ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು

0
205

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ.

ರಾಷ್ಟ್ರಪತಿ ಹುದ್ದೆಗೆ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಹೆಸರಿಸಿದ್ದು, ಒಡಿಶಾದ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದ್ರೌಪದಿ ಮುರ್ಮು ಜೀ ಅವರು ಸಮಾಜಸೇವೆಗೆ ಮತ್ತು ಬಡವರು, ದೀನದಲಿತರು ಮತ್ತು ಅಂಚಿನಲ್ಲಿರುವವರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅವರು ಉತ್ತಮ ಆಡಳಿತಾತ್ಮಕ ಅನುಭವವನ್ನೂ ಹೊಂದಿದ್ದಾರೆ. ಅವರು ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

ಮುರ್ಮು ಅವರು ವಿರೋಧ ಪಕ್ಷದ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ವಿರುದ್ಧ ಸ್ಪರ್ಧಿಸಲಿದ್ದಾರೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 21ರಂದು ಫಲಿತಾಂಶ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಜೂನ್ 29 ಕೊನೆಯ ದಿನಾಂಕವಾಗಿದೆ.