ರೀಲ್ಸ್‌ಗಾಗಿ ಅಣಕು ನೇಣು ಚಿತ್ರೀಕರಣ: ಸ್ಟೂಲ್ ಜಾರಿ ಜೀವ ಕಳಕೊಂಡ ಮೋಹಿನಿ

0
500

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಬಂಡಾ ಜಿಲ್ಲೆಯ 27 ವರ್ಷದ ಮೋಹಿನಿ ಎಂಬ ಮಹಿಳೆ ರೀಲ್ಸ್‌ ಚಿತ್ರೀಕರಣದ ವೇಳೆ ನೇಣು ಬಿಗಿದು ಮೇತಪಟ್ಟಿದ್ದಾರೆ. ಸ್ಟೂಲ್‌ ಮೇಲೆ ನಿಂತು ಸೀಲಿಂಗ್‌ ಫ್ಯಾನಿಗೆ ನೇಣು ಹಾಕಿಕೊಳ್ಳವ ದೃಶ್ಯ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ. ಸ್ಟೂಲ್‌ ಮೇಲೆ ನಿಂತಾಗ ಕಾಲು ಜಾರಿದೆ. ತಕ್ಷಣವೇ ಸ್ಟೂಲ್‌ ಬಿದ್ದಿದೆ. ಕೆಲವೇ ಕ್ಷಣದಲ್ಲಿ ಪ್ರಾಣಪಕ್ಷಿ ಹಾರಿ ಹೋಗಿದೆ.

ಮೋಹಿನಿಗೆ ನಾಲ್ಕು ವರ್ಷದ ಮಗಳಿದ್ದು, ಅವಳು ಕೋಣೆಗೆ ಪ್ರವೇಶಿಸಿದಾಗ ತಾಯಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಗು ತಕ್ಷಣವೇ ಕಿರುಚಿಕೊಂಡಿದೆ. ಆಕೆಯ ಕಿರುಚಾಟ ಕೇಳಿದಾಗ ಅವರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ವಿಷಯ ತಿಳಿದ ತಕ್ಷಣ ಮೋಹಿನಿ ಅವರ ಪತಿ, ಜಗದೀಶ್‌ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ʼಫೆ. 06 ರ ಸಂಜೆ ವೇಳೆ ರೀಲ್ಸ್‌ ತಯಾರಿಸಲು ಕೋಣೆಗೆ ತೆರಳಿಸಿದ್ದಾರೆ. ಸ್ಟೂಲ್‌ ಮೇಲೆ ನಿಂತು ನೇಣು ಹಾಕಿಕೊಳ್ಳುವ ದೃಶ್ಯ ತಯಾರಿಸುತ್ತಿದ್ದಾರೆ ಎಂದು ಭಾವಿಸಿದ್ದೆವುʼ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ಆರಂಭದಲ್ಲಿ ಮೋಹಿನಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ಭಾವಿಸಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ರೀಲ್ಸ್‌ ಮಾಡುವ ವೇಳೆ ಈ ಘಟನೆ ನಡೆದಿದೆ ಎಂದು ಬಾಬೇರು ಪೊಲೀಸ್‌ ಠಾಣೆಯ ಪೊಲೀಸ್‌ ವರಿಷ್ಠಾಧಿಕಾರಿ ಪಲಾಶ್‌ ಬನ್ಸಾಲ್‌ ತಿಳಿಸಿದ್ದಾರೆ.