4 ಎಕರೆ ಗದ್ದೆಯ ಫಸಲನ್ನು ಮಾರಲಾಗದೇ ಕಂಗಾಲಾಗಿದ್ದ ರೈತ ಮಹಿಳೆ: ಖರೀದಿಸಿ ಮಾರಾಟಕ್ಕೆ ನಿಂತ ಮುಸ್ಲಿಂ ಯುವಕರು; ವ್ಯಾಪಕ ಶ್ಲಾಘನೆ

0
4136

ಸನ್ಮಾರ್ಗ ವಾರ್ತೆ

ಇದು ಲಾಕ್ ಡೌನ್ ದಿನಗಳ ಪಾಸಿಟಿವ್ ಸುದ್ದಿ

ಕುಶಾಲನಗರ, ಏಪ್ರಿಲ್ 11- ಲಾಕ್ ಡೌನ್ ಕಾರಣದಿಂದ ಬೆಳೆದ ಫಸಲನ್ನು ಮಾರಾಟ ಮಾಡಲಾಗದೇ ಕಂಗಾಲಾಗಿದ್ದ ಮಹಿಳೆಯೋರ್ವರಿಗೆ ಮೂವರು ಮುಸ್ಲಿಂ ಯುವಕರು ಆಸರೆಯಾದ ಮಾನವೀಯ ಘಟನೆಯೊಂದು ಕುಶಾಲನಗರದಲ್ಲಿ ನಡೆದಿದೆ. ಇಲ್ಲಿನ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭುವನಗಿರಿ ಗ್ರಾಮದ ಶಿರಗೆಜ್ಜೆ ಎಂಬಲ್ಲಿಯ ಆಶಿತ ಮೋಹನ್ ಎಂಬವರು ತನ್ನ 4 ಎಕರೆ ಕೃಷಿಭೂಮಿಯಲ್ಲಿ ಸಿಹಿಗೆಣಸು, ಮರಗೆಣಸು ಹಾಗೂ ಸುವರ್ಣ ಗೆಡ್ಡೆಯನ್ನು ಬೆಳೆದಿದ್ದರು. ಎರಡು ವರ್ಷಗಳ ಹಿಂದೆ  ಒಂದು ಕಿಡ್ನಿಯನ್ನು ಕಳೆದುಕೊಂಡಿದ್ದರೂ ಪಟ್ಟುಬಿಡದೇ ಕುಟುಂಬದ ಸಹಾಯದೊಂದಿಗೆ ಅವರು ಕೃಷಿ ಬೆಳೆಯುವ ಸಾಹಸಕ್ಕೆ ಇಳಿದಿದ್ದರು. ನೀರಿಗಾಗಿ ತಮ್ಮದೇ ಕೊಳವೆ ಬಾವಿಯನ್ನು ಬಳಸಿದರು. ಪತಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವಾಗ ಆಶಿತ ಮೋಹನ್ ಬಾಲ್ಯದಿಂದಲೂ ಪ್ರೀತಿಸುತ್ತ ಬಂದ ಕೃಷಿಗೆ ಆದ್ಯತೆ ನೀಡಿದರು. ಸಾಮಾನ್ಯವಾಗಿ,

ನೆರೆರಾಜ್ಯ ಕೇರಳದಲ್ಲಿ ಇವರು ಬೆಳೆಯುವ ಸಿಹಿಗೆಣಸು, ಮರಗೆಣಸು ಹಾಗೂ ಸುವರ್ಣಗಡ್ಡೆಗೆ ಮಾರುಕಟ್ಟೆ ಇತ್ತು. ಆದರೆ ಲಾಕ್ಡೌನ್ ನಿಂದಾಗಿ ಕೇರಳದ ರಸ್ತೆ ಮಾರ್ಗವನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿದ್ದು ಇವರ ಪಾಲಿಗೆ ಮುಳುವಾಯಿತು. ಈ ಬೆಳೆಗಳು ಹುಳ ಬಿದ್ದು ನಾಶವಾಗುವ ಸ್ಥಿತಿಗೆ ಬಂದು ಆಶಿತಾ ಮೋಹನ್ ದಿಕ್ಕೆಟ್ಟು ಹೋದರು.

ಅವರು ಎಲ್ಲಿಯವರೆಗೆ ಹತಾಶರಾದರೆಂದರೆ ಉಚಿತವಾಗಿ ಯಾರಾದರೂ ಈ ಬೆಳೆಗಳನ್ನು ಕೃಷಿ ಭೂಮಿಯಿಂದ ಕೊಂಡೊಯ್ದಿದ್ದರೆ ಬೇರೆ ಬೆಳೆಯನ್ನು ಬೆಳೆಯುವುದಕ್ಕಾದರೂ ಗದ್ದೆಯಲ್ಲಿ ಅವಕಾಶ ಸಿಗುತ್ತಿತ್ತು ಅನ್ನುವ ಮಟ್ಟಕ್ಕೆ ಅವರು ಕುಸಿದು ಹೋದರು. ಈ ಬೆಳೆಗಾಗಿ ಅವರು ಸಹಕಾರ ಸಂಘಗಳ ಮೂಲಕ ಮೂರು ಲಕ್ಷಕ್ಕೂ ಅಧಿಕ ಸಾಲ ಮಾಡಿರುವರಲ್ಲದೆ ಬೇಸಾಯಕ್ಕಾಗಿ ಐದು ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದರು.

ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಪ್ರವಾಹದ ಹೊಡೆತವೂ ಈ ಜಿಲ್ಲೆಯನ್ನು ಕಾಡಿತ್ತು. ಈ ಎಲ್ಲ ವಿವರಗಳೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದನ್ನು ಗಮನಿಸಿದ ಕೊಡಗು ಜಮಾಅತೆ ಇಸ್ಲಾಮಿ ಹಿಂದ್ ನ ಅಂಗಸಂಸ್ಥೆಯಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ (HRS) ಹನೀಫ್, ನಿಜಾಮುದ್ದೀನ್ ಮತ್ತು ಬಶೀರ್ ಸಿದ್ದಾಪುರ ಅವರು ಈ ಮಹಿಳೆಯ ನೋವಿಗೆ ಸ್ಪಂದಿಸಲು ಮುಂದಾಗಿದ್ದಾರೆ. ಮುಖ್ಯವಾಗಿ ಅವರು ಬೆಳೆದ ಸಿಹಿಗೆಣಸನ್ನು ಖರೀದಿಸಿ ಲಾಭದ ಉದ್ದೇಶವಿಲ್ಲದೆ ಸಾರ್ವಜನಿಕವಾಗಿ ಮಾರಾಟ ಮಾಡುವುದಕ್ಕೆ ತೀರ್ಮಾನಿಸಿ ಸರ್ವರ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಇದೀಗ ಆಶಿತ ಮೋಹನ್ ಗೆಲುವಿನಲ್ಲಿದ್ದರೆ ಅದನ್ನು ಮಾರಾಟ ಮಾಡುವ ಮತ್ತು ಜನರಿಗೆ ತಲುಪಿಸುವ ತುರ್ತಿನಲ್ಲಿ ಈ ಮೂವರು ಯುವಕರಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.