ಅಂಬೇಡ್ಕರರನ್ನು ಗೆಲ್ಲಿಸಿದ್ದು ಅದೇ ಭಯೋತ್ಪಾದಕರು ಎಂಬುದು ನೆನಪಿದೆಯೇ?

0
940

ಸನ್ಮಾರ್ಗ ವಾರ್ತೆ

✍️ಆರ್.ಎ.ಲೋಹಾನಿ, ಮಳಗಿ

ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ಕೇರಳವನ್ನ ಮಿನಿ ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ, ಅಷ್ಟೇ ಅಲ್ಲ ಅಲ್ಲಿಯ ಮತದಾರರನ್ನ ಭಯೋತ್ಪಾದಕರು ಎಂದು ಕೂಡ ಜರೆದಿದ್ದಾರೆ.
ಅವರ ಪ್ರಕಾರ ಕೇರಳ ಮಿನಿ ಪಾಕಿಸ್ತಾನ್, ಅದಕ್ಕಾಗಿ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಅಲ್ಲಿಂದ ಗೆಲುವು ಸಾಧಿಸುತ್ತಾರೆ, ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ, ಇವರೆಲ್ಲ ಭಯೋತ್ಪಾದಕರ ನೆರವಿನಿಂದಲೇ ಸಂಸದರಾಗುತ್ತಾರೆ ಎಂಬುದು ನಿತಿಶ್ ರಾಣೆಯವರ ಮಾತು.

ಭಾರತದ ಯಾವುದೇ ಭೂಭಾಗವನ್ನು ಪಾಕಿಸ್ತಾನಕ್ಕೆ ಹೋಲಿಸಬಾರದು ಎಂದು ಮೂರು ತಿಂಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಇದು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರಿಗೆ ಅನ್ವಯ ಅಲ್ಲ ಎಂದು ಎನಿಸುತ್ತದೆ.

ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ರವರು ಬೆಂಗಳೂರಿನ ಗೋರಿಪಾಳ್ಯವನ್ನ ಪಾಕಿಸ್ತಾನಕ್ಕೆ ಹೋಲಿಸಿದ್ದು ವಿವಾದವಾಗಿತ್ತು. ಆಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನಕ್ಕೆ ಹೋಲಿಸುವಂತಿಲ್ಲ ಎಂಬ ಖಡಕ್ ಎಚ್ಚರಿಕೆ ನೀಡಿತ್ತು. ಹೀಗೆ ಹೇಳುವುದು ದೇಶದ ಸಮಗ್ರತೆಗೆ ಕೆಡುಕು ಎಂದು ಕೂಡ ಸುಪ್ರೀಂ ಕಳವಳ ವ್ಯಕ್ತಪಡಿಸಿತ್ತು. ಅದರ ಹೊರತಾಗಿಯೂ ಬಿಜೆಪಿ ಮತ್ತು ಸಂಘ ಪರಿವಾರದ ಮಂದಿಯ ಪಾಕಿಸ್ತಾನ ಆಲಾಪ ಇನ್ನೂ ನಿಂತಿಲ್ಲ.

ದಿನೇಶ್ ಗುಂಡೂರ್ ರವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ಬಸವರಾಜ ಪಾಟೀಲ್ ಯತ್ನಾಳ್ ಹೇಳಿ ಆ ಬಳಿಕ ನ್ಯಾಯಾಲಯದಲ್ಲಿ ಉಗಿಸಿಕೊಂಡಿದ್ದರು. ಮಂಗಳೂರಿನ ಶಾಸಕ ಭರತ್ ಶೆಟ್ಟಿ ತನ್ನದೇ ಕ್ಷೇತ್ರದ ಒಂದು ಭಾಗವನ್ನು ಪಾಕಿಸ್ತಾನ ಎಂದು ಕರೆದು ತನ್ನನ್ನು ತಾನೇ ಹೀಯಾಳಿಸಿಕೊಂಡಿದ್ದರು. ಈಗ ಬಾಯಿ ಮುಚ್ಚಿಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ ನಾಲ್ಕು ವರ್ಷಗಳ ಹಿಂದೆ ಉಳ್ಳಾಲವನ್ನ ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡಿದ್ದರು.

ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಿ, ಅಲ್ಪಸಂಖ್ಯಾತರಿಗೆ ಪೂರಕವಾಗಿ ಮಾತನಾಡುವವರನ್ನೂ, ಬಿಜೆಪಿ ಸಂಘ ಪರಿವಾರ ಮತ್ತು ಮೋದಿಯವರನ್ನು ವಿರೋಧಿಸಿ ಮಾತನಾಡುವವರನ್ನೂ ಪಾಕಿಸ್ತಾನಕ್ಕೆ ಕಳಿಸಿ ಎಂದು ಹೇಳುವವರಿಗೇನು ಕೊರತೆ ಇಲ್ಲ, ಇದೆಲ್ಲವೂ ಸುಪ್ರೀಂ ಕೋರ್ಟ್ ಆದೇಶಕ್ಕಿಂತ ಮೊದಲು ಬಂದದ್ದು ಎಂದು ಸುಮ್ಮನಿರಬಹುದು. ಆದರೆ ಈ ನಿತೀಶ್ ರಾಣೆ ಮಾತನಾಡಿದ್ದು, ಸುಪ್ರೀಂಕೋರ್ಟ್ ಆದೇಶವನ್ನ ಉಲ್ಲಂಘಿಸಿದ ಮಾತು. ಕೇರಳಿಯರಿಗೆ ಸ್ವಾಭಿಮಾನ ಇದ್ದರೆ ಇದನ್ನು ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಸಾಧ್ಯತೆಯೂ ಇದೆ.

ಮೊದಲ ಬಾರಿ ಪ್ರಧಾನಿಯಾದ ಹೊಸತರಲ್ಲಿ ನರೇಂದ್ರ ಮೋದಿಯವರು ಅಧಿಕೃತ ಕರೆಗೂ ಕಾಯದೆ ರಾತ್ರೋರಾತ್ರಿ ಹೋಗಿ ನವಾಬ್ ಶರೀಫರೊಂದಿಗೆ ಬಿರಿಯಾನಿ ತಿಂದು ಅವರ ತಾಯಿಗೆ ಸೀರೆಯ ಉಡುಗೊರೆ ಕೊಟ್ಟು ಬಂದರು ಯಾವ ಪಾಕಿಸ್ತಾನವನ್ನು ನೀವು ಜರಿಯುತ್ತಿದ್ದೀರೋ ಅದೇ ಪಾಕಿಸ್ತಾನಕ್ಕೆ ಆತ್ಮೀಯರಾದರು. ಅದೇ ಪಾಕಿಸ್ತಾನದ ಪಿತಾಮಹ ಜಿನ್ನಾ ನ ಸಮಾಧಿಗೆ ಅಡ್ಡ ಬಿದ್ದು ಅವರನ್ನು ಹಾಡಿ ಹೊಗಳಿದ ಎಲ್ ಕೆ ಅಡ್ವಾಣಿಯವರನ್ನು ನೀವು ಮರೆಯುತ್ತಿರುವುದಾದರೂ ಯಾಕೆ? ರಾಣೆರವರೇ ಧನ್ಯವಾದ ನಿಮಗೆ ಇದೆಲ್ಲವನ್ನು ನೆನಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ.

ಆದರೆ ಈ ನಿತೀಶ್ ರಾಣೆ ಮತದಾರರನ್ನು ಭಯೋತ್ಪಾದಕರು ಎಂದಿದ್ದಾರಲ್ಲ ಅದಕ್ಕೇನು ಮಾಡುವುದು? ಕೇರಳದಲ್ಲಿ ಅದಕ್ಕಿಂತ ಮುಖ್ಯವಾಗಿ ವಯನಾಡಿನಲ್ಲಿ ಮುಸ್ಲಿಂ ಮತದಾರರ ಬಾಹುಳ್ಯವಿದೆ. ಮುಸ್ಲಿಂ ಬಾಹುಳ್ಯವನ್ನೇ ಭಯೋತ್ಪಾದನೆ ಎನ್ನುವುದಾದರೆ.

