130 ಕೋಟಿ ಭಾರತೀಯರಾದ ನಾವು ಯಾರೂ ಒಂಟಿಯಲ್ಲ, ಭಾನುವಾರ ರಾತ್ರಿ 9ಕ್ಕೆ ಮಹಡಿಯಲ್ಲಿ ನಿಂತು ದೀಪ ಬೆಳಗಿಸಿ- ಪ್ರಧಾನಿ ವೀಡಿಯೊ ಸಂದೇಶ

0
831

ಸನ್ಮಾರ್ಗ ವಾರ್ತೆ

ನವದೆಹಲಿ, ಏಪ್ರಿಲ್ 3- ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು 11 ನಿಮಿಷ 30 ಸೆಕೆಂಡುಗಳ ಈ ವಿಡಿಯೋದಲ್ಲಿ ಕೊರೋನಾದ ವಿರುದ್ಧ ಒಗ್ಗಟ್ಟಿನ ಸಮರ ಸಾರೋಣ ಎಂದು ಮನವಿ ಮಾಡಿದ್ದಾರೆ.

ಏಪ್ರಿಲ್ 5 ರಂದು ಭಾನುವಾರ ರಾತ್ರಿ 9 ಗಂಟೆಗೆ ಎಲ್ಲರೂ ತಮ್ಮ ತಮ್ಮ ಮನೆಯ ಮಹಡಿಗೆ ಬನ್ನಿ, ಮನೆಯ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ. ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಮನೆಯ ಮಹಡಿಯ ಮೇಲೆ ಅಥವಾ ಮನೆಯ ಎದುರು ನಿಂತು ಒಂಬತ್ತು ನಿಮಿಷಗಳವರೆಗೂ ಮೇಣದ ಬತ್ತಿಯನ್ನು ಅಥವಾ ದೀಪವನ್ನು ಬೆಳಗಿಸಿ. ಈ ಮೂಲಕ ಒಂದೇ ಸಮಯಕ್ಕೆ ದೇಶದ ಎಲ್ಲರೂ ಪ್ರಕಾಶವನ್ನು ಬೆಳಗುವುದರೊಂದಿಗೆ ಕೊರೋನಾದ ವಿರುದ್ಧ ಒಗ್ಗಟ್ಟಿನ ಸಮರ ಸಾರೋಣ ಎಂದು ಅವರು ಮನವಿ ಮಾಡಿದ್ದಾರೆ

ದೀಪಗಳನ್ನು ಬೆಳಗುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ನಮ್ಮ ಇಚ್ಛೆ ಮತ್ತು ಬದ್ಧತೆಯ ಎದುರು ಯಾವುದೇ ಸವಾಲೂ ಶಕ್ತಿಶಾಲಿಯಲ್ಲ ಎಂದೂ ಅವರು ಹೇಳಿದ್ದಾರೆ.

ನಾವೆಲ್ಲರೂ ಮನೆಯೊಳಗಿದ್ದೇವೆ ಎಂಬುದರ ಅರ್ಥ ನಾವು ಒಂಟಿ ಎಂದಲ್ಲ. ದೇಶದ ಎಲ್ಲ ಜನರೂ ಜೊತೆಯಾಗಿದ್ದಾರೆ. ಮನೆಯಲ್ಲಿ ಒಬ್ಬರೇ ಕುಳಿತು ಏನು ಮಾಡುವುದು, ವೈರಸ್ಸಿನ ವಿರುದ್ಧ ಒಬ್ಬರೇ ಹೇಗೆ ಹೋರಾಡಲು ಸಾಧ್ಯ ಎಂದೆಲ್ಲಾ ಚಿಂತಿಸಬೇಡಿ. ಮನೆಯೊಳಗಿದ್ದುಕೊಂಡೇ ಕೊರೋನಾದ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ

130 ಕೋಟಿ ಭಾರತೀಯರಾದ ನಾವು ಜೊತೆಗಿದ್ದೇವೆ. ನೀವ್ಯಾರೂ ಗುಂಪುಗೂಡಬೇಡಿ, ನಿಮ್ಮ ಮನೆಗಳಿಂದಲೇ ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಒಂಬತ್ತು ನಿಮಿಷಗಳ ಕಾಲ ಮೇಣದ ಬತ್ತಿ, ದೀಪ, ಟಾರ್ಚ್ ಅಥವಾ ಮೊಬೈಲ್ ಲೈಟ್ ಬೆಳಗಿಸಿ. ಈ ಮೂಲಕ ನಾವ್ಯಾರು ಒಂಟಿಯಲ್ಲ ಎಂಬುದನ್ನು ಸಾರಿ ಎಂದವರು ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.