ಮುಸ್‌ಅಬ್‌ರನ್ನು ನೋಡಿ ಅತ್ತ ಪ್ರವಾದಿ(ಸ)

0
167

ಸನ್ಮಾರ್ಗ ವಾರ್ತೆ

✍️ಪಿ.ಎಂ. ಯೂನುಸ್ ಸಲೀಮ್

ಉಹುದ್‌ನ ರಣಾಂಗಣದಲ್ಲಿ ಸತ್ಯ ಮತ್ತು ಮಿಥ್ಯೆಯ ನಡುವೆ ನಡೆದ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧರ ಮೃತದೇಹವನ್ನು ದಫನ ಮಾಡುವ ಪ್ರಕ್ರಿಯೆಯಲ್ಲಿ ಪ್ರವಾದಿವರ್ಯರು(ಸ) ಮತ್ತು ಅನುಚರರು ನಿಭಿಡರಾಗಿದ್ದಾರೆ.

ಆಗ ಆ ಹೃದಯವನ್ನು ನೋಡುತ್ತಾರೆ. ಮುಸ್‌ಅಬ್… ಎಂದು ಹೃದಯ ಮಿಡಿದು ಕಣ್ಣೀರು ಹರಿಯುತ್ತದೆ. ಹೀಗೆ ಉಹುದ್ ಕಣ್ಣೀರ ಶೋಕ ಯಾತ್ರೆಯಾಗುತ್ತದೆ.. ಅವುಗಳು ಪ್ರವಾದಿವರ್ಯರ(ಸ) ಎಡ-ಬಲಗಳಲ್ಲಿ ಕಾವಲು ನಿಂತು ಹದ್ದುಗಣ್ಣಿನಿಂದ ಕಾಯುತ್ತಿದ್ದ ಆತ್ಮಗಳು ದೇವನೆಡೆಗೆ ಪ್ರಯಾಣಿಸಿದ ದಿನಗಳಾಗಿದ್ದವು. ಉಹುದ್ ರಣಾಂಗಣ ನಾಯಕತ್ವದ ಅನುಸರಣೆಯ ಪಾಠ ಶಾಲೆಯಾಗಿತ್ತು. ನಾಶ-ನಷ್ಟಗಳ, ಸಂಕಷ್ಟಗಳ ನೋವಿನ ಸರಮಾಲೆಯಾಗಿತ್ತು.

ಉಹುದ್ ಪ್ರವಾದಿವರ್ಯರ(ಸ) ಹರಿಯುವ ಕಣ್ಣೀರ ಸಾಲುಗಳಾಗಿತ್ತು. ಒಮ್ಮೆ ಪ್ರವಾದಿವರ್ಯರು(ಸ) ಹುತಾತ್ಮರಾದರು ಎಂಬ ವದಂತಿ ಕೂಡಾ ಹಬ್ಬಿತ್ತು. ಆ ರಣಾಂಗಣದಲ್ಲಿ ಕರುಣೆಯ ಸಾಗರದಂತಿದ್ದ ಪ್ರವಾದಿವರ್ಯರ(ಸ) ಮನಸ್ಸು, ದೇಹವು ಗಾಯಗೊಂಡಿತ್ತು. ಭುಜ ಮತ್ತು ಮುಖದ ಮೇಲೆ ಗಾಯವಾಗಿತ್ತು. ಹಲ್ಲುಗಳು ಉದುರಿತ್ತು. ಈ ಎಲ್ಲವೂ ನಡೆದದ್ದು ಉಹುದ್ ಬೆಟ್ಟದ ಬದಿಯಲ್ಲಿರುವ ರಣಾಂಗಣದಲ್ಲಾಗಿತ್ತು.

ಎಲ್ಲಾ ಸಂಕಷ್ಟಗಳನ್ನು ಪ್ರಾರ್ಥನೆಯಿಂದ ಎದುರಿಸಿದ ಆ ಪ್ರವಾದಿ ನಿಶ್ಚಲವಾಗಿದ್ದ ಮುಸ್‌ಅಬ್‌ರ ದೇಹದತ್ತ ತುಂಬಿದ ಕಣ್ಣಾಲಿಯೊಂದಿಗೆ ವೀಕ್ಷಿಸಿದರು. ಮನಸ್ಸು ಕನಲಿತು. ದುಃಖಿತರಾಗಿ ಮುಸ್‌ಅಬ್… ನೀನು ಮೊದಲು ಎಂಥಹವನಾಗಿದ್ದೆ..?

