ವೆಲ್ಫೇರ್ ಪಾರ್ಟಿ ನಾಯಕ ಜಾವೇದ್ ಮುಹಮ್ಮದ್‌ರವರ‌ ಇರುವಿಕೆಯನ್ನು ನಿರಾಕರಿಸಿದ ನೈನಿ ಜೈಲು!!

0
33

ಸನ್ಮಾರ್ಗ ವಾರ್ತೆ

ಪ್ರಯಾಗರಾಜ್‌: ಉತ್ತರಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ಪ್ರವಾದಿ ನಿಂದನೆಯನ್ನು ವಿರೋಧಿ ನಡೆದ ಪ್ರತಿಭಟನೆಗಳ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವೆಲ್ಫೇರ್ ಪಾರ್ಟಿ ನಾಯಕ ಜಾವೇದ್ ಮುಹಮ್ಮದ್‌ರನ್ನು ಬಂಧಿಸಿದ ಕೆಲವು ದಿನಗಳು ಸಂದಿವೆ. ಆದರೆ, ಇದುವರೆಗೆ ಈ ಕುರಿತು ಸುಮ್ಮನಿದ್ದ ಜೈಲು ಅಧಿಕಾರಿಗಳು ಮತ್ತು ಜಿಲ್ಲಾಡಳಿತವು ನೈನಿ ಕೇಂದ್ರ ಕಾರಾಗೃಹದಲ್ಲಿ ಜಾವೇದ್‌ರವರ ಇರುವಿಕೆಯನ್ನು ಖಚಿತ ಪಡಿಸಲು ನಿರಾಕರಿಸಿರುವುದಾಗಿ ವರದಿಯಾಗಿದೆ.

ಈ ಕುರಿತು ಜಾವೇದ್‌ ಮುಹಮ್ಮದ್ ರವರ ಪತ್ನಿ ಪರ್ವೀನ್ ಫಾತಿಮಾರ ಸಂದೇಶವೊಂದನ್ನು ಪುತ್ರಿ ಅಫ್ರೀನ್ ಟ್ವೀಟ್ ಮಾಡಿದ್ದು, ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ನಮಗೆ ಚಿಂತೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜೂನ್ 11 ರಂದು, ನನ್ನ ಪತಿ ಜಾವೇದ್ ಮುಹಮ್ಮದ್ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ ನೈನಿ ಸೆಂಟ್ರಲ್ ಜೈಲಿಗೆ ಕಳುಹಿಸಿದರು. ನಂತರ ಪೊಲೀಸರು ಬೇಕಾಬಿಟ್ಟಿ ಆರೋಪಗಳು ಮತ್ತು ಸುಳ್ಳು ಆರೋಪಗಳನ್ನು ಅವರ ಮೇಲೆ ಹೊರಿಸಿದ್ದಾರೆ. ಆದರೆ, ಸೋಮವಾರದಿಂದ ನೈನಿ ಕೇಂದ್ರ ಕಾರಾಗೃಹದ ಅಧಿಕಾರಿಗಳು ಜಾವೇದ್ ಜೈಲಿನಲ್ಲಿ ಇರುವುದರ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಕುಟುಂಬದವರು ಮತ್ತು ವಕೀಲರು ಮುಂಜಾನೆಯಿಂದ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇದುವರೆಗೂ ಅಲಹಾಬಾದ್ ಜಿಲ್ಲೆಯ ಅಧಿಕಾರಿಗಳು ಮತ್ತು ನೈನಿ ಕೇಂದ್ರ ಕಾರಾಗೃಹದ ಅಧಿಕಾರಿಗಳು ನನ್ನ ಪತಿ ಇರುವಿಕೆಯ ಬಗ್ಗೆ ನಮಗೆ ಭರವಸೆ ನೀಡಲು ವಿಫಲರಾಗಿದ್ದಾರೆ. ನನ್ನ ಪತಿ ಸೇರಿದಂತೆ ನೈನಿ ಕೇಂದ್ರ ಕಾರಾಗೃಹದ ಹಲವಾರು ಕೈದಿಗಳನ್ನು ಯುಪಿಯಾದ್ಯಂತ ಹಲವಾರು ಜೈಲುಗಳಿಗೆ ವರ್ಗಾಯಿಸಲಾಗಿದೆ ಮತ್ತು ನನ್ನ ಪತಿಯನ್ನು ಡಿಯೋರಿಯಾ ಜೈಲಿಗೆ ವರ್ಗಾಯಿಸಲಾಗಿದೆ ಎಂದು ಮಾಧ್ಯಮಗಳು ಮತ್ತು ಇತರರಿಂದ ನಾವು ವದಂತಿಗಳನ್ನು ಕೇಳುತ್ತಿದ್ದೇವೆ. ಆದರೆ, ನಮಗೆ ಅಥವಾ ನಮ್ಮ ವಕೀಲರಿಗೆ ಈ ಕುರಿತು ಯಾವುದೇ ಅಧಿಕೃತ ದೃಢೀಕರಣವನ್ನು ನೀಡಲಾಗಿಲ್ಲ. ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ನಮಗೆ ಚಿಂತೆಯಾಗುತ್ತಿದೆ ಎಂದು ಜಾವೇದ್ ಪತ್ನಿ ಪರ್ವೀನ್ ಫಾತಿಮಾ ಕಳವಳ ವ್ಯಕ್ತಪಡಿಸಿದ್ದಾರೆ.

ಅಲಹಾಬಾದ್ ಆಡಳಿತವು ನಮ್ಮ ಕುಟುಂಬವನ್ನು ದೋಷಾರೋಪಣೆ ಮಾಡಲು ಮತ್ತು ಕಿರುಕುಳ ನೀಡಲು ಎಲ್ಲಾ ಕಾರ್ಯವಿಧಾನಗಳನ್ನು ಬೈಪಾಸ್ ಮಾಡುತ್ತಿದೆ. ಜಿಲ್ಲಾ ಮತ್ತು ಜೈಲು ಅಧಿಕಾರಿಗಳ ಈ ಕೃತ್ಯವು ನಮ್ಮನ್ನು ಆತಂಕಕ್ಕೆ ತಳ್ಳಿದೆ ಎಂದು ಪರ್ವೀನ್ ಫಾತೀಮಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.