ಸನ್ಮಾರ್ಗ ಸಂಪಾದಕೀಯ
ಭಾರತದ ಮುಸ್ಲಿಮ್ ಸಮುದಾಯ ಒಂದು ಕಡೆ ಪ್ರಭುತ್ವದ ತಾರತಮ್ಯಕ್ಕೆ ಗುರಿಯಾಗಿದ್ದರೆ ಇನ್ನೊಂದು ಕಡೆ ಮಾದಕ ದ್ರವ್ಯದಂಥ ಅಮಲು ಪದಾರ್ಥಗಳ ಸವಾಲನ್ನೂ ಎದುರಿಸಬೇಕಾಗಿದೆ. ಪ್ರಭುತ್ವದ ತಾರತಮ್ಯವಾದರೋ ಕಣ್ಣಿಗೆ ಕಾಣುತ್ತದೆ. ಅದನ್ನು ಪ್ರಶ್ನಿಸಲು ಮುಸ್ಲಿಮರು ಮಾತ್ರವಲ್ಲ, ಈ ದೇಶದ ಜಾತ್ಯತೀತ ಸ್ವರೂಪದಲ್ಲಿ ನಂಬಿಕೆ ಇಟ್ಟಿರುವ ಕೋಟ್ಯಂತರ ಮಂದಿ ಇದ್ದಾರೆ. ಆದರೆ,
ಸಮುದಾಯವನ್ನು ಒಳಗಿಂದೊಳಗೇ ಕೊರೆಯುತ್ತಿರುವ ಮಾದಕ ಪದಾರ್ಥಗಳ ವಿಷಯ ಇಷ್ಟು ಸರಳ ಅಲ್ಲ. ಅದನ್ನು ಹೊರಗಡೆ ಹೇಳಿಕೊಳ್ಳುವಂತಿಲ್ಲ, ಒಳಗಡೆ ಸಹಿಸಿಕೊಳ್ಳುವಂತಿಲ್ಲ ಎಂಬ ಸ್ಥಿತಿ ಅಸಂಖ್ಯ ಕುಟುಂಬಗಳಲ್ಲಿದೆ. ತಮ್ಮ ಮಗ ಅಥವಾ ಮಗಳು ಎಲ್ಲಿ ಡ್ರಗ್ಸ್ ಆಕರ್ಷಣೆಗೆ ಒಳಗಾಗುತ್ತಾರೋ ಎಂಬೊಂದು ಭಯ ಇಟ್ಟುಕೊಂಡೇ ಹೆಚ್ಚಿನ ಮುಸ್ಲಿಮ್ ಪೋಷಕರು ಕಾಲೇಜುಗಳನ್ನು ಆಯ್ಕೆ ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿಡಿದು ಬೆಂಗಳೂರಿನ ವರೆಗೆ ಎಲ್ಲೆಡೆಯೂ ಪೋಷಕರಲ್ಲಿ ಈ ಭಯ ಇದೆ. ಕಲಿಕೆಗೆ ಯಾವ ಕಾಲೇಜು ಉತ್ತಮ ಎಂಬ ಪರಿಶೀಲನೆಯ ಜೊತೆಗೇ ಯಾವ ಕಾಲೇಜು ಡ್ರಗ್ಸ್ ಮುಕ್ತವಾಗಿದೆ ಎಂಬ ಪರಿಶೀಲನೆಯನ್ನೂ ಪೋಷಕರು ಕಡ್ಡಾಯವಾಗಿ ಮಾಡುವಷ್ಟು ಮಾದಕ ಪದಾರ್ಥಗಳ ಭಯ ಸಮಾಜವನ್ನು ಆವರಿಸಿಬಿಟ್ಟಿದೆ.
ಕಳೆದವಾರ ಮಂಗಳೂರು ಸಿಸಿಬಿ ಪೊಲೀಸರು ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡರು. ಬಂಧಿತ ಮೂವರು ಆರೋಪಿಗಳೂ ಮುಸ್ಲಿಮರೇ. ಅದರಲ್ಲೂ ಇಬ್ಬರು ಸ್ಥಳೀಯರು. ಒಬ್ಬ ಕೇರಳದವ.
ಬೆಂಗಳೂರು ಬಿಟ್ಟರೆ, ಮಾದಕ ಪದಾರ್ಥಗಳ ಕೇಂದ್ರವಾಗಿ ಮಂಗಳೂರು ಗುರುತಿಸಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ 2700ಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾಗಿವೆ. 2024 ಮತ್ತು 25ರಲ್ಲಿ ಒಟ್ಟು 370ಕ್ಕಿಂತ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ದೆಹಲಿ, ಪಂಜಾಬ್, ಮುಂಬೈ, ಬೆಂಗಳೂರು ಮತ್ತು ಕೇರಳ ಗಡಿ ಭಾಗದ ಮೂಲಕ ಮಂಗಳೂರಿಗೆ ಮಾದಕ ಪದಾರ್ಥಗಳು ಬರುತ್ತಿವೆ. ಮುಖ್ಯವಾಗಿ ಪಂಜಾಬ್ ಮತ್ತು ಹರ್ಯಾಣಗಳು ಮಾದಕ ಪದಾರ್ಥಗಳ ಬಹುದೊಡ್ಡ ಪೂರೈಕೆ ಕೇಂದ್ರಗಳಾಗಿವೆ. ಹಾಗಂತ,
ಪೊಲೀಸ್ ವ್ಯವಸ್ಥೆ ಈ ಎಲ್ಲವನ್ನೂ ಕಣ್ಣುಮುಚ್ಚಿ ನೋಡುತ್ತಿದೆ ಎಂಬ ಆರೋಪವೂ ಸರಿಯಲ್ಲ. ಮಾದಕ ಪದಾರ್ಥ ಎಂಬುದು ಗೋಣಿ ಚೀಲದಲ್ಲಿ ತುಂಬಿ ಸಾರ್ವಜನಿಕವಾಗಿ ಪ್ರದರ್ಶಿಸುವ ರೀತಿಯಲ್ಲಿ ಸಾಗಾಣಿಕೆ ಮತ್ತು ಮಾರಾಟ ಮಾಡುವ ವಸ್ತುವಲ್ಲ. ಇದರ ಸೇವಕರು ಮತ್ತು ಪೂರೈಕೆದಾರರಿಬ್ಬರೂ ಅತ್ಯಂತ ಜಾಣ್ಮೆಯಿಂದ ವ್ಯವಹಾರ ನಡೆಸುತ್ತಾರೆ. ಗ್ರಾಮ್ ಲೆಕ್ಕದಲ್ಲಿ ಮಾರಾಟ ಮಾಡಲಾಗುವ ಇವುಗಳು ಸುಲಭದಲ್ಲಿ ಪತ್ತೆಯಾಗುವಷ್ಟು ಪ್ರಮಾಣದಲ್ಲೂ ಇರುವುದಿಲ್ಲ. ವ್ಯಕ್ತಿ ತೀರಾ ಸಹಜವಾಗಿ ತನ್ನ ಜೇಬಿನಲ್ಲಿ ಇಟ್ಟುಕೊಂಡು ಗಿರಾಕಿಗಳನ್ನು ಹುಡುಕು ತ್ತಿರುತ್ತಾನೆ ಮತ್ತು ಸಂಪರ್ಕಿಸುತ್ತಾನೆ. ಕಾಲೇಜು ಮಕ್ಕಳನ್ನು ಇಂಥ ಮಾರಾಟಕ್ಕಾಗಿ ಈ ಜಾಲ ಬಳಸಿಕೊಳ್ಳುತ್ತಿದೆ. ಕಾಲೇಜು ಮಕ್ಕಳಲ್ಲಿ ಹಣದ ಆಸೆ ಇರುತ್ತದೆ. ಖರ್ಚಿಗೆಂದು ಹೆತ್ತವರು ನಿರ್ದಿಷ್ಟ ಮೊತ್ತವನ್ನು ಕೊಟ್ಟಿರುತ್ತಾರೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಈ ಮೊತ್ತ ತೀರಾ ಕಡಿಮೆ ಅಥವಾ ಮಧ್ಯಮ ರೀತಿಯಲ್ಲಿಯೇ ಇರುತ್ತದೆ. ಆದರೆ, ಮಕ್ಕಳಿಗೆ ಖರ್ಚು ಮಾಡುವ ಮತ್ತು ಹೊಟೇಲಲ್ಲೋ ಕೆಫೆಯಲ್ಲೋ ಅಥವಾ ಐಸ್ಕ್ರೀಮ್ ಪಾರ್ಲರ್ ಗಳಲ್ಲೋ ಕುಳಿತು ಸಮಯ ಕಳೆಯುವ ಬಯಕೆ ಇದ್ದೇ ಇರುತ್ತದೆ. ಆದರೆ,
