SIR: ರಾಜ್ಯ ಸರಕಾರದ ಹೊಣೆಗಾರಿಕೆ ಏನು?

0
418

✍️ ಏ.ಕೆ. ಕುಕ್ಕಿಲ

ಕೇರಳ ಮತ್ತು ತಮಿಳುನಾಡುಗಳಲ್ಲಿ SIR ಪ್ರಕ್ರಿಯೆ ಜೊತೆ ಜೊತೆಗೇ ನಡೆದಿತ್ತು. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯನ್ನು ಪ್ರಬಲವಾಗಿ ವಿರೋಧಿಸುವ ಸರಕಾರಗಳಿದ್ದವು. ಕೇರಳದಲ್ಲಿ ಪಿಣರಾಯ್ ವಿಜಯನ್ ಅವರ ಕಮ್ಯುನಿಸ್ಟ್ ಸರಕಾರ ಇದ್ದರೆ, ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರವಿತ್ತು. SIR ಪ್ರಕ್ರಿಯೆಗಿಂತ ಮೊದಲು ಕೇರಳದಲ್ಲಿ ಒಟ್ಟು 2 ಕೋಟಿ 79 ಲಕ್ಷ ಮತದಾರರಿದ್ದರು. SIRನ ನಂತರ 2 ಕೋಟಿ 70 ಲಕ್ಷ ಮತದಾರರು ಅಂತಿಮ ಪಟ್ಟಿಯಲ್ಲಿ ಕಾಣಿಸಿ ಕೊಂಡರು. ಅಂದರೆ, SIR ಮೂಲಕ ಇಲ್ಲಿ ಡಿಲೀಟ್ ಆದ ಮತದಾರರ ಸಂಖ್ಯೆ 9 ಲಕ್ಷ. ಅಂದಹಾಗೆ,

ಕೇರಳಕ್ಕೆ ಹೋಲಿಸಿದರೆ ತಮಿಳುನಾಡು ದೊಡ್ಡ ರಾಜ್ಯ. 2025 ಡಿಸೆಂಬರ್‌ನಲ್ಲಿ SIR ಪ್ರಕ್ರಿಯೆ ಆರಂಭವಾಗುವುದಕ್ಕಿಂತ ಮುಂಚೆ ಇಲ್ಲಿಯ ಮತದಾರರ ಸಂಖ್ಯೆ 6 ಕೋಟಿ 41 ಲಕ್ಷವಾಗಿತ್ತು. SIR ಬಳಿಕ ಈ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡುಬಂತು. 5 ಕೋಟಿ 67 ಲಕ್ಷ ಮಂದಿ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಸ್ಥಾನ ಉಳಿಸಿಕೊಂಡರು. ಒಟ್ಟು 74 ಲಕ್ಷ ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿದರು. ಹಾಗಂತ,

ಕೇರಳಕ್ಕೆ ಹೋಲಿಸಿದರೆ, ಜನಸಂಖ್ಯೆ ಮತ್ತು ವಿಸ್ತೀರ್ಣದಲ್ಲಿ ತಮಿಳುನಾಡು ಎರಡು ಪಟ್ಟು ಇದೆ ಎಂಬುದು ನಿಜ. ಆದರೂ ಕೇರಳದಲ್ಲಿ ಕೇವಲ 9 ಲಕ್ಷ ಮಂದಿಯ ಹೆಸರು ಮಾತ್ರ ಡಿಲೀಟ್ ಆಗುವಾಗ ತಮಿಳುನಾಡಿನಲ್ಲಿ 74 ಲಕ್ಷ ಮಂದಿಯ ಹೆಸರು ಡಿಲೀಟ್ ಆದದ್ದು ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆಯೊಂದಕ್ಕೆ ಅವಕಾಶ ಇದ್ದೇ ಇದೆ. ಇದಕ್ಕೆ ಸಮರ್ಪಕ ಉತ್ತರವನ್ನು ಕಂಡು ಕೊಂಡರೆ ಕರ್ನಾಟಕದಲ್ಲಿ ಜೂನ್ 30 ರಿಂದ ಆರಂಭವಾಗುವ SIRನಲ್ಲಿ ನಾಗರಿಕರು ಮತ್ತು ಸರಕಾರದ ಪಾತ್ರ ಏನು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ.

ಇಲ್ಲಿ ಇನ್ನೂ ಒಂದು ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮ.

ಕೇರಳ ಮತ್ತು ತಮಿಳುನಾಡಿಗಿಂತ ಮೊದಲು ಬಿಹಾರದಲ್ಲಿ ಮತ್ತು ಆ ಬಳಿಕ ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆ ನಡೆದಿತ್ತು. SIRಗಿಂತ ಮೊದಲು ಪಶ್ಚಿಮ ಬಂಗಾಳದಲ್ಲಿ 7 ಕೋಟಿ 66 ಲಕ್ಷ ಮತದಾರರಿದ್ದರು. SIR ಬಳಿಕ ಇವರಲ್ಲಿ 91 ಲಕ್ಷ ಮಂದಿಯ ಹೆಸರನ್ನು ಡಿಲೀಟ್ ಮಾಡಲಾಯಿತು. ಸುಮಾರು 1 ಲಕ್ಷದ 88 ಸಾವಿರ ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಯಿತು. ಇದೇ ವೇಳೆ, ಜೂನ್ 2025ರಲ್ಲಿ ಬಿಹಾರದಲ್ಲಿ ನಡೆದ SIR ಪ್ರಕ್ರಿಯೆಯೂ ಇಂಥ ‘ಡಿಲೀಟ್’ಗಳಿಂದ ಮುಕ್ತವಲ್ಲ. ಇಲ್ಲಿ SIR ಪ್ರಕ್ರಿಯೆಗಿಂತ ಮೊದಲು 7 ಕೋಟಿ 89 ಲಕ್ಷ ಮತದಾರರಿದ್ದರು. SIRನ ಮೂಲಕ ಇವರಲ್ಲಿ 69 ಲಕ್ಷದಷ್ಟು ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಯಿತು. ಅಂದಹಾಗೆ,

ಈ ನಾಲ್ಕೂ ರಾಜ್ಯಗಳ SIR ಪ್ರಕ್ರಿಯೆಯನ್ನು ಪರಿಶೀಲಿಸಿದರೆ, ಒಂದು ಅಚ್ಚರಿ ಎದುರಾಗುತ್ತದೆ. ಅದುವೇ ಕೇರಳದ SIR. ಇಲ್ಲಿ ಮತದಾರರ ಪಟ್ಟಿಯಿಂದ ಡಿಲೀಟ್ ಆದ ಮತದಾರರ ಸಂಖ್ಯೆ ಉಳಿದ ಮೂರೂ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಬರೇ 9 ಲಕ್ಷ. ಹಾಗಂತ, ಉಳಿದ ಮೂರೂ ರಾಜ್ಯಗಳಲ್ಲಿ ಕೇರಳಕ್ಕಿಂತ ದುಪ್ಪಟ್ಟು ಜನಸಂಖ್ಯೆಯಿದೆ ಎಂದು ಸಮರ್ಥಿಸಿದರೂ ಅಲ್ಲಿ ಡಿಲೀಟ್ ಆದವರ ಸಂಖ್ಯೆ ಈ ದುಪ್ಪಟ್ಟಿಗಿಂತ ಬಹಳ ಹೆಚ್ಚು. 6.41 ಕೋಟಿ ಮತದಾರರಿರುವ ತಮಿಳುನಾಡಿನಲ್ಲಿ ಡಿಲೀಟ್ ಆದವರ ಸಂಖ್ಯೆ 74 ಲಕ್ಷ. 7.66 ಕೋಟಿ ಮತದಾರರಿದ್ದ ಪಶ್ಚಿಮ ಬಂಗಾಳದಲ್ಲಿ ಡಿಲೀಟ್ ಆದವರ ಸಂಖ್ಯೆ 91 ಲಕ್ಷ. 7.89 ಕೋಟಿ ಮತದಾರರಿದ್ದ ಬಿಹಾರದಲ್ಲಿ ಡಿಲೀಟ್ ಆದವರ ಸಂಖ್ಯೆ 69 ಲಕ್ಷ. ಆದ್ದರಿಂದಲೇ ಕೇರಳ ಮುಖ್ಯವಾಗುತ್ತದೆ. ಅಲ್ಲಿನ SIRನ್ನು ಮಾಡೆಲ್ ಎಂದು ಪರಿಗಣಿಸಿ ಪರಿಶೀಲಿಸಬೇಕಾಗುತ್ತದೆ.

