ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ನಡೆದ ದಾಳಿಯ ನಂತರ, ಭಾರತ ಮತ್ತು ಇಸ್ರಾಯೇಲ್ ಸೇರಿದಂತೆ ಜಗತ್ತಿನ ದೇಶಗಳು ಭಯೋತ್ಪಾದನೆಯ ಹೊಸ ಅಲೆಯನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ಭಾರತದಲ್ಲಿನ ಇಸ್ರಾಯೇಲ್ ರಾಯಭಾರಿ ರೂವೆನ್ ಅಜಾರ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಗಳು ಮತ್ತು ಭದ್ರತಾ ಏಜೆನ್ಸಿಗಳಿಗಿಂತ ವೇಗವಾಗಿ ಭಯೋತ್ಪಾದಕ ಸಂಘಟನೆಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ ಎಂದಿರುವ ಅಜಾರ್, ಮುಂಬರುವ ಭಯೋತ್ಪಾದನೆಯ ಹೊಸ ಅಲೆಯನ್ನು ತಡೆಯಲು ಭದ್ರತಾ ಏಜೆನ್ಸಿಗಳು ನಿರಂತರವಾಗಿ ಜಾಗರೂಕರಾಗಿರಬೇಕು ಮತ್ತು ವೇಗವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳ ನಡುವಿನ ಹೆಚ್ಚುತ್ತಿರುವ ಸಹಕಾರದ ಬಗ್ಗೆ ಮಾತನಾಡಿದ ಅಜಾರ್, ಕಳೆದ ಒಂದು ವರ್ಷದಲ್ಲಿ ಹಮಾಸ್ನ ಹಿರಿಯ ಕಮಾಂಡರ್ಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಂಡುಬಂದಿದ್ದಾರೆ ಎಂದು ಆರೋಪಿಸಿದ್ದಾರೆ. ಹಮಾಸ್ ನಾಯಕರಾದ ನಾಜಿ ಝಾಹಿರ್ ಮತ್ತು ಖಾಲಿದ್ ಅಲ್-ಖುದುಮಿ ಅವರು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಅವರು ಆರೋಪಿಸಿದ್ದು ಇದು ದೃಢಪಟ್ಟಿಲ್ಲ.
2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಹಮಾಸ್ನ ಕೈವಾಡ ಎಂದು ಅಜಾರ್ ಹೇಳಿದ್ದಾರೆ.