ಹಾಗೆ ಮಾಡುವುದಕ್ಕೆ ಜೇಬಿನಲ್ಲಿ ಸಾಕಷ್ಟು ದುಡ್ಡಿರುವುದಿಲ್ಲ. ಇಂಥ ವಿದ್ಯಾರ್ಥಿಗಳನ್ನು ಈ ಮಾದಕ ವಸ್ತು ಮಾರಾಟಗಾರರು ಹುಡುಕುತ್ತಿರುತ್ತಾರೆ. ಮಾದಕ ಪದಾರ್ಥವನ್ನು ವಿದ್ಯಾರ್ಥಿಗಳ ನಡುವೆ ಮಾರಾಟ ಮಾಡುವಂತೆ ಪುಸಲಾಯಿಸುತ್ತಾರೆ ಮತ್ತು ಅದಕ್ಕೆ ಗಣನೀಯ ಪ್ರಮಾಣದ ಕಮಿಷನ್ ಕೊಡುವುದಾಗಿ ಭರವಸೆ ಕೊಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇಂಥ ಆಫರ್ಗಳಿಗೆ ವಿದ್ಯಾರ್ಥಿಗಳು ಬಲಿ ಬೀಳುತ್ತಾರೆ. ತನ್ನ ಸಂಗಡಿಗರಲ್ಲಿ ಮಾದಕ ಪದಾರ್ಥ ಮಾರಾಟಕ್ಕೆ ಇಳಿಯುತ್ತಾರೆ. ಆರಂಭದಲ್ಲಿ ಕುತೂಹಲವಾಗಿ ಮತ್ತು ತಮಾಷೆಯಾಗಿ ಈ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಇವರು ನಿಧಾನಕ್ಕೆ ಅದನ್ನೇ ಒಂದು ಉದ್ಯೋಗವಾಗಿ ಕಂಡುಕೊಳ್ಳುತ್ತಾರೆ. ಪರ್ಯಾಯ ಆದಾಯ ಮೂಲವಾಗಿ ಅವಲಂಬಿಸಿ ಕೊಳ್ಳುತ್ತಾರೆ. ಕಲಿಕೆಯಷ್ಟೇ ಈ ಪದಾರ್ಥಗಳ ಮಾರಾಟವೂ ಅವರಿಗೆ ಮುಖ್ಯವಾಗುತ್ತದೆ. ತಮ್ಮ ಗೆಳೆತನದ ಸಲುಗೆಯನ್ನು ಬಳಸಿಕೊಂಡು ಮಾದಕ ಪದಾರ್ಥ ಖರೀದಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರತೊಡಗುತ್ತಾರೆ. ಅವರ ಜೊತೆ ಅನಿವಾರ್ಯವಾಗಿ ತಾವೂ ಸೇವನೆ ಮಾಡ ಬೇಕಾದ ಪರಿಸ್ಥಿತಿಯೂ ಎದುರಾಗುತ್ತದೆ. ಇದರಿಂದಾಗಿ ಇವರೂ ಅಮಲು ಜಗತ್ತನ್ನು ಪ್ರವೇಶಿಸುತ್ತಾರೆ. ನಿಧಾನಕ್ಕೆ ಅವರ ಬದುಕನ್ನೇ ಈ ಪದಾರ್ಥ ಆಪೋಷನ ತೆಗೆದುಕೊಳ್ಳುತ್ತದೆ. ದುರಂತ ಏನೆಂದರೆ,