ಮುಖ್ಯವಾಗಿ ಕೇರಳದ ಯಶಸ್ಸಿನ ಹಿಂದೆ ಐದಾರು ಸಂಗತಿಗಳಿವೆ.

1. SIಖ ಪ್ರಕ್ರಿಯೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬದ್ಧತೆಯಿಂದ ತೊಡಗಿಸಿಕೊಳ್ಳು ವುದಕ್ಕಾಗಿ ಕೇರಳ ಸರಕಾರವು ಬಿಎಲ್‌ಓ ಅಥವಾ ಬೂತ್ ಲೆವೆಲ್ ಆಫೀಸರ್‌ಗಳಿಗೆ ಒಂದು ತಿಂಗಳ ರಜೆಯನ್ನು ಘೋಷಿಸಿತು. ಆ ಅವಧಿಯಲ್ಲಿ ಪ್ರತಿ ಬಿಎಲ್‌ಓ ಕೂಡಾ ಇತರ ಯಾವುದೇ ಸರಕಾರಿ ಕೆಲಸಗಳನ್ನು ಮಾಡದೇ ತಮ್ಮ ವ್ಯಾಪ್ತಿಯಲ್ಲಿ ಬರುವ 800ರಿಂದ 1200ರಷ್ಟು ಮನೆಗಳಿಗೆ ಭೇಟಿ ಕೊಟ್ಟು ಎನ್ಯುಮಲೇಶನ್ ಫಾರ್ಮ್ ಸಹಿತ ಇತರ ಫಾರ್ಮ್‌ಗಳನ್ನು ತುಂಬುವುದನ್ನು ಖಾತರಿಪಡಿಸಿತು. ಮಾತ್ರವಲ್ಲ, ಮತದಾರರು ಭರ್ತಿ ಮಾಡಿಕೊಟ್ಟ ಫಾರ್ಮ್ಗಳಲ್ಲಿ ಹೆಸರು, ವಯಸ್ಸು, ವಿಳಾಸ, ತಂದೆ/ಗಾರ್ಡಿಯನ್ ಹೆಸರು, ಜನ್ಮ ದಿನಾಂಕ, ಸ್ಥಳ ಇತ್ಯಾದಿಗಳನ್ನು ಪರಿಶೀಲಿಸುವಂತೆ, ತಪ್ಪಿದ್ದಲ್ಲಿ ಸರಿಪಡಿಸುವಂತೆ ಮತ್ತು ಮತದಾರರಿಗೆ ಮಾರ್ಗದರ್ಶನ ನೀಡುವಂತೆ ಒತ್ತಡ ಹೇರಿತು. ಈ ಕಾರಣದಿಂದಲೇ ಬಿಎಲ್‌ಓಗಳು ಮನೆಮನೆಗೆ ಭೇಟಿ ಕೊಟ್ಟು ನೀಡಿದ್ದ ಎನ್ಯುಮಲೇಶನ್ ಫಾರ್ಮ್‌ಗಳಲ್ಲಿ 99.96% ಫಾರ್ಮ್ಗಳು ಕೂಡಾ ಭರ್ತಿ ಮಾಡಿ ಹಿಂತಿರುಗಿತ್ತು.

