ಪಾಕಿಸ್ತಾನಕ್ಕೆ ಗೂಢಚರ್ಯೆ: ಬಿಹಾರ ಮೂಲದ ಮತ್ತಿಬ್ಬರು ಬಂಧನ

0
252

ಸನ್ಮಾರ್ಗ ವಾರ್ತೆ

ಅಮರಾವತಿ: ಭಾರತೀಯ ನೌಕಾಪಡೆಯನ್ನು ಗುರಿಯಾಗಿಸಿಕೊಂಡಿದ್ದ ಪಾಕಿಸ್ತಾನಿ ಗೂಢಚರ್ಯೆ ಜಾಲಕ್ಕೆ ಸಂಬಂಧಿಸಿದಂತೆ ನಡೆಸಲಾದ ‘ಆಪರೇಷನ್ ಫೈರ್‌ವಾಲ್’ ಕಾರ್ಯಾಚರಣೆಯಲ್ಲಿ ಬಿಹಾರದ ಇಬ್ಬರನ್ನು ಆಂಧ್ರಪ್ರದೇಶದ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಬಂಧಿಸಿದೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಬಿಹಾರದ ರಕ್ಸೌಲ್ ಮೂಲದ ರಾಜಾ ಕುಮಾರ್ ಮತ್ತು ಆದಿತ್ಯ ಕುಮಾರ್ ಪಾಂಡೆ ಎಂಬುವವರನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಇಬ್ಬರನ್ನೂ ನವೆಂಬರ್ 10 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇವರು ಭಾರತೀಯ ಸಿಮ್ ಕಾರ್ಡ್‌ಗಳಿಗೆ ಲಿಂಕ್ ಮಾಡಲಾದ ಒಟಿಪಿಗಳನ್ನು ನೇಪಾಳದಲ್ಲಿರುವ ಹ್ಯಾಂಡ್ಲರ್‌ಗಳ ಮೂಲಕ ರವಾನಿಸಿ, ಪಾಕಿಸ್ತಾನಿ ಏಜೆಂಟ್‌ಗಳು ವಾಟ್ಸಾಪ್ ಖಾತೆಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಬೇರೊಬ್ಬರ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಯ ಮೂಲಕ ಹಣ ಪಡೆದುಕೊಂಡಿದ್ದರು.

ವಿಶಾಖಪಟ್ಟಣದ ಪೂರ್ವ ನೌಕಾ ಕಮಾಂಡ್‌ನ ಕಾರ್ಯತಂತ್ರದ ಮಾಹಿತಿ ಹಾಗೂ ಯುದ್ಧನೌಕೆಗಳ ವಿವರಗಳನ್ನು ಸೋರಿಕೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಈ ಹಿಂದೆ ನೌಕಾಪಡೆಯ ಉದ್ಯೋಗಿ ಪ್ರದೀಪ್ ಮುಖರ್ಜಿ ಮತ್ತು ಸಿವಿಲ್ ಚಾಲಕ ಅನ್ನಂ ಸಾಯಿ ವರಪ್ರಸಾದ್ ಅವರನ್ನು ಬಂಧಿಸಲಾಗಿತ್ತು. ನೌಕಾಪಡೆಯ 13 ಸಿಬ್ಬಂದಿ ಸೇರಿದಂತೆ ಒಟ್ಟು 18 ಜನರ ಮೇಲೆ ಈ ಗೂಢಚರ್ಯೆ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿದೆ.