ನಾನು ಭಾರತೀಯ ಮುಸ್ಲಿಂ, ನಾನು ಸಮಸ್ಯೆ ಅಲ್ಲ.. ಟಾಕ್ ಟು ಮುಸ್ಲಿಂ ಚಳವಳಿಯನ್ನು ಭಾವುಕಗೊಳಿಸಿದ ದೆಹಲಿ ಪತ್ರಕರ್ತನ ಬರಹ

0
2174
People offer prayers on first Friday of fasting month Ramadan at Jamia masjid in Srinagar on Friday. Express Photo by Shuaib Masoodi. 02.06.2017. *** Local Caption *** People offer prayers on first Friday of fasting month Ramadan at Jamia masjid in Srinagar on Friday. Express Photo by Shuaib Masoodi. 02.06.2017.

⇙ಮುಹಮ್ಮದ್ ಅಸಿಮ್…..

ನಾನು ಮುಸ್ಲಿಂ. ನಾನು ಭಾರತೀಯನಾಗಿದ್ದೇನೆ ಮತ್ತು ನಾನು ಸಮಸ್ಯೆ ಅಲ್ಲ. ಸುತ್ತಲೂ ಈ ದೇಶದ ಮುಸ್ಲಿಮರಿಗೆ ದಿಗ್ಬಂಧವನ್ನು ಹೇರಲಾಗುತ್ತಿದೆ. ಸರ್ಕಾರ, ಟಿವಿ ಮಾಧ್ಯಮ, ಸಾಮಾಜಿಕ ಮಾಧ್ಯಮ – ಎಲ್ಲೆಡೆ ಮುಸ್ಲಿಮರ ಸುತ್ತಲೂ ಗದ್ದಲವನ್ನು ಸೃಷ್ಟಿಸಲಾಗುತ್ತಿದೆ. .ಈ ಗದ್ದಲವೇ ಸಮಸ್ಯೆ. ನಾನು ಸಮಸ್ಯೆ ಅಲ್ಲ.

ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯುತ ಜನರು ಧರ್ಮದ ಆಧಾರದಲ್ಲಿ ಜನರ ನಡುವೆ ದ್ವೇಷವನ್ನು ಬಿತ್ತುತ್ತಿದ್ದಾರೆ. ಈ ದ್ವೇಷವೇ ಸಮಸ್ಯೆ. ನಾನು ಸಮಸ್ಯೆ ಅಲ್ಲ.

ರೈತರಿಗೆ ಸಮಸ್ಯೆಗಳಿವೆಯೆ? ಜನರಿಗೆ ಉದ್ಯೋಗಗಳು ಇದೆಯೇ? ಶಿಕ್ಷಣ ವ್ಯವಸ್ಥೆಯು ಉತ್ತಮವಾಗಿದೆಯೇ ? ಮೂಲಭೂತ ಆರೋಗ್ಯ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲವಾದ್ದರಿಂದ ಬಡವರು ಸಾಯುತ್ತಿಲ್ಲವೇ? ಭ್ರಷ್ಟಾಚಾರವು ಇತಿಹಾಸವಾಯಿತೇ? ನಾಲ್ಕು ವರ್ಷಗಳ ಹಿಂದೆ ಯಾರಾದರೂ ಈ ಎಲ್ಲಾ ವಿಚಾರವಾಗಿ ಕೆಲವು ಭರವಸೆಗಳನ್ನು ಮಾಡಿರಲಿಲ್ಲವೇ? ಎಲ್ಲ ಆಶ್ವಾಸನೆಗಳೂ ಈಡೇರಿವೆಯಾ? ಅಚ್ಛೇ ದಿನ್ ಗಳಿಗೆ ಮುಸ್ಲಿಮರು ಮಾತ್ರ ಅಡ್ಡಿಯಾ? ಇಲ್ಲ. ಟಿವಿ ದಿನನಿತ್ಯ ಮುಸ್ಲಿಮರನ್ನು ಏಕೆ ತೀವ್ರವಾಗಿ ಚರ್ಚಿಸುತ್ತಿದೆ? ಈ ಗೀಳೇ ಸಮಸ್ಯೆಯಾಗಿದೆ. ನಾನು ಸಮಸ್ಯೆ ಅಲ್ಲ.