2. ಕೇರಳದಲ್ಲಿ ಆಡಳಿತ ಕೂಟವಾದ ಎಡರಂಗ ಮತ್ತು ವಿರೋಧ ಪಕ್ಷವಾದ ಐಕ್ಯರಂಗ ಎರಡೂ ಬಿಎಲ್‌ಎ ಅಥವಾ ಬೂತ್ ಲೆವೆಲ್ ಏಜೆಂಟ್‌ಗಳನ್ನು ನೇಮಿ ಸಿತ್ತು. ಇವರು ಎನ್ಯುಮಲೇಶನ್ ಫಾರ್ಮ್ ಸಹಿತ ಮತದಾರರಿಗೆ ಬಿಎಲ್‌ಓಗಳು ನೀಡಿದ ಫಾರ್ಮ್‌ಗಳನ್ನು ಭರ್ತಿ ಮಾಡಿಸಿ ಮರಳಿ ಪಡೆಯುವಲ್ಲಿ ನೆರವಾದರು. ಇದಕ್ಕಾಗಿ ಮನೆಮನೆ ಭೇಟಿ ನೀಡಿದರು. ಇದು ಬಿಎಲ್‌ಓಗಳ ಒತ್ತಡವನ್ನು ಕಡಿಮೆ ಮಾಡಿತು ಮತ್ತು ಅವರು ಹೆಚ್ಚು ಬದ್ಧತೆಯೊಂದಿಗೆ ಕೆಲಸ ಮಾಡಲು ಸಹಾಯಕವಾಯಿತು.

3. ಯಾರಲ್ಲಿ ಸಮರ್ಪಕ ದಾಖಲೆಗಳು ಇಲ್ಲವೋ ಅವರಿಗೆ ದಾಖಲೆಗಳನ್ನು ಪಡೆದುಕೊಳ್ಳಲು ಬಿಎಲ್‌ಓಗಳು ನೆರವಾದರು. ಮುಖ್ಯವಾಗಿ ಚುನಾವಣಾ ಆಯೋಗ ಮಾನ್ಯ ಮಾಡಿರುವ ದಾಖಲೆಗಳ ಪೈಕಿ ವಾಸ್ತವ್ಯ ಸರ್ಟಿಫಿಕೇಟ್ ಕೂಡಾ ಒಂದು. ಈ ಸರ್ಟಿಫಿಕೇಟನ್ನು ಪಡಕೊಳ್ಳುವುದಕ್ಕೆ ಮತದಾರರಿಗೆ ಬಿಎಲ್‌ಓಗಳು ನೆರವಾದರು. ಪಂಚಾಯತ್ ಅಥವಾ ರೆವೆನ್ಯೂ ಅಧಿಕಾರಿಗಳು ಅಥವಾ ಅಕ್ಷಯ ಕೇಂದ್ರಗಳ ಮೂಲಕ ವಾಸ್ತವ್ಯ ಸರ್ಟಿಫಿಕೇಟ್ ಪಡಕೊಳ್ಳುವುದಕ್ಕೆ ಮತದಾರರಿಗೆ ಸಹಕರಿಸಿದರು. ಈ ಕುರಿತಂತೆ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿತ್ತು ಎಂಬ ಅಭಿಪ್ರಾಯವೂ ಇದೆ. ಆದ್ದರಿಂದಲೇ, ಅರ್ಜಿ ಸಲ್ಲಿಸಿದ ಕೇವಲ ಮೂರೇ ಮೂರು ದಿನಗಳಲ್ಲಿ ಮತದಾರರಿಗೆ ವಾಸ್ತವ್ಯ ಸರ್ಟಿಫಿಕೇಟ್ ಲಭ್ಯವಾಯಿತು.

4. ಚುನಾವಣಾ ಅಧಿಕಾರಿಗಳನ್ನು ರಾಜ್ಯ ಸರಕಾರ ವೈರಿಯಂತೆ ನೋಡದೇ ಸಹಕಾರ ಮನೋಭಾವ ಪ್ರದರ್ಶಿಸಿತು. ಚುನಾವಣಾ ಆಯೋಗ ಮತ್ತು ರಾಜ್ಯ ಸರಕಾರ ಜೊತೆಗೂಡಿ ಈ SIR ಪ್ರಕ್ರಿಯೆಯನ್ನು ನಡೆಸುವ ಬುದ್ಧಿವಂತಿಕೆಯನ್ನು ಪ್ರದರ್ಶಿಸಿತು. ಇದರಿಂದಾಗಿ ಚುನಾವಣಾ ಆಯೋಗದ ಅಧಿ ಕಾರಿಗಳು ಬಿಎಲ್‌ಓಗಳಿಗೆ ಸಹಕಾರವನ್ನು ನೀಡಿದರು ಮತ್ತು ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿದರು.