ನಾನು ನಿತೀಶ್ ರಾಣೆಯಂತಹ ಬಿಜೆಪಿಯ ನಾಯಕರಿಗೆ, ಈ ಸಂಘ ಪರಿವಾರದ ಮಂದಿಗೆ ನೆನಪಿಸಲು ಬಯಸುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ಗೆಲ್ಲಿಸಿದ್ದು ಆ ಮೂಲಕ ಅವರನ್ನು ಸಂವಿಧಾನ ರಚನಾ ಸಮಿತಿಯ ಭಾಗವಾಗಿಸಿದ್ದು ಇದೇ ಭಯೋತ್ಪಾದಕರು.

ನಿತೀಶ್ ರಾಣಿಯಂತವರ ದ್ವೇಷದ ಮಾತುಗಳು ಇತಿಹಾಸದ ಸತ್ಯವನ್ನ ಜನರಿಗೆ ಮನವರಿಕೆ ಮಾಡಿಕೊಳ್ಳಲು ವೇದಿಕೆ ಒದಗಿಸುತ್ತವೆ. ಅದಕ್ಕಾಗಿಯಾದರೂ ಅವರಿಗೆ ಧನ್ಯವಾದ ಅರ್ಪಿಸಲೇಬೇಕು.

ಪುಣೆಯಲ್ಲಿ ಮನುವಾದಿಗಳು ಅಂಬೇಡ್ಕರನ್ನು ಸೋಲಿಸಿದಾಗ ಅವರನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ಅಲ್ಲಿ ಗೆಲ್ಲಿಸಿ ಮತ್ತೆ ಲೋಕಸಭೆಗೆ ಕಳುಹಿಸಿದ್ದು ಮುಸ್ಲಿಮರು ಅಂದರೆ ನಿತೇಶ್ ರಾಣೆಯವರ ಅವರ ಪ್ರಕಾರ ಅದೇ ಭಯೋತ್ಪಾದಕರು.

ಪುರೋಹಿತ ಶಾಹಿಗಳು ವಿದ್ಯಾ ವಂಚಿತರನ್ನಾಗಿಸಿದ ಬಹುಜನರಿಗೆ, ಮುಖ್ಯವಾಗಿ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಶಿಕ್ಷಣ ನೀಡಲು ಹೊರಟಾಗ ಅವರಿಗೆ ಸಾತ್ ಕೊಟ್ಟಿದ್ದು ಫಾತಿಮಾ ಶೇಖ್, ಅವರ ಶಾಲೆ ತೆರೆಯಲು ಜಾಗ ಕೊಟ್ಟದ್ದು ಫಾತಿಮಾ ಶೇಖರ ಸಹೋದರ ಉಸ್ಮಾನ್ ಶೇಖ್.
ಹೌದು ಮುಸ್ಲಿಮರು ವೋಟು ಕೊಟ್ಟು ಮಾತ್ರಕ್ಕೆ ಭಯೋತ್ಪಾದಕರು ಎನ್ನುವುದಾದರೆ, ಶಿಕ್ಷಣ ಕ್ರಾಂತಿ ಸಹಕಾರ ನೀಡಿದ ಇವರೂ ಭಯೋತ್ಪಾದಕರೆ ಎಂದುಕೊಳ್ಳಿ.