ಪ್ರತಿ ರಾತ್ರಿ ಟಿವಿ ವಿಂಡೋಗಳಿಂದ ಕಿರಿಚುವ ಈ ಮುಲ್ಲಾಗಳು ಯಾರು? ಅವರು ಕೇವಲ ರೂಢಿಗತ ಮುಸ್ಲಿಮರು. ಅವರು ಮುಸ್ಲಿಮರಿಗಾಗಿ ಮಾತನಾಡುತ್ತಾರೆ ಎಂದು ಯಾರು ನಿರ್ಧರಿಸಿದರು? ಟಿವಿ ನಿರ್ವಾಹಕರಾ? ಯಾಕೆ? ಅಥವಾ, ಅವರು ಮುಸ್ಲಿಮರನ್ನು ದುಷ್ಟರೆಂದು ಬಿಂಬಿಸುವ ಆಟದ ಭಾಗವಾಗಿದ್ದಾರಾ? ಈ ಆಟವೇ ಸಮಸ್ಯೆಯಾಗಿದೆ. ನಾನು ಸಮಸ್ಯೆ ಅಲ್ಲ.

‘ಹಿಂದೂ ಖಟ್ರೆ ಮೇನ್ ಹೈ’, ‘ರಾಹುಲ್ ಕಾ ಮುಸ್ಲಿಂ ಪ್ರೇಮ್ ‘, ‘ಕಾಂಗ್ರೆಸ್ ಮುಸ್ಲಿಂ ಪಾರ್ಟಿ ಹೈ?’, ‘ರಾಹುಲ್ ಕೆ ಕಂಧೆ ಫೆ ಜೈನ್, ದಿಲ್ ಮೇನ್ ಜಿನ್ನಾ?’, ‘ಮುಸಲ್ಮಾನ್ ಕೆ ವೋಟ್ ಬ್ಯಾಂಕ್ ಕಿ ರಾಜ್ ನೀತಿ ?’ ಯಾರು ಈ ಮುಖ್ಯಾಂಶಗಳನ್ನು ಬರೆಯುತ್ತಾರೆ? ಈ ಪತ್ರಕರ್ತರೇ? ಹೆಚ್ಚಿನ ಮಾಧ್ಯಮಗಳು ನೈಜ ಸಮಸ್ಯೆಗಳನ್ನು ಮರೆಮಾಚುವಲ್ಲಿ ನಿರತವಾಗಿವೆ, ಇದರಿಂದಾಗಿ ವಿಫಲವಾದ ಸರ್ಕಾರಕ್ಕೆ ಸುಲಭವಾಗಿ ನಿರ್ಗಮನ ಮಾರ್ಗವನ್ನು ಇವುಗಳು ಒದಗಿಸುತ್ತದೆ. ನಿಜವಾದ ಸಮಸ್ಯೆಗಳ ಈ ಮರೆಮಾಚುವಿಕೆಯೇ ಸಮಸ್ಯೆಯಾಗಿದೆ. ನಾನು ಸಮಸ್ಯೆ ಅಲ್ಲ.