5. ಕೇರಳದ ಸಾಕ್ಷರತೆಯೂ ಇಲ್ಲಿ ಬಹುಮುಖ್ಯ ಪಾತ್ರ ವನ್ನು ವಹಿಸಿತು. ಹಾಗೆಯೇ, ಡಿಜಿಟಲ್ ಕ್ಷೇತ್ರದಲ್ಲಿ ಕೇರಳೀಯರು ಮುಂಚೂಣಿಯಲ್ಲಿರುವುದೂ ಈ SIRನ ಯಶಸ್ಸಿಗೆ ಕೊಡುಗೆಯನ್ನು ನೀಡಿತು. ಜನರು ಡಿಜಿಟಲ್ ಮೂಲಕ ಫಾರ್ಮ್‌ಗಳನ್ನು ತುಂಬಿದರು ಮತ್ತು ದಾಖಲೆಗಳನ್ನು ಪಡಕೊಂಡರು. ಮುಖ್ಯವಾಗಿ ಫಾರ್ಮ್‌ಗಳನ್ನು ತುಂಬುವಲ್ಲಿ ಮತ್ತು ದಾಖಲೆಗಳನ್ನು ಸಿದ್ಧ ಪಡಿಸುವಲ್ಲಿ ಅಲ್ಲಿನ ಸಾಕ್ಷರತೆ ಬಹಳ ದೊಡ್ಡ ಪಾತ್ರವನ್ನು ವಹಿಸಿತು.

6. ಜನನ ಪ್ರಮಾಣ ಪತ್ರ, ಓಟರ್ ಐಡಿ, ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳು ಹೆಚ್ಚಿನ ಮತದಾರರಲ್ಲಿ ಇತ್ತು. SIR ಜಾರಿಯಾಗುವುದಕ್ಕಿಂತ ಮೊದಲೇ ಜನರು ಈ ಬಗ್ಗೆ ಎಚ್ಚರಿಕೆ ವಹಿಸಿದ್ದರು ಮತ್ತು ದಾಖಲೆಗಳನ್ನು ಸಿದ್ಧಪಡಿಸಿಟ್ಟು ಕೊಂಡಿದ್ದರು.

ಆದರೆ ತಮಿಳುನಾಡಿನ ಸ್ಟಾಲಿನ್ ಸರಕಾರ ಇಂಥದ್ದೊಂದು ಸಿದ್ಧತೆಯನ್ನು ಮಾಡಿಕೊಂಡೇ ಇರಲಿಲ್ಲ.

