ಸನ್ಮಾರ್ಗ ವಾರ್ತೆ
ಫೆಲೆಸ್ತೀನಿ ಮಕ್ಕಳೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಗಾಳಿಪಟ ಹಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತೆಯೊಬ್ಬರ ಮನೆಯಲ್ಲಿ ಮುಂಬೈ ಪೊಲೀಸರು ಶುಕ್ರವಾರ ಶೋಧ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಯ ಪ್ರಕಾರ, ‘ಇಂಡಿಯನ್ ಪೀಪಲ್ ಇನ್ ಸಾಲಿಡಾರಿಟಿ ವಿತ್ ಫೆಲೆಸ್ತೀನ್’ ಎಂಬ ನಾಗರಿಕರ ಗುಂಪಿನೊಂದಿಗೆ ಸಂಬಂಧ ಹೊಂದಿರುವ ಐವರು ಸಾಮಾಜಿಕ ಕಾರ್ಯಕರ್ತರು ಮನೆಯಲ್ಲಿದ್ದು, ಕಾರ್ಯಾಚರಣೆ ನಡೆಯುತ್ತಿದ್ದಾಗ ಅವರನ್ನು ಹೊರಹೋಗಲು ಬಿಡಲಿಲ್ಲ.
ಆರನೇಯ ಒಬ್ಬ ಸಾಮಾಜಿಕ ಕಾರ್ಯಕರ್ತನನ್ನು ಶುಕ್ರವಾರ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ಸಂಜೆ ಬಿಡುಗಡೆ ಮಾಡಲಾಯಿತು.
ಸೆಪ್ಟೆಂಬರ್ 15 ರಂದು, ಇಸ್ರೇಲ್ನ ಗಾಝಾ ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತದ ಭಾಗಿಗಳು ಗಾಳಿಪಟಗಳನ್ನು ಹಾರಿಸಿದ್ದರು.
ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡ ಸಿವಿಲ್ ಉಡುಪಿನ ವ್ಯಕ್ತಿಗಳು ಸ್ವಯಂಸೇವಕಿ ಮತ್ತು ವಿದ್ಯಾರ್ಥಿನಿ ಹರ್ಷದಾ ಅವರ ಮನೆಗೆ ಆಗಮಿಸಿದ್ದಾರೆ ಎಂದು ಗುಂಪು ಆರೋಪಿಸಿದೆ. ಹರ್ಷದಾ ಮಾಧ್ಯಮಕ್ಕೆ ತಿಳಿಸಿದಂತೆ, ಒಂದು ಹಂತದಲ್ಲಿ 15 ಜನ ಪೊಲೀಸ್ ಅಧಿಕಾರಿಗಳಿದ್ದರು.
ಸಂಜೆ 5.30 ರಿಂದ, ಸಮವಸ್ತ್ರ ಧರಿಸಿದ ಪೊಲೀಸ್ ಸಿಬ್ಬಂದಿ “ಯಾವುದೇ ವಾರೆಂಟ್ ಇಲ್ಲದೆ ಮತ್ತು ಯಾವುದೇ ಲಿಖಿತ ನೋಟೀಸ್ ಅಥವಾ ದಾಖಲೆಯನ್ನು ನೀಡದೆ” ಶೋಧ ನಡೆಸಿದ್ದಾರೆ ಎಂದು ಗುಂಪು ಆರೋಪಿಸಿದೆ.
“ಫೆಲೆಸ್ತೀನಿ ಮಕ್ಕಳೊಂದಿಗೆ ಒಗ್ಗಟ್ಟಿನಿಂದ ಗಾಳಿಪಟ ಹಾರಿಸಿದ್ದಕ್ಕಾಗಿ ಯಾವುದೇ ವಾರೆಂಟ್ ಇಲ್ಲದೆ ವ್ಯಕ್ತಿಯ ನಿವಾಸವನ್ನು ‘ಶೋಧಿಸಲು’ ಒಂಬತ್ತು ಗಂಟೆಗಳಿಗೂ ಹೆಚ್ಚು ಸಮಯ – ಮತ್ತು ಮುಂದುವರಿದಿದೆ!” ಎಂದು ಗುಂಪು ಶನಿವಾರ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.
ತನ್ನ ಪುಸ್ತಕಗಳ ಪೈಕಿ ಕೆಲವು ಪುಸ್ತಕಗಳ ಪಟ್ಟಿಯನ್ನು ಪೊಲೀಸರು ತಯಾರಿಸಿದ್ದಾರೆ ಮತ್ತು ಶೋಧದ ಸಮಯದಲ್ಲಿ ಫೋಟೋಗಳು ಹಾಗೂ ವೀಡಿಯೊಗಳನ್ನು ತೆಗೆದುಕೊಂಡಿದ್ದಾರೆ ಎಂದು ಹರ್ಷದಾ ಆರೋಪಿಸಿದ್ದಾರೆ.
ತನ್ನೊಂದಿಗೆ ಇದ್ದ ಇಬ್ಬರು ವ್ಯಕ್ತಿಗಳ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಆದರೆ ಎರಡು ಗಂಟೆಗಳ ನಂತರ ಅವುಗಳನ್ನು ಮರಳಿ ನೀಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಪೊಲೀಸರು ತಾವು ಏಕೆ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿಲ್ಲ ಎಂದು ಪೂಜಾ ತಿಳಿಸಿದರು.
ಪೊಲೀಸರ ಈ ಕ್ರಮವು ನಮ್ಮ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲಿನ “ಸಂಪೂರ್ಣ ದಾಳಿ”ಯನ್ನು ಮಾತ್ರವಲ್ಲದೆ, “ವ್ಯಕ್ತಿಯ ಗೌಪ್ಯತೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆ”ಯನ್ನು ಸಹ ಪ್ರದರ್ಶಿಸುತ್ತದೆ ಎಂದು ಗುಂಪು ಹೇಳಿದೆ. ಪೊಲೀಸರ “ಅಕ್ರಮ ಕೃತ್ಯಗಳ” ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಒತ್ತಾಯಿಸಿದೆ.
ಗಾಳಿಪಟಗಳು ಮತ್ತು ಬಲೂನುಗಳನ್ನು ಹಾರಿಸಲಾಗುತ್ತಿರುವ ಕಾರಣ ಗಾಝಾದಲ್ಲಿ ತಮ್ಮ ದಾಳಿಯನ್ನು ತೀವ್ರಗೊಳಿಸುವುದಾಗಿ ಇಸ್ರೇಲ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಮಕ್ಕಳೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಗಾಳಿಪಟ ಹಾರಿಸುವ ಅಭಿಯಾನವನ್ನು ನಡೆಸಲಾಯಿತು. ಗಾಳಿಪಟಗಳು ಮತ್ತು ಬಲೂನುಗಳನ್ನು ಡ್ರೋನ್ಗಳಿಗೆ ಸಮಾನವಾದ ಭದ್ರತಾ ಬೆದರಿಕೆಯಾಗಿ ಪರಿಗಣಿಸುವುದಾಗಿ ಟೆಲ್ ಅವೀವ್ ಹೇಳಿತ್ತು.
ಇದು ಫೆಲೆಸ್ತೀನ್ನಲ್ಲಿನ ಪೋಷಕರು ತಮ್ಮ ಮಕ್ಕಳು ಗಾಳಿಪಟ ಹಾರಿಸುವುದನ್ನು ತಡೆಯುವಂತೆ ಪ್ರೇರೇಪಿಸಿತು ಎಂದು ಅಲ್ ಜಝೀರಾ ವರದಿ ಮಾಡಿದೆ.












