ಸನ್ಮಾರ್ಗ ವಾರ್ತೆ
ಅಮೇರಿಕಾದ ಅಧ್ಯಕ್ಷ ಟ್ರಂಪ್ ಬೆದರಿಕೆಗೆ ಭಾರತ ತಿರುಗೇಟು ನೀಡಿದೆ. ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂಬ ಬೆದರಿಕೆಯೊಂದಿಗೆ ಭಾರತದ ಮೇಲೆ ಹೇರಿರುವ ತೆರಿಗೆಗೆ ಪ್ರತಿಯಾಗಿ ಭಾರತ ಇದೀಗ ರಷ್ಯಾದಿಂದ ಇನ್ನಷ್ಟು ಪ್ರಮಾಣದಲ್ಲಿ ತೈಲ ಖರೀದಿಸಲು ಮುಂದಾಗಿದೆ. ಮಾತ್ರ ಅಲ್ಲ ರಷ್ಯಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಯಾಗಿರುವ ಎಸ್ 400 ಮಾದರಿಯ ಇನ್ನಷ್ಟು ವ್ಯವಸ್ಥೆಯನ್ನು ಖರೀದಿಸುವುದಕ್ಕೆ ಭಾರತ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ.
ರಷ್ಯಾದ ಪ್ರಮುಖ ಅಧಿಕಾರಿಯೇ ಹೊಸ ಶಸ್ತ್ರಾಸ್ತ್ರ ಒಪ್ಪಂದದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚೈನಾದ ಸೈನಿಕ ಶಕ್ತಿಗೆ ಪ್ರತಿರೋಧ ಒಡ್ಡುವ ಉದ್ದೇಶದಿಂದ 2018ರಲ್ಲಿ ಭಾರತವು ರಷ್ಯಾದಿಂದ ಎಸ್ 400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸುವುದಕ್ಕೆ ಒಪ್ಪಂದ ಮಾಡಿಕೊಂಡಿತ್ತು. 5.5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಇದಾಗಿತ್ತು. ಈ ಒಪ್ಪಂದದ ಪ್ರಕಾರ ಈಗಾಗಲೇ ಮೂರು ಯೂನಿಟ್ ಗಳು ಭಾರತಕ್ಕೆ ಲಭ್ಯವಾಗಿವೆ . ಮುಂದಿನ ಎರಡು ವರ್ಷಗಳಲ್ಲಿ ಉಳಿದ ಯುನಿಟ್ಟುಗಳು ಕೂಡ ಭಾರತಕ್ಕೆ ತಲುಪಲಿವೆ.
ಅಮೆರಿಕದ ಒತ್ತಡಕ್ಕೆ ಮಣಿಯದೆ ಧೈರ್ಯ ಪ್ರದರ್ಶಿಸಿದ್ದಕ್ಕೆ ರಷ್ಯಾದ ವಿದೇಶಾಂಗ ಸಚಿವರು ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸಿದ್ದಾರೆ.
ಭಾರತ ಈಗ ಫ್ರಾನ್ಸ್ ಮತ್ತು ಇಸ್ರೇಲ್ ನಿಂದ ಶಸ್ತ್ರಾಸ್ತ್ರ ಖರೀದಿಸುತ್ತಿದ್ದರೂ ಶಸ್ತ್ರಾಸ್ರಕ್ಕಾಗಿ ಅತಿ ಹೆಚ್ಚು ಆಲಂಬಿಸಿರುವುದು ರಷ್ಯಾವನ್ನೇ ಆಗಿದೆ.