ದೆಹಲಿಯ ಇಂಡಿಯಾ ಗೇಟ್ ಗೆ ಹೋಗಿದ್ದೀರಾ? ಅಲ್ಲಿ ಕೆತ್ತಲಾದ ಸ್ವತಂತ್ರ ಹೋರಾಟಗಾರರ ಹೆಸರನ್ನು ನೋಡಿದ್ದೀರಾ? ಅಲ್ಲಿ ನಿಮ್ಮ ವಂಶದವರ ಎಷ್ಟು ಹೆಸರಿದೆ? ಶೂನ್ಯ ಅಲ್ಲವೇ? ಅಲ್ಲಿ ಹೋಗಿ ನೋಡಿ ನೀವು ಹೇಳುವ ಎಷ್ಟು ಭಯೋತ್ಪಾದಕರ ಹೆಸರು ಅಲ್ಲಿ ಕೆತ್ತಲಾಗಿದೆ ಎಂಬುದು ಗೊತ್ತಾಗುತ್ತದೆ.

ನಿತೀಶ್ ರಾಣೆ ಕೇರಳವನ್ನ ಮಿನಿ ಪಾಕಿಸ್ತಾನ ಎಲ್ಲರೂ ಮತ್ತು ಅಲ್ಲಿಯ ಮತದಾರರನ್ನು ಭಯೋತ್ಪಾದಕರು ಎಂದು ಜರಿಯಲು ಬಳಸಿಕೊಂಡ ವೇದಿಕೆ ಯಾವುದು ಅಂದ್ರೆ ಅಫ್ಜಲ್ ಖಾನ್ ಎದುರು ಛತ್ರಪತಿ ಶಿವಾಜಿ ಐತಿಹಾಸಿಕ ಗೆಲುವಿನ ಸಂಭ್ರಮದ ವರ್ಷಾಚರಣೆಯ ವೇಳೆ.

ಆದ್ದರಿಂದ ಇತಿಹಾಸವನ್ನೂ ಒಮ್ಮೆ ಅವಲೋಕಿಸಬೇಕಾಗುತ್ತದೆ.
ಶಿವಾಜಿ ಮುಸ್ಲಿಂ ದ್ವೇಷಿಯಾಗಿರಲಿಲ್ಲ, ಆತ ಬಿಜಾಪುರದ ಆದಿಲ್ ಶಾಹಿಗಳ ವಿರೋಧಿಯಾಗಿದ್ದ, ಆ ಕಾಲದಲ್ಲಿ ಪ್ರಭಾವಿಯಾಗಿದ್ದ ಮೊಘಲರೊಂದಿಗೆ ದ್ವೇಷ ಸಾಧನೆಯ ವರದಿಗಳು ಸಿಗುವುದಿಲ್ಲ, ಶಿವಾಜಿ ಮಹಾರಾಜ್ ಗೋಲ್ಕಂಡದ ನವಾಬರೊಂದಿಗೂ, ಒಟ್ಟೋಮನ್‌ ಸಾಮ್ರಾಜ್ಯದ ಮುಸ್ಲಿಂ ಆಡಳಿತಗಾರರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರು.

