ಮುಝಫ್ಫರ್ ಪುರ್ ಲೈಂಗಿಕ ಕಿರುಕುಳ: 19 ಮಂದಿ ಆರೋಪಿಗಳು ತಪ್ಪಿತಸ್ಥರು

0
667

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 20: ಬಿಹಾರದ ಮುಝಪ್ಫರ್‍ಪುರ ಅಭಯಕೇಂದ್ರದಲ್ಲಿ ಹೆಣ್ಣುಮಕ್ಕಳನ್ನು ಲೈಂಗಿಕ ಅತ್ಯಾಚಾರಕ್ಕೊಳಪಡಿಸಿದ್ದ ಪ್ರಕರಣದಲ್ಲಿ 19 ಮಂದಿ ತಪ್ಪಿತಸ್ಥರು ಎಂದು ದಿಲ್ಲಿ ಸಾಕೇತ್ ಪೊಕ್ಸೋ ಕೋರ್ಟು ತೀರ್ಪು ನೀಡಿದೆ. ಇದರಲ್ಲಿ ಅಭಯಕೇಂದ್ರದ ಪ್ರಧಾನ ನಿರ್ವಾಹಕ ಬೃಜೇಶ್ ಠಾಕೂರ್ ಕೂಡ ಸೇರಿದ್ದಾನೆ. ಬ್ರಿಜೇಶ್ ಠಾಕೂರ್ ಸಹಿತ ಇಪ್ಪತ್ತು ಮಂದಿಯ ವಿರುದ್ಧ ಪೊಕ್ಸೊ ಕಾನೂನು ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿತ್ತು. ಸಿಬಿಐ ಕೋರ್ಟಿನಲ್ಲಿ ಸಲ್ಲಿಸಲಾದ 73 ಪುಟಗಳ ಆರೋಪ ಪಟ್ಟಿಯಲ್ಲಿ ಎಂಟು ಮಂದಿ ಮಹಿಳೆಯರು ಹಾಗೂ ಹನ್ನೆರಡು ಮಂದಿ ಪುರುಷರಿದ್ದರು. ಅಭಯ ಕೇಂದ್ರದ ನಿರ್ವಾಹಕರಾದ ಸೇವಾ ಸಂಕಲ್ಪ್ ಏವಂ ವಿಕಾಸ್ ಸಮಿತಿಯ ಅಧಿಕಾರಿಗಳು ಹಾಗೂ ನೌಕರರು ಸೇರಿ ಮಾನಸಿಕ ಮತ್ತು ಶಾರೀಕವಾಗಿ ಲೈಂಗಿಕ ಕಿರುಕುಳ ನೀಡಿದ್ದರೆಂದು ಆರೋಪ ಹೊರಿಸಲಾಗಿತ್ತು.

ಹತ್ತು ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಭಯ ಕೇಂದ್ರದಲ್ಲಿ ಕಿರುಕುಳ ನಡೆಯುತ್ತಿತ್ತು. ಆದರೆ ಕಿರುಕುಳದ ವಿವರ ಟಾಟ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ 42 ಹೆಣ್ಣುಮಕ್ಕಳಲ್ಲಿ 34 ಮಂದಿ ಕಿರುಕುಳಕ್ಕೊಳಗಾಗಿದ್ದು ಬಹಿರಂಗವಾಗಿತ್ತು. ಅಭಯ ಕೇಂದ್ರದ ಮಕ್ಕಳನ್ನುಅತಿಥಿಗಳಿಂದ ಬೃಜೇಶ್ ಅತ್ಯಾಚಾರ ಮಾಡಿಸುತ್ತಿದ್ದನು. ಇದನ್ನು ವಿರೋಧಿಸಿದ ಹೆಣ್ಣುಮಕ್ಕಳನ್ನು ಕ್ರೂರವಾಗಿ ಹೊಡೆಯುತ್ತಿದ್ದನೆಂದು ಆರೋಪ ಪಟ್ಟಿಯಲ್ಲಿದೆ. ಅಶ್ಲೀಲ ಹಾಡಿಗೆ ಕುಣಿಸುವುದು, ಮಾದಕವಸ್ತು ನೀಡಿ ಮಂಪರಿನಲ್ಲಿರುವಂತೆ ಮಾಡುವುದು, ಸಾಮೂಹಿಕ ಅತ್ಯಾಚಾರ ಮಾಡುವುದು ಇತ್ಯಾದಿಗಳು ಸರಕಾರಿ ಅಭಯ ಕೇಂದ್ರದಲ್ಲಿ ನಡೆಯುತ್ತಿತ್ತು. 2019 ಫೆಬ್ರುವರಿ ಏಳರಂದು ಅತ್ಯಾಚಾರ ಪ್ರಕರಣದ ವಿಚಾರಣೆ ಬಿಹಾರದಿಂದ ದಿಲ್ಲಿಯ ಸಾಕೇತ ಪೊಕ್ಸೊ ಕೋರ್ಟಿಗೆ ವರ್ಗಾಯಿಸಲು ಆದೇಶಿಸಲಾಗಿತ್ತು. ಅಭಯ ಕೇಂದ್ರದ ಕಿರುಕುಳ ಹೊರಗೆ ಬರುವುದರೊಂದಿಗೆ ಬಿಹಾರದ ಸಚಿವೆ ಮಂಜು ವರ್ಮ ರಾಜೀನಾಮೆ ನೀಡಿದ್ದರು.