ಮಕ್ಕಾದ ಗಾಳಿಗೆ ಲೋಕದ ಸುಗಂಧಗಳ ಲೇಪಗಳಿಗೆ ಸುಗಂಧ ಹಚ್ಚಿದವನು ಎನ್ನುತ್ತಾ ಮುಸ್‌ಅಬ್‌ರ ಕಪ್ಪಾದ ಸುಂದರವಾದ ತಲೆಗೂದಲನ್ನು ಕರುಣೆಯ ಹಸ್ತದಿಂದ ಸವರಿದರು.
ಮುಸ್‌ಅಬ್…
ಮಕ್ಕಾದ ಯುವಕರು ಬಯಸುತ್ತಿದ್ದ ತಲೆ ಗೂದಲುಗಳಿವು ಎನ್ನುತ್ತಾ ತನ್ನ ಅಪ್ತ ಸಂಗಾತಿಯನ್ನು ದುಃಖದಿಂದ ಮತ್ತೆ ಮತ್ತೆ ನೋಡುತ್ತಿದ್ದರು.

ಮಕ್ಕಾದ ಬೀದಿಯಲ್ಲಿ ಸುಂದರವಾದ ಉಡುಪುಗಳನ್ನು ಧರಿಸಿ ನಡೆದಾಡುತ್ತಿದ್ದ ಮುಸ್‌ಅಬ್…. ಯಮನ್‌ನಿಂದ ತಂದಂತಹ ಬೆಲೆಬಾಳುವ ಚಪ್ಪಲಿಗಳು. ಹೃದಯವನ್ನೇ ಸೂರೆಗೊಳ್ಳುವ ಸುಗಂಧ ತೈಲಗಳು… ಮಕ್ಕಾದ ಸುರಸುಂದರಿಯರು ಮುಸ್‌ಅಬ್‌ರ ನಡೆಯನ್ನು ನೋಡಿ ಆಸ್ವಾದಿಸುತ್ತಿದ್ದರು. ಅವರ ಕಣ್ಣಿನ ಪ್ರಕಾಶವನ್ನು ಸೆಳೆಯಲು ಆ ಗಾಳಿಯ ಸುಗಂಧವು ತಮ್ಮೆಡೆಗೆ ಬೀರುವಂತಾಗಲು ನಿರೀಕ್ಷೆಯಲ್ಲಿದ್ದವರು.. ಮುಸ್‌ಅಬ್‌ನ ದೇಹ ಸೌಂದರ್ಯಕ್ಕೆ ಮಾರು ಹೋಗಿ ಅವರು ನಮ್ಮದಾಗಿದ್ದಿದ್ದರೆ ಎಂದು ತರುಣಿಯರು ಭಾವಿಸಿದ್ದ ದಿನಗಳು ಒಂದು ನೋಟ ನಮ್ಮೆಡೆಗೆ ಬೀರಬಾರದೆ ಎಂದು ಭಾವಿಸಿದ್ದ ದಿನಗಳು…

ಮುಸ್‌ಅಬ್‌ರ ದೇಹ ನೋಡಿ ಮಿಡಿದ ಹೃದಯದಿಂದ ಪ್ರವಾದಿವರ್ಯರು(ಸ) ಹೇಳಿದರು.
ನೋಡು…
ನೀನು ಆರಿಸಿದ ಈ ಹಾದಿ ನಿನಗೆ ಅದೆಷ್ಟು ನಷ್ಟಗಳನ್ನು ತಂದೊಡ್ಡಿತು. ಅತೀವ ಸುಂದರನಾದ ಓರ್ವ ಯುವಕ ಮಕ್ಕಾದ ಬೀದಿಯಲ್ಲಿ ಕಂಗೊಳಿಸುತ್ತಿದ್ದ ಆ ವ್ಯಕ್ತಿ ಈಗ ಉಹುದ್‌ನ ಕಣಿವೆಯಲ್ಲಿ ಅನಾಥನಂತೆ ಪ್ರಾಣ ಕಳೆದುಕೊಂಡು ಮಲಗಿದ್ದಾನೆ.

