ಪ್ರವಾದಿ ಮಹಮ್ಮದರು(ಸ) ಬದುಕಿನ ಎಲ್ಲ ರಂಗಗಳಿಗೂ ಮಾದರಿ: ಮೌಲಾನಾ ಅಬ್ದುಲ್ ಹಕೀಮ್ ನದ್ವಿ

0
314

ಸನ್ಮಾರ್ಗ ವಾರ್ತೆ

ಪಾಣೆಮಂಗಳೂರು: ಪ್ರವಾದಿ ಮಹಮ್ಮದರು ಬದುಕಿನ ಎಲ್ಲ ರಂಗಗಳಿಗೂ ಆರ್ಥಿಕ ಸಾಮಾಜಿಕ ರಾಜಕೀಯ ಕೌಟುಂಬಿಕ ಹೀಗೆ ಬದುಕಿನ ಎಲ್ಲ ರಂಗಗಳಿಗೂ ಮಾದರಿಯಾಗಿದ್ದಾರೆ. ತನ್ನ 40ನೇ ವಯಸ್ಸಿನಲ್ಲಿ ಪ್ರವಾದಿತ್ವ ದೊರೆತ ಬಳಿಕದ 23 ವರ್ಷಗಳ ಅವರ ಬದುಕು ತೆರೆದ ಪುಸ್ತಕದಂತಿದೆ. ಪ್ರವಾದಿವರ್ಯರು(ಸ) ಯಾವುದನ್ನು ನಿರ್ವಹಿಸಿರಿ ಎಂದಿದ್ದಾರೆಯೇ ಅದನ್ನು ನಿರ್ವಹಿಸುತ್ತಾ ಯಾವುದನ್ನು ತೊರೆಯಿರಿ ಎಂದಿದ್ದಾರೆಯೋ ಅದರಿಂದ ಸಂಪೂರ್ಣ ದೂರವಿದ್ದು ಕೊಂಡು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಪ್ರವಾದಿವರ್ಯರ(ಸ) ಈ ಮಾದರಿಯನ್ನು ನಮ್ಮ ಬದುಕಿನಲ್ಲಿ ಸಂಪೂರ್ಣ ಅಳವಡಿಸಬೇಕಾಗಿದೆ. ಪ್ರವಾದಿಯವರ(ಸ) ಸರಳತೆಯ ಸಂದೇಶವಾಗಿದೆ ಅದರಲ್ಲಿ ಯಾವುದೇ ಕಾಠಿಣ್ಯವಿಲ್ಲ ಎಂದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಕೇರಳ ರಾಜ್ಯ ಕಾರ್ಯದರ್ಶಿಗಳಾದ ಮೌಲಾನಾ ಅಬ್ದುಲ್ ಹಕೀಮ್ ನದ್ವಿ ಹೇಳಿದರು.

ಅವರು ಇಲ್ಲಿನ ಸಾಗರ್ ಆಡಿಟೋರಿಯಂನಲ್ಲಿ ಸೆ. 18ರಂದು ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್(ಸ) ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ತಾಲೂಕು ಆಯೋಜಿಸಿದ್ದ ಬಂಟ್ವಾಳ ತಾಲೂಕು ಸೀರತ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಇನ್ನೋರ್ವ ಮುಖ್ಯ ಅತಿಥಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಯವರು ಮಾತನಾಡುತ್ತಾ, ಅಲ್ಲಾಹನ ಪ್ರವಾದಿಯನ್ನು ಪ್ರೀತಿಸಲು ನಮಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ಸ್ವಯಂ ಆತ್ಮವಲೋಕನ ನಡೆಸಬೇಕಾಗಿದೆ. ನಮ್ಮ ದೇಹಕ್ಕಿಂತಲೂ ನಮ್ಮ ಕುಟುಂಬಕ್ಕಿಂತಲೂ ಮಿಗಿಲಾಗಿ ಪ್ರವಾದಿವರ್ಯ(ಸ)ರನ್ನು ಪ್ರೀತಿಸಬೇಕಾಗಿದೆ. ಹೀಗೆ ಪ್ರೀತಿಸದಿದ್ದರೆ ಆತನ ಈಮಾನ್ ಪರಿಪೂರ್ಣವಾಗದು.

ಪ್ರವಾದಿವರ್ಯರ(ಸ) ಜೊತೆಗಿದ್ದ ಸಹಾಬಿಗಳು ಪ್ರವಾದಿವರ್ಯರನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಪ್ರವಾದಿವರ್ಯ(ಸ)ರನ್ನು ಪ್ರೀತಿಸುವುದೆಂದರೆ ತನ್ನ ಬದುಕಿನ ಪ್ರತಿಯೊಂದು ಘಟ್ಟದಲ್ಲಿಯೂ ಪ್ರತಿಯೊಂದು ಹಂತದಲ್ಲೂ ಪ್ರವಾದಿಯನ್ನು ಚಾಚೂ ತಪ್ಪದೆ ಅನುಸರಣೆ ಮಾಡುವುದಾಗಿದೆ ಎಂದು ಹೇಳಿದರು.

ಈ ನಡುವೆ ಶಾಂತಿ ಪ್ರಕಾಶನ ಹೊರತಂದಂತಹ ಯೋಗೀಶ್ ಮಾಸ್ಟರ್ ಹಾಗೂ ಅಬ್ದುಲ್ ಸಲಾಂ ಪುತ್ತಿಗೆ ಬರೆದಂತಹ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹವ್ವಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ರವರು ಕೃತಿಯನ್ನು ಬಿಡುಗಡೆಗೊಳಿಸಿದರು.

ಜಮಾಅತೆ ಇಸ್ಲಾಮೀ ಹಿಂದ್, ಬಿ.ಸಿ ರೋಡ್ ಸ್ಥಾನೀಯ ಅಧ್ಯಕ್ಷ ಅಮಾನುಲ್ಲಾ ಖಾನ್ ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.

ಇಬ್ರಾಹಿಂ ಸಈದ್ ವಿ.ಕೆ ಇವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಹಾಫಿಝ್ ಮುಹಮ್ಮದ್ ತನ್ವೀರ್ ಆಲಮ್ ರವರು ನಾಥ್ ಹಾಡಿದರು. ಸಲೀಂ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ಕುಕ್ಕಾಜೆ ಧನ್ಯವಾದವಿತ್ತರು.

ವೇದಿಕೆಯಲ್ಲಿ ಜೆಐಹೆಚ್ ಮಂಗಳೂರು ವಲಯ ಸಂಚಾಲಕ ಸಈದ್ ಇಸ್ಮಾಯಿಲ್, ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಬ್ದುಲ್ ಕರೀಂ ಉಳ್ಳಾಲ, ಸಮಾವೇಶದ ಸಂಚಾಲಕ ಅಬ್ದುಲ್ಲಾ ಚೆಂಡಾಡಿ, ಜೆ.ಐ.ಹೆಚ್ ಪಾಣೆಮಂಗಳೂರು ಸ್ಥಾನೀಯ ಅಧ್ಯಕ್ಷ ಮುಕ್ತಾರ್ ಅಹಮದ್ ಪಾಣೆಮಂಗಳೂರು ಉಪಸ್ಥಿತರಿದ್ದರು.