ತಮಿಳುನಾಡಿನ ಸ್ವರೂಪ ಏನೆಂದರೆ, ಅಲ್ಲಿನ ದೊಡ್ಡದೊಂದು ಜನಸಂಖ್ಯೆ ಹಳ್ಳಿಗೆ ವಿದಾಯ ಕೋರಿ ನಗರಗಳಲ್ಲಿ ವಾಸಿಸುತ್ತಿದೆ. ಹಾಗೆಯೇ, ಬಿಹಾರ ಮತ್ತು ಉತ್ತರ ಪ್ರದೇಶಗಳಿಂದ ವಲಸೆ ಬಂದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ, 66 ಲಕ್ಷಕ್ಕೂ ಅಧಿಕ ಜನರು ತಾವು ಮತದಾರರಾಗಿ ನೋಂದಾಯಿಸಿಕೊಂಡಿದ್ದ ಮನೆಗಳಲ್ಲಿ ವಾಸವಿರಲಿಲ್ಲ. ಹೀಗಾಗಿ ಅವರ ಹೆಸರು ಸುಲಭದಲ್ಲಿ ಡಿಲೀಟ್ ಆದುವು. ಇವರು ಬೇರೆ ಕಡೆ ಮತದಾರರಾಗಿ ನೋಂದಾಯಿಸಿಕೊಂಡಿರಬಹುದು ಎಂದು ಭಾವಿಸಲಾಯಿತು. ಇದಲ್ಲದೇ, 8 ಲಕ್ಷಕ್ಕಿಂತ ಅಧಿಕ ಮತದಾರರು ಎನ್ಯುಮಲೇಶನ್ ಫಾರ್ಮನ್ನು ತುಂಬಿಯೇ ಇರಲಿಲ್ಲ. ಈ ಮೂಲಕ ಅನಾಯಾಸವಾಗಿ ಅವರು ಮತದಾರರ ಪಟ್ಟಿಯಿಂದ ಹೊರಗುಳಿದರು. ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದು, SIRನಿಂದಾಗಿ ಅವರ ಹೆಸರುಗಳು ಡಿಲೀಟ್ ಆಗುತ್ತವೆ ಎಂದು ಸ್ಟಾಲಿನ್ ಸರಕಾರ ಭಾವಿಸಿತ್ತು ಮತ್ತು ಆ ಕಾರಣಕ್ಕಾಗಿ ಆರಾಮವಾಗಿತ್ತು ಎಂದು ಹೇಳಲಾಗುತ್ತದೆ. ಸರಕಾರದ ಉದಾಸೀನ ಮನೋಭಾವವೇ 74 ಲಕ್ಷ ಮತದಾ ರರ ಹೆಸರು ಡಿಲೀಟ್ ಆಗಲು ಕಾರಣ ಎಂಬ ವಾದವೂ ಇದೆ. ಆದ್ದರಿಂದ,

ಕರ್ನಾಟಕ ಸರಕಾರ ಎಚ್ಚೆತ್ತುಕೊಳ್ಳಬೇಕು. ತಮಿಳುನಾಡಿನಂತೆ ನಿದ್ರಿಸದೇ ಕೇರಳದಂತೆ ಸಕ್ರಿಯವಾಗಬೇಕು. ಜೂನ್ 30ರಿಂದ ಒಂದು ತಿಂಗಳ ಕಾಲ ಬಿಎಲ್‌ಓಗಳಿಗೆ ಅವರ ಸರಕಾರಿ ಕೆಲಸಗಳಿಂದ ವಿನಾಯಿತಿ ಕೊಟ್ಟು ಪೂರ್ಣ ಪ್ರಮಾಣದಲ್ಲಿ SIRನಲ್ಲಿ ಭಾಗಿಯಾಗುವಂತೆ ಮತ್ತು ಮತದಾರರಿಗೆ ನೆರವಾಗುವಂತೆ ತಿಳಿಸಬೇಕು. 2002 ಮತ್ತು 2025ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು, ಹೆಸರಿದ್ದರೂ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದವರಿಗೆ ಅವನ್ನು ಸರಿಪಡಿಸಿಕೊಳ್ಳುವುದಕ್ಕೆ ಬೇಕಾದ ಮಾರ್ಗದರ್ಶನ ನೀಡಬೇಕು. ಇದೇವೇಳೆ, ವಾಸ್ತವ್ಯ ಸರ್ಟಿಫಿಕೇಟ್ ಸುಲಭ ಮತ್ತು ಶೀಘ್ರವಾಗಿ ಲಭ್ಯಗೊಳಿಸುವಂತೆ ತಹಶೀಲ್ದಾರ್‌ರಿಗೆ ಸರಕಾರ ಸೂಚನೆ ಕೊಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಬಿಎಲ್‌ಎ ಅಥವಾ ಬೂತ್ ಲೆವೆಲ್ ಏಜೆಂಟ್‌ಗಳನ್ನು ನೇಮಿಸುವುದಕ್ಕೆ ಅವಕಾಶವಿದ್ದು, ಇವರಿಗೆ ಸಮರ್ಪಕ ತರಬೇತಿ ಕೊಟ್ಟು ಪ್ರತಿ ಮನೆ ಮನೆಗೂ ಇವರು ಭೇಟಿ ಕೊಡುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ತನ್ನ ಮತದಾರರು ಯಾರು ಎಂಬುದು ಸರಕಾರಕ್ಕೆ ಗೊತ್ತಿದೆ.