ನೀನು ಸ್ವೀಕರಿಸಿದ ಸನ್ಮಾರ್ಗದಲ್ಲಿ ಎಲ್ಲವನ್ನೂ ಬಿಟ್ಟು, ದಾರಿದ್ರ್ಯದ ಕಡುಬಡತನವನ್ನು ಆರಿಸಿದೆ. ಈ ಉಹುದ್‌ನಲ್ಲಿ ಸತ್ಯವಿಶ್ವಾಸಿಗಳ ಪತಾಕೆಯನ್ನು ನೀನು ಎತ್ತಿ ಹಿಡಿಯಲು ನಾನು ನಿನ್ನೊಂದಿಗೆ ಹೇಳಿದ್ದೆ. ಏನೇ ಬಂದರೂ ಈ ಪತಾಕೆ ನೆಲಕ್ಕೆ ಬೀಳದಂತೆ ಕಾಪಾಡಬೇಕೆಂದು ಹೇಳಿದ್ದೆ. ನೀನು ಅದನ್ನು ಅಕ್ಷರಶಃ ಪಾಲಿಸಿದೆ. ನಿನ್ನ ಬಲಕೈಯನ್ನು ಶತ್ರುಗಳು ಛೇದಿಸಿದಾಗ ಎಡಕೈಯಲ್ಲಿ ಹಿಡಿದೆ. ಎಡಕೈಯನ್ನೂ ಅವರು ಛೇದಿಸಿದರು. ಆಗಲೂ ಛೇದನಗೊಂಡು ಉಳಿದ ಎರಡೂ ತೋಳುಗಳನ್ನು ಸೇರಿಸಿ ಅಭಿಮಾನದಿಂದ ಪತಾಕೆಯನ್ನು ಎತ್ತಿ ಹಿಡಿದೆ. ಅದನ್ನೂ ಆ ನಿಷ್ಕರುಣೆಯ ಶತ್ರುಗಳು ಛೇದಿಸಿದರು. ಆದರೂ ಎದೆಗುಂದದೆ ಆತ್ಮಾಭಿಮಾನದ ಪತಾಕೆ ನೆಲಕ್ಕೆ ಬೀಳದಂತೆ ಎದೆಗೆ ಅಪ್ಪಿ ಹಿಡಿದು ಹುತಾತ್ಮನಾಗಿ ಅಲ್ಲಾಹನತ್ತ ಧಾವಿಸಿದೆ. ಹುತಾತ್ಮತೆಯಿಂದ ಬದುಕನ್ನೇ ಸಾಕ್ಷಿಯಾಗಿಸಿದವನೇ ಮಕ್ಕಾದ ಯುವಕರಲ್ಲಿ ಅತೀ ಹೆಚ್ಚು ಪ್ರೀತಿಸಲ್ಪಟ್ಟವನೇ ನಿನಗೆ ಸ್ವರ್ಗವಿದೆ… ನಿನಗೆ ಸ್ವರ್ಗವಿದೆ…

ನಿನಗೆ ನೆನಪಿದೆಯೇ ಮುಸ್‌ಅಬ್.. ನಮ್ಮ ಪ್ರೀತಿಯ ಮಕ್ಕಾದಲ್ಲಿ ನಮ್ಮ ಮೇಲೆ ಶತ್ರುತ್ವದ ಬೆಟ್ಟಗಳೇ ಹಾದುಬಂದಾಗ ನಮ್ಮ ಆದರ್ಶ ಸಿದ್ದಾಂತಗಳ ಹೆಸರಿನಲ್ಲಿ ನಮ್ಮ ಅಪ್ತೇಷ್ಟರೇ ನಮ್ಮನ್ನು ದೂರ ತಳ್ಳಿದಾಗ, ಮಕ್ಕಾ ನಮ್ಮೊಂದಿಗೆ ಅಸಹಕಾರ ತೋರಿದಾಗ ಯಸ್ರಿಬ್‌ನ ಮಣ್ಣಿನಲ್ಲಿ ನೀನು ನಮಗಾಗಿ ಸತ್ಯದ ಬೀಜ ಬಿತ್ತಿ ಮೊಳೆಯುವಂತೆ ಮಾಡಿದೆ. ಅದಕ್ಕೆ ನೀರೆರೆದೆ. ನಮ್ಮನ್ನು ಸಂಭ್ರಮೋಲ್ಲಾಸಗಳಿಂದ ಮದೀನಾ ಸ್ವಾಗತಿಸಿತು. ನೀನು ಬೆಳೆದ ಬೆಳೆ ಇಳುವರಿ ನೀಡಿತ್ತು..

ಪ್ರವಾದಿವರ್ಯರ(ಸ) ಹೃದಯ ಮತ್ತೆ ಮತ್ತೆ ನೋವಿಂದ ಚಡಪಡಿಸಿತು. ದುಃಖ ತಾಳಲಾರದೆ ಮತ್ತೆ ಮತ್ತೆ ಅಳತೊಡಗಿದರು.. ಪ್ರವಾದಿವರ್ಯರು(ಸ) ಅಷ್ಟೊಂದು ದುಃಖಿತರಾದದ್ದು ಆ ಹಿಂದೆಯೂ ಆನಂತರವೂ ಕಂಡಿಲ್ಲವೆಂದು ಅನುಚರರು ಹೇಳಿದ್ದು ಇತಿಹಾಸದಲ್ಲಿ ದಾಖಲಾಗಿದೆ.