ಮುಸ್ಲಿಮರು ಮಧ್ಯಕಾಲೀನರಾಗಿದ್ದಾರೆ, ಮುಸ್ಲಿಮರಿಗೆ ಸುಧಾರಣೆಯ ಅಗತ್ಯವಿದೆ, ಮುಸ್ಲಿಮರಿಗೆ ಮುಖ್ಯವಾಹಿನಿಯ ಅಗತ್ಯವಿದೆ. ಮುಸ್ಲಿಮರು ಸಾಕಷ್ಟು ಮಾತನಾಡುವುದಿಲ್ಲ. ಅವರು ಮಹಿಳಾ ವಿರೋಧಿಗಳು . ಅವರು ಆಧುನಿಕತೆಯ ವಿರೋಧಿಗಳು . ಮುಸ್ಲಿಂ ಎಂಬ ಈ ಸಮಸ್ಯೆಯನ್ನು ನಾವು ಸರಿಪಡಿಸಬೇಕಾಗಿದೆ… ಇದು ಟಿ. ವಿ ಯ ಸ್ಕ್ರೀನ್ ನಲ್ಲಿ ರಾರಾಜಿಸುತ್ತಿರುವ ಸ್ಕ್ರಿಪ್ಟ್ ಗಳು .ಈ ಸ್ಕ್ರಿಪ್ಟ್ ಸಮಸ್ಯೆ. ನಾನು ಸಮಸ್ಯೆ ಅಲ್ಲ.

ಮಾಧ್ಯಮ ಮತ್ತು ಸರ್ಕಾರದ ನಡುವೆ ಸಂಬಂಧವಿದೆ. ಒಬ್ಬ ಪಕ್ಷದ ನಾಯಕ ಕೆಲವು ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿಯಾಗುತ್ತಾನೆ. ತಮ್ಮ ಪಕ್ಷವು ಪ್ರತಿ ಭಾರತೀಯರಂತೆ ಮುಸ್ಲಿಮರಿಗೆ “ಸಹ” ಬದ್ಧವಾಗಿದೆ ಎಂದು ಅವರು ಹೇಳುತ್ತಾರೆ. ಅವರ ಹೇಳಿಕೆಗಳನ್ನು ತಿರುಚಲಾಗುತ್ತದೆ. ತಿರುಚಿದ ಹೇಳಿಕೆಗಳನ್ನು ಚರ್ಚಿಸಲಾಗುತ್ತದೆ . ‘ಆ ಪಕ್ಷವು ಮುಸ್ಲಿಂ ಪಕ್ಷ,’ ಎಂಬ ಮುಖ್ಯಾಂಶಗಳು ರಾರಾಜಿಸುತ್ತವೆ. ಆಂಕರ್ ಗಳು ಕೋಪದಿಂದ ಅಬ್ಬರಿಸುತ್ತಾರೆ. ಯಾಕೆ? ಮುಸ್ಲಿಮರೊಂದಿಗಿನ ಸಂಬಂಧ – ರಾಜಕೀಯ ಅಥವಾ ಸಾಮಾಜಿಕ ಅಪರಾಧವೇ? ಮುಸ್ಲಿಮರು ಭಾರತೀಯರಲ್ಲವೆ?
ಮಾಧ್ಯಮ ಮತ್ತು ಸರ್ಕಾರದ ನಡುವಿನ ಈ ಸಂಬಂಧವೇ ಸಮಸ್ಯೆಯಾಗಿದೆ. ನಾನು ಸಮಸ್ಯೆ ಅಲ್ಲ.

ಮುಸ್ಲಿಮರು ಬೀದಿಗಳಲ್ಲಿ, ತಮ್ಮ ಮನೆಗಳಲ್ಲಿ ಕೊಲ್ಲಲ್ಪಡುತ್ತಿದ್ದಾರೆ. ಕಾನೂನು, ಅಧಿಕಾರಿಗಳು ಅಪರಾಧಿಗಳೊಂದಿಗೆ ಬಹಿರಂಗವಾಗಿ ಶಾಮೀಲಾಗಿದ್ದಾರೆ. ಒಬ್ಬ ವ್ಯಕ್ತಿ ಮುಸ್ಲಿಂನನ್ನು ಕೊಲ್ಲುತ್ತಾನೆ, ಅವನನ್ನು ಸುಟ್ಟುಹಾಕುತ್ತಾನೆ, ಕೊಲೆಗಾರನಿಗೆ ಹೊಸ ಹಾದಿಯನ್ನು ನಿರ್ಮಿಸಿಕೊಡಲಾಗುತ್ತದೆ. ಅವರಿಗೆ ನೂರಾರು ಬೆಂಬಲ, ಅವರಿಗೆ ಹಣ ಸಂಗ್ರಹಿಸಿ ಅದ್ಧೂರಿ ಸ್ವಾಗತ. ಅಪರಾಧಿ, ಕೊಲೆಗಾರನೊಂದಿಗೆ ಸಂಬಂಧ ಹೊಂದಲು ಇಂದು ಅವಮಾನವಿಲ್ಲ. ಮಂತ್ರಿಗಳೆ ಇಂದು ಇದನ್ನು ಮಾಡುತ್ತಾರೆ.
ಈ ನಾಚಿಕೆರಹಿತವೇ ಸಮಸ್ಯೆಯಾಗಿದೆ. ದ್ವೇಷದ ಈ ಆಚರಣೆಯೇ ಸಮಸ್ಯೆಯಾಗಿದೆ. ನಾನು ಸಮಸ್ಯೆ ಅಲ್ಲ.