ಬಡವರು, ಹಿಂದುಳಿದವರು, ಆದಿವಾಸಿಗಳು, ಮುಸ್ಲಿಮರು, ಕ್ರೈಸ್ತರು, ದಲಿತರು ಮುಂತಾದವರೇ ಈ ಸರಕಾರದ ಬೆಂಬಲಿಗರಾಗಿದ್ದು, ಇವರನ್ನು ಗುರಿಯಾಗಿಸಿ ಬಿಎಲ್‌ಎಗಳು ಕಾರ್ಯಪ್ರವೃತ್ತರಾಗುವಂತೆ ಸರಕಾರ ಸೂಚನೆ ಕೊಡಬೇಕು. ಈ ಸಮುದಾಯಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟು ಕೊಳ್ಳುವಷ್ಟು ಸಾಕ್ಷರತೆಯನ್ನು ಹೊಂದಿರುವ ಸಾಧ್ಯತೆಗಳು ಕಡಿಮೆ. ಆದ್ದರಿಂದ, ಪ್ರತಿ ಮನೆಗೂ ವಾಸ್ತವ್ಯ ಸರ್ಟಿಫಿಕೇಟ್ ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಚುನಾವಣಾ ಅಧಿಕಾರಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು SIR ಸುಗಮವಾಗಿ ಮತ್ತು ಸಮರ್ಪಕವಾಗಿ ನಡೆಯುವುದಕ್ಕೆ ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಅಂದಹಾಗೆ,

ಸರಕಾರ ಒಪ್ಪಿದರೂ ಒಪ್ಪದಿದ್ದರೂ SIR ನಡೆದೇ ನಡೆಯುತ್ತದೆ. ಈ SIRನ ಹಿಂದಿನ

ಉದ್ದೇಶ, ರಾಜಕೀಯ ಸಂಚು ಇತ್ಯಾದಿಗಳು ಏನೇ ಇರಲಿ, ಅವುಗಳನ್ನೇ ಹೇಳಿಕೊಂಡು ತಿರುಗುವುದರಿಂದ ಸಂಚುಕೋರರಿಗಷ್ಟೇ ಪ್ರಯೋಜನವಾದೀತು. ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಮತದಾರರು ಈ ಮ್ಯಾಪಿಂಗು, ಸ್ಪೆಲ್ಲಿಂಗ್ ಮಿಸ್ಟೇಕು ಇತ್ಯಾದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಾಧ್ಯತೆ ಕಡಿಮೆ. ನಗರಗಳಲ್ಲೂ ಈ ಬಗ್ಗೆ ಉದಾಸೀನ ಭಾವ ಇದೆ. ಈ ಹಿನ್ನೆಲೆಯಲ್ಲಿ ಸರಕಾರದ ಜವಾಬ್ದಾರಿ ಹೆಚ್ಚಿದೆ. ತನ್ನ ಕಾರ್ಯಕರ್ತರನ್ನು ಪ್ರತಿ ಮನೆ ಮನೆಗೂ ಭೇಟಿ ಕೊಡುವಂತೆ ಮಾಡಿ SIR ಪ್ರಕ್ರಿಯೆಯಲ್ಲಿ ಯಾರ ಹೆಸರೂ ಡಿಲೀಟ್ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು. ಉತ್ತಮವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಬಹುಮಾನ ಕೊಡುವಂಥ ಪ್ರೋತ್ಸಾಹದಾಯಕ ಕ್ರಮಗಳನ್ನೂ ಕೈಗೊಳ್ಳಬಹುದು.

ಕರ್ನಾಟಕಕ್ಕೆ ತಮಿಳುನಾಡು ಪಾಠವಾಗಲಿ, ಕೇರಳ ಮಾದರಿಯಾಗಲಿ.