ಸನ್ಮಾರ್ಗ ವಾರ್ತೆ
ಸೌದಿಯಲ್ಲಿ ವಾಣಿಜ್ಯ ಕ್ಷೇತ್ರವನ್ನು ಮತ್ತಷ್ಟು ಸುಧಾರಿಸಲು ಹೊಸ ಕಾನೂನುಗಳನ್ನು ಜಾರಿಗೆ ತಂದಿದ್ದು 15 ವರ್ಷ ವಯೋಮಿತಿಯವರು ಕೂಡ ಇನ್ನು ಮುಂದೆ ಉದ್ಯಮ ಆರಂಭಿಸಬಹುದಾಗಿದೆ. ಇದು ಸೌದಿ ಸಚಿವ ಸಂಪುಟದ ತೀರ್ಮಾನವಾಗಿದ್ದು, ವಾಣಿಜ್ಯ ವಾತಾವರಣವನ್ನು ಸುಧಾರಿಸುವ ಸಲುವಾಗಿ ಮತ್ತು ವ್ಯವಹಾರ ಕ್ಷೇತ್ರವನ್ನು ಹೆಚ್ಚು ಚುರುಕುಗೊಳಿಸುವ ಸಲುವಾಗಿ ಸೌದಿ ಸಚಿವ ಸಂಪುಟವು ಸಮಗ್ರವಾದ ಹೊಸ ‘ವಾಣಿಜ್ಯ ವ್ಯವಹಾರಗಳ ಕಾನೂನು’ ಅನ್ನು ಅನುಮೋದಿಸಿದೆ.
ದೇಶದ ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಿಗೆ ಈ ಕಾನೂನು ದಾರಿ ಮಾಡಿಕೊಡುತ್ತದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದ್ದು, ಇನ್ನುಮುಂದೆ 15 ವರ್ಷದ ಸೌದಿ ಪ್ರಜೆ ವ್ಯವಹಾರ ಆರಂಭಿಸಲು ಅವಕಾಶ ನೀಡಲಾಗಿದೆ. ಆದರೆ ಪೋಷಕರ ಅಥವಾ ಲೀಗಲ್ ಕಸ್ಟೋಡಿಯನ್ ಅವರ ಮುಂಚಿತ ಅನುಮತಿ ಪಡೆದಿರಬೇಕಾಗುತ್ತದೆ. ಇದೇ ವೇಳೆ ಸಚಿವ ಸಂಪುಟವು ಈವರೆಗೂ ಅಸ್ತಿತ್ವದಲ್ಲಿದ್ದ ಮೂರು ಹಳೆಯ ವಾಣಿಜ್ಯ ಕಾನೂನುಗಳನ್ನು ರದ್ದುಗೊಳಿಸಿದೆ ಮತ್ತು 271 ವಿಧಿಗಳನ್ನು ಒಳಗೊಂಡ ಈ ಹೊಸ ಸಮಗ್ರ ಕಾನೂನನ್ನು ತರಲಾಗಿದೆ.
ವ್ಯಾಪಾರಿಗಳು ಮತ್ತು ಸಣ್ಣ-ಮಧ್ಯಮ ಉದ್ಯಮಗಳ ವ್ಯವಹಾರಗಳಿಗೆ ಈ ಕಾನೂನು ಸಂಪೂರ್ಣ ರಕ್ಷಣೆ ನೀಡುತ್ತದೆ. ವಾಣಿಜ್ಯ ಒಪ್ಪಂದಗಳು ಮತ್ತು ಏಜೆನ್ಸಿ ಚಟುವಟಿಕೆಗಳ ಮೂಲಕ ಇವುಗಳ ಬೆಳವಣಿಗೆಗೆ ಇದು ಬೆಂಬಲ ನೀಡಲಿದ್ದು, ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವ್ಯಾಪಾರಿಗಳಿಗೆ ತೊಂದರೆ ನೀಡುವ ತಪ್ಪಾದ ಪ್ರವೃತ್ತಿಗಳನ್ನು ತಡೆಯಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ನ್ಯಾಯಾಲಯದ ಮೊರೆ ಹೋಗಲು ಮತ್ತು ಪರಿಹಾರ ಕೋರಲು ಕಾನೂನು ಅಧಿಕಾರ ನೀಡುತ್ತದೆ. ಲೆಕ್ಕಪತ್ರಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಲು ಮತ್ತು ಎಲೆಕ್ಟ್ರಾನಿಕ್ ದಾಖಲೆಗಳಿಗೆ ಮೂಲ ಕಾಗದದ ದಾಖಲೆಗಳಷ್ಟೇ ಕಾನೂನು ಮಾನ್ಯತೆ ನೀಡಲು ಇದರಲ್ಲಿ ವ್ಯವಸ್ಥೆಯಿದ್ದು, ಈ ಹೊಸ ಕಾನೂನುಗಳು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ 180 ದಿನಗಳ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ.












