ಊರಿಗೆ ಮರಳುವ ವೇಳೆ ರೈಲಿನಲ್ಲಿ ಆಹಾರ ಸಿಗದೇ ಪರಸ್ಪರ ಹೊಡೆದಾಡಿಕೊಂಡ ವಲಸೆ ಕಾರ್ಮಿಕರು-ವೀಡಿಯೊ

0
635

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶ, ಸಾತ್ನ,ಮೇ.7: ಕೊರೋನಾ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗುತ್ತಿರುವ ವಿಶೇಷ ರೈಲಿನಲ್ಲಿ ಆಹಾರ ಸಿಗದೇ ಹತಾಶರಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ಸಾತ್ನಾ ರೈಲ್ವೆ ಸ್ಟೇಷನ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಕೆಲವರಿಗೆ ಗಾಯಗಳೂ ಆಗಿವೆ.

ಕೊರೋನಾ ಸೋಂಕು ತಗಲುವ ಭೀತಿಯಿಂದ ರೈಲ್ವೆ ಪೊಲೀಸರು ಜಗಳ ತಡೆಯಲು ಮುಂದಾಗಲಿಲ್ಲ. ರೈಲಿನ ಕಿಟಕಿಯ ಮೂಲಕ ಲಾಠಿ ಬಡಿದು ಪರಿಸ್ಥಿತಿ ಶಾಂತ ಗೊಳಿಸಲು ಯತ್ನಿಸಿದರು. ಆದರೆ ಹಸಿದಿರುವ, ಅಸಹಾಯಕರಾದ ಕಾರ್ಮಿಕರು ಶಾಂತರಾಗಲಿಲ್ಲ.1200ಕ್ಕೂ ವಲಸೆ ಕಾರ್ಮಿಕರು ಮಂಗಳವಾರ ಮಹಾರಾಷ್ಟ್ರದ ಕಲ್ಯಾಣ್‍ನಿಂದ ಬಿಹಾರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

“ರೈಲಿನಲ್ಲಿ 24 ಪ್ಯಾಕೆಟ್ ಅಹಾರ ಪೊಟ್ಟಣ ವಿತರಿಸುವುದು ನಾನು ನೋಡಿದೆ. ಪಕ್ಕದ ಕಂಪಾರ್ಟ್‍ಮೆಂಟಿನಲ್ಲಿ ಎಲ್ಲರಿಗೂ ಆಹಾರ ದೊರಕಿದೆ. ನಮಗೆ ಏನೂ ಸಿಕ್ಕಿಲ್ಲ, ಜನರು ಇಲ್ಲಿ ಆಹಾರ ಇಲ್ಲದೆ ಹಸಿದು ಚಡಪಡಿಸುತ್ತಿದ್ದಾರೆ” ಎಂದು ವಲಸೆ ಕಾರ್ಮಿಕರಲ್ಲಿ ಒಬ್ಬಾತ ತಿಳಿಸಿದ್ದಾನೆ.

ಆಹಾರದ ಕುರಿತು ಮೊದಲು ಮಾತಿನ ಚಕಮಕಿ ನಡೆದಿದ್ದು, ನಂತರ ಹೊಡೆದಾಟಕ್ಕೆ ತಿರುಗಿತ್ತು. ಮಾರ್ಚ್ 25ರಿಂದ ದೇಶಾದ್ಯಂತ ಘೋಷಿಸಿದ ಲಾಕ್‍ಡೌನ್‍ ನಂತರ ರೈಲು ಸಂಚಾರ ನಿಲುಗಡೆಗೊಂಡಿತ್ತು. ಈಗ ಕೇಂದ್ರ ಸರಕಾರ ಶ್ರಮಿಕ್ ವಿಶೇಷ ರೈಲಿನ ಏರ್ಪಾಟು ಮಾಡಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.