ಸ್ಪೀಕರ್ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂ ಕೋರ್ಟಿಗೆ: ಅತೃಪ್ತರ ಪರ ಹಾಜರಾದ ಖ್ಯಾತ ವಕೀಲ ಮುಕುಲ್ ರೋಹ್ಟಗಿ

0
1288

ಮುಂಬೈ, ಜು. 10: ರಾಜ್ಯದ ರಾಜಕೀಯ ಬಿಕ್ಕಟ್ಟು ಸುಪ್ರೀಂಕೋರ್ಟಿನ ಅಂಗಳಕ್ಕೆ ಬಂದಿದೆ. ರಾಜೀನಾಮೆಯನ್ನು ಸ್ವೀಕರಿಸದೆ ದೋಸ್ತಿ ಸರಕಾರಕ್ಕೆ ಹೆಚ್ಚು ಸಮಯ ಅವಕಾಶ ನೀಡಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಕ್ರಮವನ್ನು ಪ್ರಶ್ನಿಸಿ ಅತೃಪ್ತ ಶಾಸಕರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಾಜೀನಾಮೆ ನೀಡುವುದು ಪ್ರಜಾಪ್ರಭುತ್ವದ ಅವಕಾಶ ವಾಗಿದೆ ಮತ್ತು ಕುಮಾರ ಸ್ವಾಮಿ ಸರಕಾರಕ್ಕಾಗಿ ಸ್ಪೀಕರ್ ತಮ್ಮ ಹಕ್ಕನ್ನು ನಿರಾಕರಿಸಿದ್ದಾರೆ ಎಂದು ಶಾಸಕರು ಅರ್ಜಿಯಲ್ಲಿ ಬೆಟ್ಟುಮಾಡಿದ್ದಾರೆ.

ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟಿನಲ್ಲಿ ಹಾಜರಾಗಿದ್ದಾರೆ. ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷ ಪೀಠ ಅರ್ಜಿಯನ್ನು ನಾಳೆ ವಿಚಾರಣೆಗೆ ಪರಿಗಣಿಸಿದೆ. ಕಾಂಗ್ರೆಸ್ ವಿಫ್ ಉಲ್ಲಂಘಿಸಿ ಎಂಟು ಶಾಸಕರು ರಾಜೀನಾಮೆ ನೀಡಿದ್ದು ಇದಕ್ಕೆ ಕಾನೂನು ಬಲ ಇಲ್ಲ ಎಂದು ರಮೇಶ್ ಕುಮಾರ್ ರಾಜೀನಾಮೆಯನ್ನು ತಿರಸ್ಕರಿಸಿದ್ದರು. ಶಾಸಕರು ನೇರವಾಗಿ ಭೇಟಿಯಾದ ಬಳಿಕ ಅವರ ರಾಜೀನಾಮೆಯ ಕುರಿತು ಸ್ಪಷ್ಟಪಡಿಸಿಕೊಳ್ಳಲಾಗುವುದು ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಇದರ ವಿರುದ್ಧ ಆಡಳಿತ ಪಕ್ಷದ ಶಾಸಕರು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ. ವಿಳಂಬ ಮಾಡದೆ ನಮ್ಮ ಅರ್ಜಿಯನ್ನು ಸ್ವೀಕರಿಸಬೇಕೆಂದು ಶಾಸಕರು ಬೇಡಿಕೆಯಿಟ್ಟಿದ್ದಾರೆ. ಈ ನಡುವೆ ಇಂದು ಬೆಳಗ್ಗೆ ಮುಂಬೈ ಹೊಟೇಲಿನಲ್ಲಿ ಅತೃಪ್ತ ಶಾಸಕರನ್ನು ಭೇಟಿಯಾಗಲು ಹೋದ ಡಿಕೆ ಶಿವಕುಮಾರ್ ರನ್ನು ಹೊಟೇಲ್ ಪ್ರವೇಶಿಸದಂತೆ ಮುಂಬೈ ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಕಾಂಗ್ರೆಸ್, ಜೆಡಿಎಸ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ರಾಜ್ಯಪಾಲ ಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಒಟ್ಟಿನಲ್ಲಿ ರಾಜ್ಯ ರಾಜಕೀಯ ಚಟುವಟಿಕೆಗಳು ಕುತೂಹಲಕರ ತಿರುವನ್ನು ತೆಗೆದುಕೊಂಡಿದೆ.