ಶಿವಾಜಿಯ 11 ವೈಯಕ್ತಿಕ ಅಂಗರಕ್ಷಕರು ಮುಸ್ಲಿಮರಾಗಿದ್ದರು, ಅವರ ಸೈನ್ಯದಲ್ಲಿ ಶೇ.30ರಷ್ಟು ಸೈನಿಕರು ಮುಸ್ಲಿಮರಾಗಿದ್ದರು. ಅಂದರೆ 60,000 ಸೈನಿಕರು ಮುಸ್ಲಿಮರು. ಶಿವಾಜಿ ಮಹಾರಾಜರ ನೌಕಾಪಡೆ ಸಂಪೂರ್ಣವಾಗಿ ಮುಸ್ಲಿಮರ ಹಿಡಿತದಲ್ಲಿ ಇತ್ತು. ಇದನ್ನು ನಿರ್ವಹಿಸುತ್ತಿದ್ದುದು ದರಿಯಾ ಸಾರಂಗ್, ದೌಲತ್ ಖಾನ್ ಮತ್ತು ಇಬ್ರಾಹಿಂ ಖಾನ್ ಎಂಬ ಗವರ್ನರ್ ಗಳು. ವಿಜಾಪುರದ ಆದಿಲ್ ಶಾಹಿ ಸೈನ್ಯವನ್ನು ತೊರೆದು ರುಸ್ತುಮ್ ಜಾನ್, ಹುಸೇನ್ ಖಾನ್, ಕಾಸಿಮ್ ಖಾನ್ ಮುಂತಾದ ಅನೇಕ ಮುಸ್ಲಿಮರು ಏಳುನೂರು ಪಠಾಣರೊಂದಿಗೆ ಶಿವಾಜಿ ಮಹಾರಾಜರ ಸೈನ್ಯವನ್ನು ಸೇರಿದರು. ಶಿವಾಜಿ ಮುಸ್ಲಿಂ ವಿರೋಧಿಯಾಗಿದ್ದಾರೆ ಇದು ಸಾಧ್ಯವಿತ್ತೆ? ಸಿದ್ಧಿ ಹಿಲಾಲ್ ಶಿವಾಜಿ ಮಹಾರಾಜರ ಹತ್ತಿರದ ಸರ್ದಾರಗಳಲ್ಲಿ ಒಬ್ಬರು. ಸಿದ್ಧಿ ಇಬ್ರಾಹಿಂ ಶಿವಾಜಿ ಮಹಾರಾಜರ ಪ್ರಮುಖ ಅಂಗರಕ್ಷಕ. ಯಾವ ಅಬ್ಜಲ್ ಖಾನನನ್ನ ಶಿವಾಜಿ ಮಹಾರಾಜರು ಸೋಲಿಸಿದರು ಎಂದು ನೀವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರೋ, ಆ ಅಫ್ಜಲ್ ಖಾನ್ ಒಂದೇ ಏಟಿಗೆ ಉರುಳಿ ಬಿದ್ದವನೇನಲ್ಲ. ಅಫ್ಜಲ್ ಖಾನ್ ಅಜಾನುಬಾಹು, ಶಿವಾಜಿ ಮಹಾರಾಜ್ ಅವನೇದುರು ಕುಬ್ಜ್ ರಂತೆ ತೋರುತ್ತಿದ್ದರು. ವಾಘ ನಖದಿಂದ ಅಫ್ಜಲ್ ಖಾನನನ್ನು ಇರಿದ ಬಳಿಕ ಅಲ್ಲಿ ಸಂಘರ್ಷ ಏರ್ಪಟ್ಟಿತ್ತು. ಆಗ ಶಿವಾಜಿ ಮಹಾರಾಜರ ಅಂಗರಕ್ಷಕ ಸಿದ್ದಿ ಇಬ್ರಾಹಿಂ ಶಿವಾಜಿ ಮಹಾರಾಜರನ್ನ ಜೀವದ ಹಂಗು ತೊರೆದು ರಕ್ಷಿಸಿದರು. ಎದುರು ಮುಸ್ಲಿಮನ್ ಒಬ್ಬನು ಸಾಯುತ್ತಿರುವಾಗ ರಾಜ ನಿಷ್ಠೆಯನ್ನು ಸಿದ್ದಿ ಇಬ್ರಾಹಿಂ ಪ್ರಕಟಿಸಿದ್ದು ಹೇಗೆ? ಏಕೆಂದರೆ ಶಿವಾಜಿ ಮುಸ್ಲಿಂ ವಿರೋಧಿಯಾಗಿರಲಿಲ್ಲ. ಮುಂದೆ ಸಿದ್ದಿ ಇಬ್ರಾಹಿಂ ರಿಗೆ fonda ಕೋಟಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ಶಿವಾಜಿ ಮಹಾರಾಜರನ್ನ ಆಗ್ರಾ ಕೋಟೆಯಲ್ಲಿ ಗ್ರಹಬಂಧನದಲ್ಲಿ ಇಟ್ಟಾಗ ಅವರು ಅಲ್ಲಿಂದ ಪಾರಾಗುವಂತೆ ಸಹಾಯ ಮಾಡಿದ್ದು ಮದರಿ ಮೆಹತರ್ ಎಂಬ ಮುಸ್ಲಿಂ ವ್ಯಕ್ತಿ. ಶಿವಾಜಿ ಮಹಾರಾಜರ ರೂಪ ತಳೆದು ಶತ್ರುಗಳ ಮಧ್ಯದಲ್ಲಿ ಕುಳಿತಿದ್ದರು ಈ ಮದರಿ ಮೆಹತರ.