ತಮ್ಮ ಮನೆಯ ಮಗ ಅಥವಾ ಮಗಳು ಅಥವಾ ಗಂಡ ಇಂಥದ್ದೊಂದು ಜಾಲದಲ್ಲಿ ಬಿದ್ದು ಒದ್ದಾಡುತ್ತಾ ಇದ್ದಾರೆ ಎಂದು ಹೇಳಿಕೊಳ್ಳಲೂ ಆಗದ ಮತ್ತು ಅಡಗಿಸಿಡಲೂ ಆಗದ ಪರಿಸ್ಥಿತಿಯೊಂದನ್ನು ಇಂಥ ಮನೆಯ ಮಹಿಳೆಯರು ಸದಾ ಅನುಭವಿಸುತ್ತಾರೆ. ಸಮಾಜವೂ ಇಂಥ ಮನೆಗಳ ಜೊತೆ ಸಂಪರ್ಕ ಇಟ್ಟುಕೊಳ್ಳುವುದಕ್ಕೆ ಹೆದರತೊಡಗುತ್ತದೆ. ಎಲ್ಲಿ ತಮ್ಮ ಮನೆಯ ಸದಸ್ಯರೂ ಹಾಳಾಗಿ ಬಿಡುತ್ತಾರೋ ಎಂಬ ಭೀತಿಯಲ್ಲಿ ದಿನ ಕಳೆಯುತ್ತಾರೆ. ಇದು ಸಂತ್ರಸ್ತ ಮನೆಯನ್ನು ಇನ್ನಷ್ಟು ಒಂಟಿಯಾಗಿಸುತ್ತದೆ ಮತ್ತು ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಬಹಳ ಮುಖ್ಯವಾಗಿ,
ಇದಕ್ಕೆ ಎರಡು ರೀತಿಯ ಪರಿಹಾರ ಇದೆ. ಒಂದು- ಪೊಲೀಸ್ ಇಲಾಖೆ ಸಕ್ರಿಯವಾಗುವುದು. ದ.ಕ. ಜಿಲ್ಲೆಯಲ್ಲಂತೂ ಪೊಲೀಸ್ ಇಲಾಖೆ ಈ ಬಗ್ಗೆ ಸಮರೋಪಾದಿಯಲ್ಲಿ ಸಕ್ರಿಯವಾಗಿದೆ. ಈಗಾಗಲೇ ಜಿಲ್ಲೆಯ ಕಾಲೇಜುಗಳ ಮೇಲೆ ಮಿಂಚಿನ ದಾಳಿ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಿಸುವ ಸಮಯದಲ್ಲಿ ಮಾದಕ ಪದಾರ್ಥ ಸೇವನೆಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಮೆಡಿಕಲ್, ಇಂಜಿನಿಯರಿಂಗ್ ಸಹಿತ ಎಲ್ಲ ಕಾಲೇಜುಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಗುತ್ತಿದೆ. ಮಾದಕ ಪದಾರ್ಥಗಳ ಬಗ್ಗೆ ಅನಾಮಿಕವಾಗಿ ಉಳಿದು ದೂರು ಸಲ್ಲಿಸುವ ಕ್ಯೂ.ಆರ್. ಕೋಡ್ ಆಧಾರಿತ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದ್ದರಿಂದ ಪೊಲೀಸ್ ವ್ಯವಸ್ಥೆಯ ಈ ಸಕಾರಾತ್ಮಕ ನಡೆಗೆ ಮುಸ್ಲಿಮ್ ಸಮುದಾಯ ದಿಂದಲೂ ಪೂರಕ ಸಹಕಾರ ಸಿಕ್ಕರೆ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ಮಹಾಮಾರಿಯನ್ನು ತಡೆಗಟ್ಟಬಹುದು.
