ಸನ್ಮಾರ್ಗ ವಾರ್ತೆ
ಮಂಗಳೂರು: ಮಂಗಳೂರಿನಿಂದ ಉಮ್ರಾ ಯಾತ್ರೆಗಾಗಿ ಸೌದಿ ಅರೇಬಿಯಾದ ಪವಿತ್ರ ಮಕ್ಕಾ ಮತ್ತು ಮದೀನಾಕ್ಕೆ ತೆರಳಿರುವ 500ಕ್ಕೂ ಅಧಿಕ ಯಾತ್ರಿಕರು, 15 ದಿನಗಳ ಯಾತ್ರೆಯ ಅವಧಿ ಪೂರ್ಣಗೊಂಡಿದ್ದರೂ ವಿಮಾನಗಳ ರದ್ದತಿ ಹಾಗೂ ಪ್ರಾದೇಶಿಕ ಉದ್ವಿಗ್ನ ಪರಿಸ್ಥಿತಿಯಿಂದಾಗಿ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಜ್ ಮತ್ತು ಉಮ್ರಾ ಖಾಸಗಿ ಪ್ರವಾಸಿ ಸಂಘಟನಾ ಸಂಸ್ಥೆಗಳ ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಝಾಕೀರ್, ಸೌದಿ ಅರೇಬಿಯಾದಲ್ಲಿರುವ ಯಾತ್ರಿಕರ ಸುರಕ್ಷತೆ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ವಿಮಾನಗಳ ರದ್ದತಿಯಿಂದ ತೊಂದರೆಗೊಳಗಾಗಿರುವ ಪ್ರಯಾಣಿಕರಿಗೆ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ನಿಯಮಾನುಸಾರ ಹಣ ಮರುಪಾವತಿ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಟ್ರಾವೆಲ್ ಸಂಸ್ಥೆಗಳು ಹೊಟೇಲ್ ಬುಕಿಂಗ್ಗಾಗಿ ಪಾವತಿಸಿರುವ ಹಣದ ನಷ್ಟ ಹಾಗೂ ಮರುಪಾವತಿಯಲ್ಲಿ ಉಂಟಾಗುತ್ತಿರುವ ವಿಳಂಬದ ಸಮಸ್ಯೆಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಸ್ತುತ ಪರಿಸ್ಥಿತಿಯಿಂದ ಪ್ರಯಾಣಿಕರು, ಯಾತ್ರಿಕರು ಹಾಗೂ ಟ್ರಾವೆಲ್ ಸಂಸ್ಥೆಗಳು ಸಂಕಷ್ಟ ಎದುರಿಸುತ್ತಿವೆ. ಆದ್ದರಿಂದ ಪ್ರಯಾಣಿಕರು ಮತ್ತು ಯಾತ್ರಿಕರು ಟ್ರಾವೆಲ್ ಸಂಸ್ಥೆಗಳೊಂದಿಗೆ ಸಹಕರಿಸಿ, ಹಣ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕಾಲಾವಕಾಶ ನೀಡಬೇಕು ಎಂದು ಝಾಕೀರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಸ್ಮಾನ್ ಸಅದಿ ಪಟ್ಟೋರಿ, ಝಾಕೀರ್, ಹಮೀದ್, ಹಸನ್ ಸಾದ್, ಇಕ್ಬಾಲ್ ಹಾಗೂ ಮೊಯ್ದಿನ್ ಉಪಸ್ಥಿತರಿದ್ದರು.