ಅಪರಾಧದ ನಂತರ, ರಾಜಕೀಯ ನಾಯಕರು ಮಾತನಾಡುವುದಿಲ್ಲ. ಇಷ್ಟಕ್ಕೂ ಓರ್ವ ಮುಸ್ಲಿಂ ಕೊಲ್ಲಲ್ಪಟ್ಟಿದ್ದಾನೆ. ಮೃತ್ಯು ಕೊಲೆಗಾರರನ್ನು ಎಬ್ಬಿಸುತ್ತದೆ. ಮುಂದಿನ ಕೊಲೆಗಾಗಿ ಅವರು ಹೋಗುತ್ತಾರೆ. ಅವರು ಸರ್ಕಾರದಲ್ಲಿ ಕುಳಿತುಕೊಂಡ ಬೆಂಬಲಿಗರನ್ನು ಹೊಂದಿದ್ದಾರೆಂದು ಅವರಿಗೆ ತಿಳಿದಿದೆ. ಅವರನ್ನು ಇದು ಪ್ರಸಿದ್ಧಿಗೆ ತರುತ್ತದೆ ಎಂದು ಅವರಿಗೆ ತಿಳಿದಿದೆ.
ಈ ಮೌನವೇ ಸಮಸ್ಯೆಯಾಗಿದೆ. ನಾನು ಸಮಸ್ಯೆ ಅಲ್ಲ.

ಪ್ರಧಾನಿ ರೈತರ ರಾಲಿಯಲ್ಲಿ ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ. ಯಾಕೆ? ರೈತರು ತಮ್ಮ ಕಷ್ಟಗಳನ್ನು ಮರೆತುಬಿಡಲೆಂದು ಅವರು ಬಯಸುತ್ತಾರೆ. ಸರ್ಕಾರವು ಅವರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ವಿಫಲಗೊಂಡಿದೆ ಎಂಬುದನ್ನು ಮರೆಸಲು.ಮುಸ್ಲಿಮರನ್ನು ಸರಿಪಡಿಸಬೇಕು. ಅವರ ಬಗ್ಗೆ ದ್ವೇಷದ ಮಾತುಗಳನ್ನಾಡಿ ಪರಸ್ಪರ ಒಗ್ಗಟ್ಟನ್ನು ಮುರಿದು ತಮ್ಮ ವೋಟ್ ಗಳನ್ನು ಕಾಯ್ದಿರಿಸಿಕೊಳ್ಳಲು ತಂತ್ರ ಹೆಣೆಯುತ್ತಾರೆ, ಆದ್ದರಿಂದ ರೈತರು ದೂರು ನೀಡುವುದಿಲ್ಲ. ರಾಜಕೀಯ ತಂತ್ರ ಇದು.
ಈ ರಾಜಕೀಯವೇ ಸಮಸ್ಯೆ. ನಾನು ಸಮಸ್ಯೆ ಅಲ್ಲ.