ಶಿವಾಜಿ ಮಹಾರಾಜ್ ರವರು ಪಟ್ಟಾಭಿಷೇಕದ ಸಮಯದಲ್ಲಿ ರಾಯಗಡದ ಸುತ್ತಲೂ ದೇವಸ್ಥಾನಗಳು ಕಟ್ಟಡಗಳು ನಿರ್ಮಾಣವಾಗುತ್ತಿದ್ದವು . ಮುಸ್ಲಿಮರಿಗೆ ಮಸೀದಿಯನ್ನು ಅರಮನೆಯ ಮುಂಭಾಗದಲ್ಲಿಯೇ ನಿರ್ಮಿಸಿಕೊಟ್ಟಿದ್ದರು. ಅರಮನೆಯ ಎದುರಿನ ಮಸೀದಿಯ ಅವಶೇಷಗಳು ಇಂದೂ ಕೂಡ ಅಲ್ಲಿಯೇ ಇವೆ.

ಶಿವಾಜಿ ಮಹಾರಾಜ್ ಮತ್ತು ಅಬ್ಜಲ್ ಖಾನನ ಹೋರಾಟವನ್ನು ಹಿಂದು ಮುಸ್ಲಿಂ ಬಣ್ಣದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಆದರೆ ಅಬ್ದುಲ್ ಖಾನ್ ಮರಣದ ನಂತರ ಶಿವಾಜಿ ಮಹಾರಾಜರು ಸ್ವತಃ ಅಫ್ಜಲ್ ಖಾನ್ ರ ದೇಹವನ್ನು ಇಸ್ಲಾಮಿಕ್ ಪದ್ದತಿಯಂತೆ ಸಮಾಧಿ ಮಾಡಬೇಕು ಎಂದು ಆದೇಶಿಸಿದ್ದರು. ಆ ಬಳಿಕ ಅಬ್ಜಲ್ ಖಾನರ ಪುತ್ರರನ್ನ ಕ್ಷಮಿಸಿದ್ದರು.

ಶಿವಾಜಿ ಮಹಾರಾಜರ ವಿರೋಧ ಆದಿಲ್ ಶಾಹಿ ದೊರೆಗಳ ದೌರ್ಜನ್ಯದ ವಿರುದ್ಧವಾಗಿತ್ತೇ ಹೊರತು ಮುಸ್ಲಿಮರ ವಿರುದ್ಧ ಅಲ್ಲ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?
ಇದನ್ನೆಲ್ಲಾ ತಿಳಿಸಲು ಅವಕಾಶ ಮಾಡಿಕೊಟ್ಟ ನಿತೀಶ್ ರಾಣೆಯವರಿಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸೋಣ.
ಹಾಗೆಯೇ ಕೇರಳವನ್ನು ಮಿನಿ ಪಾಕಿಸ್ತಾನ ಎಂದಿದ್ದಕ್ಕೆ ಸ್ವಾಭಿಮಾನಿ ಕೆರಳಿಯರು ದೂರು ದಾಖಲಿಸಿ ಸುಪ್ರೀಂಕೋರ್ಟಿನಲ್ಲಿ ನ್ಯಾಯ ಕೇಳುವ ಅವಕಾಶ ಇದೆ ಎಂಬುದನ್ನು ನೆನಪಿಸಿಕೊಡೋಣ.