ಇತರ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯಕ್ಕೆ ಮಸೀದಿ ಎಂಬ ಅದ್ಭುತ ವ್ಯವಸ್ಥೆ ಇದೆ. ಯಾವುದೇ ಮುಸ್ಲಿಮ್ ವ್ಯಕ್ತಿ ಒಂದಲ್ಲ ಒಂದ ರೀತಿಯಲ್ಲಿ ಮಸೀದಿಯೊಂದಿಗೆ ಜೋಡಿಕೊಂಡೇ ಇರುತ್ತಾರೆ. ಆದ್ದರಿಂದ ಮಸೀದಿ ಕೇಂದ್ರಿತ ಚಳವಳಿಯೊಂದನ್ನು ಪ್ರಬಲವಾಗಿ ಕಟ್ಟಬೇಕಾಗಿದೆ. ನಗರದ ಎಲ್ಲ ಮಸೀದಿ ಆಡಳಿತ ಸಮಿತಿಗಳೂ ಜೊತೆಗೂಡಿ ಏಕ ಚಳವಳಿಯನ್ನು ಕಟ್ಟುವುದು ಮತ್ತು ಎಲ್ಲ ಸಂಘಟನೆಗಳೂ ವೈಚಾರಿಕ ಭಿನ್ನತೆಯನ್ನು ಕೈಬಿಟ್ಟು ಈ ಚಳವಳಿಯಲ್ಲಿ ಒಂದುಗೂಡುವುದು ಬಹಳ ಅಗತ್ಯ. ಪ್ರತಿ ಮನೆ ಮನೆಯಲ್ಲೂ ಡ್ರಗ್ಸ್ ವಿರೋಧಿ ಭಾವನೆ ಬೆಳೆಯುವಷ್ಟು ಈ ಚಳವಳಿ ಪ್ರಭಾವಶಾಲಿಯಾಗಬೇಕು. ಶುಕ್ರವಾರದ ಪ್ರವಚನದಲ್ಲಿ ಮತ್ತು ಇನ್ನಿತರ ಸಂದರ್ಭದಲ್ಲಿ ಮಸೀದಿ ಖತೀಬರು ಈ ಬಗ್ಗೆ ನಿರಂತರ ಜಾಗೃತಿಯ ಮಾತುಗಳನ್ನು ಆಡುತ್ತಲಿರಬೇಕು. ಡ್ರಗ್ಸ್ ಚಟ ಅಂಟಿಸಿಕೊAಡ ಕುಟುಂಬವನ್ನು ಬಹಿಷ್ಕರಿಸುವುದಕ್ಕಿಂತ ಅವರನ್ನು ಸುಧಾರಿಸುವ ಬಗ್ಗೆ ಆಲೋಚನೆಗಳಾದರೆ ಬಹಳ ಒಳ್ಳೆಯದು.
ತಂತ್ರಜ್ಞಾನದ ಈ ಯುಗದಲ್ಲಿ ಪ್ರತಿ ಸದಸ್ಯರ ಮೊಬೈಲ್ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದು ಪೋಷಕರಿಂದ ಅಸಾಧ್ಯ. ಆದರೆ, ಅಮಲು ಪದಾರ್ಥಗಳ ವಿರುದ್ಧ ಇಸ್ಲಾಮ್ ವ್ಯಕ್ತಪಡಿಸಿರುವ ಕಟುವಾದ ಎಚ್ಚರಿಕೆಯನ್ನು ಮನೆಯಲ್ಲಿ ಸಂದರ್ಭಾನುಸಾರ ಹಿರಿಯರು ಮಕ್ಕಳಿಗೆ ನೆನಪಿಸುತ್ತಿರಬೇಕು. ಅದರ ಅಡ್ಡಪರಿಣಾಮಗಳನ್ನು ಹೇಳುತ್ತಲಿರಬೇಕು. ಅಮಲು ಪದಾರ್ಥ ಮತ್ತು ನಮಾಝï, ಅಮಲು ಪದಾರ್ಥ ಮತ್ತು ಉಪವಾಸ ಮತ್ತು ಇನ್ನಿತರ ಎಲ್ಲ ಸತ್ಕರ್ಮಗಳೂ ಒದಕ್ಕೊಂದು ಜೊತೆಯಾಗಲಾರವು ಎಂಬುದನ್ನು ಹೇಳಿಕೊಡ ಬೇಕು. ಮನೆಯಲ್ಲಿ ಸದಾ ಜಾಗೃತಿಯ ಪಾಠ ಕೇಳಿಸಿಕೊಳ್ಳುವ ಮಗು ಅಮಲು ಪದಾರ್ಥದ ಜಾಲಕ್ಕೆ ಬಲಿ ಬೀಳುವ ಸಾಧ್ಯತೆ ಶೂನ್ಯ ಅನ್ನುವಷ್ಟು ಕಡಿಮೆ.












