನು ಇಬ್ರಾಹೀಮ್, ಇಸ್ಮಾಯೀಲ್, ಇಸ್ಹಾಕ್, ಯಅಕೂಬ್ ಹಾಗೂ ಅವರ (ಯಅಕೂಬ್‌ರ) ಸಂತತಿಗಳಿಗೆ ಕಳಿಸಿಕೊಟ್ಟಿದ್ದ ಸಂದೇಶವನ್ನು ಮತ್ತು ಮೂಸಾ ಹಾಗೂ ಈಸಾರಿಗೆ ಮತ್ತು ಇತರೆಲ್ಲ ಪ್ರವಾದಿಗಳಿಗೆ ಅವರ ಒಡೆಯನ ಕಡೆಯಿಂದ ಏನನ್ನು ನೀಡಲಾಗಿತ್ತೋ ಅದನ್ನು ನಾವು ನಂಬಿದ್ದೇವೆ. ನಾವು ಅವರ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ ಮತ್ತು ನಾವು ಅವನಿಗೆ ‘ಮುಸ್ಲಿಮ್’ ಆಗಿರುವೆವು (ಶರಣಾಗಿರುವೆವು).” (2: 136)
ಅಲ್ಲಾಹನ ಧರ್ಮವು ಇಸ್ಲಾಮ್ (ಶರಣಾಗತಿ) ಆಗಿದೆ.” (3:19)
“ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷ್ಯ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡಾ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ.” (5:8)
ಪ್ರವಾದಿಯವರು, ತಾವು ನಿಧನರಾಗುವುದಕ್ಕಿಂತ ಮುಂಚೆ ನಡೆಸಿದ ವಿದಾಯ ಭಾಷಣದಲ್ಲಿ ಮಾನವ ಭ್ರಾತೃತ್ವ ಮತ್ತು ಮಾನವೀಯತೆಯನ್ನು ಸಾರಿದರು: `ಓ ಮಾನವಕುಲವೇ, ಅರಬರು ಅರಬೇತರರಿಗಿಂತ ಮತ್ತು ಅರಬೇತರರು ಅರಬರಿಗಿಂತ ಶ್ರೇಷ್ಠರಲ್ಲ. ಅದೇ ರೀತಿ ಕರಿಯನಿಗೆ ಬಿಳಿಯನಿಗಿಂತ ಬಿಳಿಯನಿಗೆ ಕರಿಯನಿಗಿಂತ ಯಾವುದೇ ಶ್ರೇಷ್ಠತೆ ಇಲ್ಲ. ಧರ್ಮನಿಷ್ಠೆಯ ಆಧಾರದ ಹೊರತುಪಡಿಸಿ.’
ಕುರ್‌ಆನ್ ಇನ್ನೊಂದೆಡೆ ಹೀಗೆ ಹೇಳುತ್ತದೆ:
“ಮನುಷ್ಯನ ಕರ್ಮಗಳನ್ನು ಅವುಗಳ ಉದ್ದೇಶದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ.”
“ನೆರೆಯಾತ ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ವಿಶ್ವಾಸಿಯಲ್ಲ.”
ಆವರ್ತಿತವಾಗಿ ಉಲ್ಲೇಖಿಸಲ್ಪಡುವ ಕುರ್‌ಆನಿನ ಈ ಸೂಕ್ತವೂ ಸಹ ಸಾರ್ವತ್ರಿಕತೆಯ ಮುದ್ರೆಯನ್ನು ಹೊಂದಿದೆ:
“ಧರ್ಮದ ವಿಷಯದಲ್ಲಿ ಯಾವುದೇ ಬಲವಂತವಿಲ್ಲ.” (2:256)
(ಮುಂದುವರಿಯುವುದು)