ಜಾತ್ಯತೀತತೆ, ಉದಾರವಾದಿತ್ವ, ಶಾಂತಿ ಕೆಟ್ಟ ಪದಗಳು. ತುಂಬಾ ಕೆಟ್ಟ ಪದಗಳು. ಹಿಂದೂಗಳ ಶತ್ರುಗಳು ಅವುಗಳನ್ನು ನಂಬುತ್ತಾರೆ. ಮುಸ್ಲಿಮರು ಬರುತ್ತಿದ್ದಾರೆ. ಹಿಂದೂಗಳು ಅಪಾಯದಲ್ಲಿದ್ದಾರೆ… ಎಂಬಂತಹ ನಿರೂಪಣೆ ವಾಕರಿಕೆ ಬರುವಂತಿದೆ.
ಈ ನಿರೂಪಣೆಯೇ ಸಮಸ್ಯೆ. ನಾನು ಸಮಸ್ಯೆ ಅಲ್ಲ.

ನಕಲಿ ಸುದ್ದಿ ಮೇಲಿನಿಂದ ಹರಿಯುತ್ತದೆ. ಇದು ಮಂತ್ರಿಗಳು, ನಾಯಕರು ಎಲ್ಲರಿಗೂ ತಿಳಿದಿದೆ. ನಂತರ ಅವರು ಅದನ್ನು ಪರೀಕ್ಷಿಸಲು ಪ್ರಯತ್ನಿಸುವ ನಾಟಕವನ್ನು ಮಾಡುತ್ತಾರೆ. ಧರ್ಮಾಂಧತೆಯು ಮೇಲಿನಿಂದ ಹರಿಯುತ್ತದೆ. ದ್ವೇಷವು ಮುಖ್ಯವಾಹಿನಿಯಲ್ಲಿದ್ದು, ಹಿಂದೆಂದಿಗಿಂತಲೂ ಸಾಮಾನ್ಯವಾಗಿದೆ.
ಈ ನಕಲಿ ಸುದ್ದಿ ಸಾಂಕ್ರಾಮಿಕತೆಯೇ, ಈ ಧರ್ಮಾಂಧತೆಯೇ ಸಮಸ್ಯೆ. ನಾನು ಸಮಸ್ಯೆ ಅಲ್ಲ.

ಹೆಚ್ಚಿನ ಟಿವಿ ಆಂಕರ್ ಗಳು ಲಿಂಚ್ ಜನಸಮೂಹದ ಭಾಗವಾಗಿದ್ದಾರೆ. ಅವರು ನಮ್ಮ ಸೌಹಾರ್ದವನ್ನು, ನಮ್ಮ ಸಾಮಾಜಿಕ ಬಂಧಗಳನ್ನು, ನಮ್ಮ ದೇಶದ ಭವಿಷ್ಯವನ್ನು ಪ್ರತಿ ರಾತ್ರಿ ಕಸಿದುಕೊಳ್ಳುತ್ತಾರೆ. ಅವರನ್ನು ಪತ್ರಕರ್ತರೆನ್ನಬೇಡಿ.
ಅವರು ಸೂಟುಬೂಟುಧಾರಿ ಧರ್ಮಾಂಧರು. ದ್ವೇಷ ಬಿತ್ತುವ ದೊಂಬಿಕೋರರು.
ಈ ಪ್ರೈಮ್ ಟೈಮ್ ದೊಂಬಿಕೋರರೇ ಸಮಸ್ಯೆ. ನಾನು ಸಮಸ್ಯೆ ಅಲ್ಲ.

ನನ್ನ ಪ್ರಿಯ ದೇಶೀಯರೇ, ನನ್ನೊಂದಿಗೆ ಮಾತನಾಡಿ. ನಾವು ಮಾತನಾಡೋಣ. ಸುತ್ತುವರಿದಿರುವ ದ್ವೇಷದ ಗದ್ದಲವನ್ನುಸಂವಾದದ ಮೂಲಕ ಅಡಗಿಸೋಣ . ಸಂವಾದವನ್ನು ಪ್ರಾರಂಭಿಸೋಣ. # TalktoAMuslim

(ಲೇಖಕರು ದೆಹಲಿಯ ಮೂಲದ ಪತ್ರಕರ್ತರಾಗಿದ್ದಾರೆ)