ಸನ್ಮಾರ್ಗ ವಾರ್ತೆ
ಮುಂಬೈ: ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ರೋಡ್ಶೋ ಹಿನ್ನೆಲೆಯಲ್ಲಿ ವರ್ಸೋವಾದಿಂದ ಖಟ್ಕೋಪರ್ ಲೈನ್ 1 ವರೆಗಿನ ಮೆಟ್ರೋ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಇದರಿಂದ ವರ್ಸೋವಾ, ಅಡೆರಿ ಮತ್ತು ಖಟ್ಕೋಪರ್ನಲ್ಲಿ ಮೆಟ್ರೋ ಅವಲಂಬಿತ ಪ್ರಯಾಣಿಕರು ತೊಂದರೆಗೀಡಾದರು.
ಮುಂಬೈ ಮೆಟ್ರೋ ಒನ್ ಪ್ರೈವೇಟ್ ಲಿಮಿಟೆಡ್ ಸೇವೆ ರದ್ದತಿಗೆ ಒಂದು ಗಂಟೆ ಮೊದಲು ಈ ಬಗ್ಗೆ ಮಾಹಿತಿ ನೀಡಿದ್ದು, ಆ ವೇಳೆಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದರು. ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದೆ ಜನತೆ ಪರದಾಡುವಂತಾಯಿತು. ಜಾಗುತಿ ನಗರದಿಂದ ಖಟ್ಕೋಪರ್ಗೆ ಸಂಜೆ 6 ಗಂಟೆಗೆ ಸೇವೆಯನ್ನು ರದ್ದುಗೊಳಿಸಲಾಗಿತ್ತು. ರೋಡ್ ಶೋ ವೇಳೆ ಭದ್ರತಾ ಸಮಸ್ಯೆಯಿಂದ ಮೆಟ್ರೋ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಹಲವರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಒಂದು ವೇಳೆ ಮೆಟ್ರೋ ಸೇವೆಯನ್ನು ರದ್ದುಗೊಳಿಸಿದ್ದರೆ, ಸ್ವಲ್ಪ ಮುಂಚಿತವಾಗಿ ತಿಳಿಸಿದ್ದರೆ ಪರ್ಯಾಯ ಪ್ರಯಾಣದ ಸೌಲಭ್ಯವನ್ನು ಹುಡುಕಬಹುದಿತ್ತು ಎಂದು ಪ್ರಯಾಣಿಕರು ಹೇಳಿದ್ದಾರೆ.
ಪ್ರಧಾನಿಯವರ ರೋಡ್ ಶೋನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವರಿಗೆ ಸರಿಯಾದ ಸಮಯಕ್ಕೆ ಮನೆ ತಲುಪಲು ಸಾಧ್ಯವಾಗಲಿಲ್ಲ. ಬದಲಿ ರೈಲು ಸಿಗದ ಕಾರಣ ಹಲವು ಮಂದಿ ಮೆಟ್ರೋ ನಿಲ್ದಾಣದಲ್ಲೇ ಉಳಿಯಬೇಕಾಯಿತು. ಆಟೋ ರಿಕ್ಷಾಗಳೂ ಸಿಗಲಿಲ್ಲ. ರೋಡ್ ಶೋ ನಡೆಸುವುದರಿಂದ ಜನರ ಸಮಯ ವ್ಯರ್ಥವಾಗುತ್ತಿದೆ ಎಂದು ಅಜೇರಿಗೆ ತೆರಳುವ ಪ್ರಯಾಣಿಕರು ದೂರಿದರು.
“ಮನೆಯಲ್ಲಿ ಮಕ್ಕಳು ನಮಗಾಗಿ ಕಾಯುತ್ತಿದ್ದಾರೆ. ನಾವು ಮನೆಗೆ ಹೋಗಲು ಯಾವುದೇ ಮಾರ್ಗವಿಲ್ಲ” ಎಂದು ಪ್ರಯಾಣಿಕರೊಬ್ಬರು ಹೇಳಿದರು.
ಮೆಟ್ರೋ ಸೇವೆ ರದ್ದಾದ ಹಿನ್ನೆಲೆಯಲ್ಲಿ ವಾರ್ಸಾ-ಜಗ್ರತಿ ನಗರ ಮಾರ್ಗದಲ್ಲಿ ರೈಲು ಸಂಚಾರ 10-15 ನಿಮಿಷ ವಿಳಂಬವಾಗಿದೆ. ರೋಡ್ ಶೋನ ಕಾರಣ ಮುಂಬೈ ಟ್ರಾಫಿಕ್ ಪೊಲೀಸರು ಎಲ್ಬಿಎಸ್ ರಸ್ತೆ ಮತ್ತು ಮಹುಲ್-ಚಚ್ಟ್ಕೋಪರ್ ರಸ್ತೆಯನ್ನು ಮುಚ್ಚಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಜಟಿಲವಾಯಿತು.
ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಮೆಟ್ರೋ ಸೇವೆ ರದ್ದುಪಡಿಸಿ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಬಿಜೆಪಿ ಮುಂಬೈಗೆ ಬಂದರೆ ಈ ರೀತಿಯ ಸಮಸ್ಯೆಗಳು ಎದುರಿಸಬೇಕಾಗಿದೆ ಎಂದು ಶಿವಸೇನೆ ಪ್ರತಿಕ್ರಿಯಿಸಿದೆ. ಒಂದೂವರೆ ತಾಸಿನ ಬಳಿಕ ಮೆಟ್ರೊ ಸೇವೆ ಮರುಸ್ಥಾಪಿಸಲಾಯಿತು. ಮುಂಬೈನಲ್ಲಿ ಮೇ 20 ರಂದು ಚುನಾವಣೆ ನಡೆಯಲಿದೆ.












