ಮುಖ್ಯಮಂತ್ರಿಯಾದ ಮೇಲೆ ಮೋಹನ್ ಯಾದವ್ ಅವರ ಆಸ್ತಿಯಲ್ಲಿ ಹಲವು ಪಟ್ಟು ವೃದ್ಧಿ

0
393

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡ ಉಜ್ಜಯಿನಿಯಲ್ಲಿರುವ ಭೂ ವ್ಯವಹಾರಗಳ ವಿವಾದವು ಭಾರಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಮುಖ್ಯಮಂತ್ರಿಯ ಕುಟುಂಬದ ಭೂಮಿ ಆಸ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮೋಹನ್ ಯಾದವ್ ಅವರು 2021 ರಿಂದ 23ರ ವರೆಗೆ ಸಚಿವರಾಗಿದ್ದ ಅವಧಿಯಲ್ಲಿ ಅವರ ಕುಟುಂಬದ ಭೂ ಹಿಡುವಳಿಗಳು 82 ಎಕರೆಗಳಿಂದ 167 ಎಕರೆಗಳಿಗೆ ಹೆಚ್ಚಾದವು.

ನಂತರ 2023ರಲ್ಲಿ ಅವರು ಮುಖ್ಯಮಂತ್ರಿಯಾದ ಬಳಿಕ ಅದು 335 ಎಕರೆಗಳಿಗೆ ದ್ವಿಗುಣಗೊಂಡಿದೆ. ಈ ಸಮಯದಲ್ಲಿ ಕುಟುಂಬ ಮತ್ತು ಅವರ ರಿಯಲ್ ಎಸ್ಟೇಟ್ ಕಂಪನಿಗಳು ಜಂಟಿಯಾಗಿ 137 ಫ್ಲಾಟ್ ಗಳಲ್ಲಿ 168 ಎಕರೆ ಭೂಮಿಯನ್ನು ಸುಮಾರು 45 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿಯಾದ ನಂತರ ಖರೀದಿಸಿದ 168 ಎಕರೆ ಭೂಮಿಯಲ್ಲಿ 111 ಎಕರೆ ಭೂಮಿ ಸರ್ಕಾರ ಘೋಷಿಸಿದ ಹೊಸ ಹೆದ್ದಾರಿಗಳು ಮತ್ತು ರಸ್ತೆ ಅಭಿವೃದ್ಧಿ ಯೋಜನೆಗಳ ಬಳಿ ಇದೆ ಎಂಬುದು ಗೊತ್ತಾಗಿದೆ. ಮುಖ್ಯಮಂತ್ರಿ ಪತ್ನಿ ಸೀಮಾ ಮಗ ವೈಭವ್ ಸೊಸೆ ಶಾಲಿನಿ ಮತ್ತು ಇತರ ಸಂಬಂಧಿಕರು ಸಹ ಈ ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಆದರೆ ಬಿಜೆಪಿ ನಾಯಕತ್ವ ಮತ್ತು ಮುಖ್ಯಮಂತ್ರಿ ಕಚೇರಿ ಈ ಎಲ್ಲಾ ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಸ್ಪಷ್ಟ ಪಡಿಸಿವೆ. ಮುಖ್ಯಮಂತ್ರಿ ಮೋಹನ್ ಯಾದವ್ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.