ಸನ್ಮಾರ್ಗ ವಾರ್ತೆ
ನವದೆಹಲಿ: ಅಲ್ಪಸಂಖ್ಯಾತರ ಕಲ್ಯಾಣ, ಬಜೆಟ್ ಆದ್ಯತೆಗಳು ಮತ್ತು ದೇಶದ ಪ್ರಸ್ತುತ ಕೋಮು ವಾತಾವರಣದ ಕುರಿತು ಜಮಾಅತೆ ಇಸ್ಲಾಮಿ ಹಿಂದ್ (ಜೆಐಎಚ್) ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಶನಿವಾರ ಸಂಘಟನೆಯ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಬಜೆಟ್ ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ವಿಶ್ಲೇಷಣೆ ನಡೆಸಿದ ಅವರು, ಸಮಗ್ರ ರಾಷ್ಟ್ರೀಯ ಅಭಿವೃದ್ಧಿಯೇ ಇಂದಿನ ಅಗತ್ಯ ಎಂದು ಒತ್ತಿ ಹೇಳಿದರು.
ದೇಶದ ಶೇ. 7 ರಿಂದ 8 ರಷ್ಟು ಜಿಡಿಪಿ ಬೆಳವಣಿಗೆ ಹಾಗೂ 12 ಟ್ರಿಲಿಯನ್ ರೂಪಾಯಿಗಳ ಬೃಹತ್ ಮೂಲಸೌಕರ್ಯ ವೆಚ್ಚದಂತಹ ಸಕಾರಾತ್ಮಕ ಆರ್ಥಿಕ ಸೂಚಕಗಳನ್ನು ಶ್ಲಾಘಿಸಿದ್ದು, ಕೇವಲ ಆರ್ಥಿಕ ಅಂಕಿಅಂಶಗಳು ಅಭಿವೃದ್ಧಿಯ ಮಾನದಂಡವಾಗಬಾರದು. ಸಾಮಾಜಿಕ ಫಲಿತಾಂಶಗಳು ಹಿಂದುಳಿದಾಗ ಆರ್ಥಿಕ ಶಕ್ತಿಯು ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಸ್ತುತ ಬಜೆಟ್ ನಿರುದ್ಯೋಗ ಮತ್ತು ಆದಾಯ ಅಸಮಾನತೆಗೆ ಸೀಮಿತ ಪರಿಹಾರಗಳನ್ನು ನೀಡುತ್ತಿದೆ ಹಾಗೂ ಉದ್ಯೋಗ-ತೀವ್ರ ವಲಯಗಳಿಗೆ ಹೆಚ್ಚಿನ ಬೆಂಬಲ ನೀಡದ ಕಾರಣ ಉದ್ಯೋಗ ಸೃಷ್ಟಿಯು ಕುಂಠಿತಗೊಳ್ಳುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಹಂಚಿಕೆಯು ನಿಗದಿತ ನೀತಿ ಗುರಿಗಳಿಗಿಂತ (ಶೇ. 6 ಮತ್ತು ಶೇ. 3) ಗಮನಾರ್ಹವಾಗಿ ಕಡಿಮೆ ಇರುವುದು ಮಾನವ ಅಭಿವೃದ್ಧಿ ಮತ್ತು ಸಾಮಾಜಿಕ ಚಲನಶೀಲತೆಗೆ ಅಪಾಯಕಾರಿ ಎಂದ ಅವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನದ ಕುರಿತು ಅಭಿಪ್ರಾಯ ಪಟ್ಟರು.
ಅಲ್ಪಸಂಖ್ಯಾತ ವಲಯಕ್ಕೆ 3,400 ಕೋಟಿ ರೂಪಾಯಿಗಳ ಏರಿಕೆಯಾಗಿದ್ದರೂ, ವಾಸ್ತವಿಕ ಪರಿಸ್ಥಿತಿಗೆ ಇದು ಅಸಮರ್ಪಕವಾಗಿದೆ. ಅಲ್ಲದೆ, ನಿಧಿಯ ಬಳಕೆಯಲ್ಲಿನ ಕೊರತೆಯನ್ನು ಉಲ್ಲೇಖಿಸಿದ ಅವರು, ಕಳೆದ ವರ್ಷದ ಅಲ್ಪಸಂಖ್ಯಾತ ನಿಧಿಯ ಮೂರನೇ ಒಂದು ಭಾಗದಷ್ಟು ಹಣ ಖರ್ಚಾಗದೆ ಉಳಿದಿರುವುದು ಆಡಳಿತಾತ್ಮಕ ಮತ್ತು ವಿತರಣಾ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಎಚ್ಚರಿಕೆಯ ದೃಷ್ಟಿಕೋನ ನೀಡಿದ ಅವರು, ಸುಂಕ ಕಡಿತದ ಹೊರತಾಗಿಯೂ ನೆರೆಯ ರಾಷ್ಟ್ರಗಳ ಪೈಪೋಟಿ ಮತ್ತು ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಗಳಿಂದ ಭಾರತೀಯ ಜವಳಿ ಮತ್ತು ಚರ್ಮೋದ್ಯಮಕ್ಕೆ ಹೊಡೆತ ಬೀಳಲಿದೆ. ಅಮೆರಿಕದ ಸರಕುಗಳಿಗೆ ಕಡಿಮೆ ಸುಂಕ ಮತ್ತು ಭಾರತದ ರಫ್ತುಗಳಿಗೆ ಹೆಚ್ಚಿನ ದರದ ಅಸಮತೋಲನವು ದೇಶದ ರೈತರ ಮೇಲೆ ಒತ್ತಡ ಹೇರಲಿದ್ದು, ಇಂಧನ ಭದ್ರತೆಗೂ ಅಪಾಯ ತರಬಹುದು ಎಂದು ಅವರು ವಿವರಿಸಿದರು.
ದೇಶದ ಹದಗೆಡುತ್ತಿರುವ ಕೋಮು ವಾತಾವರಣದ ಬಗ್ಗೆ ಅಂಕಿಅಂಶಗಳ ಸಮೇತ ಮಾಹಿತಿ ನೀಡಿದ ಅವರು, 2025 ರಲ್ಲಿ ದಾಖಲಾದ 1,318 ದ್ವೇಷ ಭಾಷಣದ ಪ್ರಕರಣಗಳು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ದಲಿತರ ವಿರುದ್ಧದ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ.
ಈ ನಿಟ್ಟಿನಲ್ಲಿ ದ್ವೇಷ ಭಾಷಣದ ವಿರುದ್ಧ ಕಠಿಣ ಕ್ರಮ, ಕೋಮು ಹಿಂಸಾಚಾರ ತಡೆಗೆ ಸಮಗ್ರ ಕಾನೂನು ಮತ್ತು ನಿಷ್ಪಕ್ಷಪಾತ ಪೊಲೀಸ್ ಸುಧಾರಣೆಗಳಿಗೆ ಅವರು ಆಗ್ರಹಿಸಿದರು.
ಅಲ್ಪಸಂಖ್ಯಾತರ ರಕ್ಷಣೆಯು ಕೇವಲ ಒಂದು ಸಮುದಾಯದ ಹಿತವಲ್ಲ, ಅದು ಭಾರತದ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಬಲಪಡಿಸುವ ದಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.












