ಮಾಲ್ದಿವ್ಸ್ ಸರ್ಕಾರವನ್ನು ಉರುಳಿಸಲು ಹೋಗಿ ಕೈಸುಟ್ಟುಕೊಂಡರೇ ಮೋದಿ? ವಾಷಿಂಗ್ಟನ್ ಪೋಸ್ಟ್ ವರದಿ ಹೇಳುವುದೇನು?

0
714

ಸನ್ಮಾರ್ಗ ವಾರ್ತೆ

✍️ಅಮಾನ್ ಕೆ.

ಆಪರೇಷನ್ ಕಮಲದ ಮೂಲಕ ಈ ದೇಶದ ಹಲವು ಆಡಳಿತವನ್ನು ವಶಪಡಿಸಿಕೊಂಡ ಕುಖ್ಯಾತಿ ಬಿಜೆಪಿಗಿದೆ. ಆದರೆ ಇದೇ ತಂತ್ರವನ್ನು ಬಿಜೆಪಿ ವಿದೇಶಕ್ಕೂ ವಿಸ್ತರಿಸುವ ಸಂಚು ನಡೆಸಿತ್ತೇ? ಮಾಲ್ಡೀವ್ಸ್ ಪಾರ್ಲಿಮೆಂಟಿನ ಸುಮಾರು 40 ಶಾಸಕರನ್ನು ಖರೀದಿಸಿ ಆ ಮೂಲಕ ಅಧಿಕಾರದಲ್ಲಿರುವ ಮೊಹಮ್ಮದ್ ಮುಯಿಝೂ ಸರ್ಕಾರವನ್ನು ಬೀಳಿಸಲು ಮೋದಿ ಸರ್ಕಾರ ಷಡ್ಯಂತ್ರ ನಡೆಸಿತ್ತೇ? ಹೌದು ಅನ್ನುತ್ತದೆ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿರುವ ವರದಿ.

2023ರಲ್ಲಿ ಮುಯಿಝು ಅಧಿಕಾರಕ್ಕೆ ಬಂದ ಬಳಿಕ ಈ ಷಡ್ಯಂತ್ರ ನಡೆದಿದೆ ಎಂದು ವಾಷಿಂಗ್ಟನ್ ಪೋಸ್ಟ್ ವಿವರಿಸಿದೆ.

ಭಾರತೀಯ ಸೇನೆಯನ್ನು ಮಾಲ್ದಿವ್ಸ್ ನಿಂದ ಹಿಂಪಡೆಯಬೇಕು ಎಂದು ಈ ಮೊಹಮ್ಮದ್ ಮುಯಿಝು ಅವರು ಅಧಿಕಾರಕ್ಕೆ ಬಂದ ತಕ್ಷಣ ಆದೇಶಿಸಿದ್ದರು ಮತ್ತು ಚೀನಾದೊಂದಿಗೆ ಸಂಬಂಧ ಬೆಳೆಸುವ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದು ಭಾರತಕ್ಕೆ ತೀವ್ರ ಮುಜುಗರವನ್ನ ತರಿಸಿತ್ತು. ತನ್ನ ಅಕ್ಕಪಕ್ಕದ ಚಿಕ್ಕ ಪುಟ್ಟ ರಾಷ್ಟ್ರಗಳೆಲ್ಲ ತನಗೆ ಎದುರು ನಿಲ್ಲುತ್ತಿರುವುದು ಮತ್ತು ಚೀನಾದತ್ತ ವಾಲುವುದು ಮೋದಿ ಸರಕಾರಕ್ಕೆ ತೀವ್ರ ಇರಿಸು ಮುರಿಸನ್ನು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಗುಪ್ತಚರ ವಿಭಾಗವಾದ ರಾ ಮುಯಿಝು ಸರಕಾರವನ್ನು ಬೀಳಿಸಲು ಷಡ್ಯಂತ್ರ ಹೆಣೆಯಿತು ಎಂದು ವಾಷಿಂಗ್ಟನ್ ಪೋಸ್ಟ್ ವಿವರಿಸಿದೆ.

ಮಾಲ್ದಿವ್ಸ್ ಪಾರ್ಲಿಮೆಂಟಿನ ಸುಮಾರು 40 ಸಂಸದರನ್ನು ಖರೀದಿಸುವುದು ಷಡ್ಯಂತ್ರದ ಭಾಗವಾಗಿತ್ತು. ಇದರಲ್ಲಿ ಮುಯಿಝು ಅವರ ಪಕ್ಷದ ಸಂಸದರೂ ಸೇರಿದ್ದರು. ಅಲ್ಲದೆ ಉನ್ನತ ಸೇನಾಧಿಕಾರಿಗಳು ಪೊಲೀಸರು ಮತ್ತು ಕ್ರಿಮಿನಲ್ ತಂಡಗಳ ಬೆಂಬಲವನ್ನು ಪಡೆಯಲೂ ರಾ ಪ್ರಯತ್ನಿಸಿತು. ಸುಮಾರು ಆರು ಮಿಲಿಯನ್ ಡಾಲರ್ ಮೊತ್ತವನ್ನು ಇದಕ್ಕಾಗಿ ಖರ್ಚು ಮಾಡಬೇಕಾದೀತು ಎಂದು ಕೂಡ ಅಂದಾಜಿಸಲಾಗಿತ್ತು.

ಇಷ್ಟೇ ಅಲ್ಲ 2024 ಜನವರಿಯಲ್ಲಿ ಮಾಲ್ದಿವ್ಸ್ ನ ಪ್ರತಿಪಕ್ಷದ ನಾಯಕರಲ್ಲಿ ಈ ಕುರಿತಂತೆ ಚರ್ಚಿಸಲಾಗಿತ್ತು. ಆದರೆ ಸಂಸದರಿಂದ ಈ ಸಂಚಿಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಈ ಷಡ್ಯಂತ್ರ ರದಿಂದ ಹಿಂಜರಿಯುವುದು ಭಾರತಕ್ಕೆ ಅನಿವಾರ್ಯವಾಯಿತು ಎಂದು ವಾಷಿಂಗ್ಟನ್ ಪೋಸ್ಟ್ ವಿವರಿಸಿದೆ.

ಈ ಮುಯಿಝು ಅವರು ಅಧಿಕಾರಕ್ಕೆ ಬರುವುದಕ್ಕಿಂತ ಮೊದಲಿನ ಮಾಲ್ದಿವ್ಸ್ ಸರಕಾರದೊಂದಿಗೆ ಭಾರತಕ್ಕೆ ಉತ್ತಮ ಸಂಬಂಧ ಇತ್ತು. ಆದರೆ ಮುಯಿಝು ಅವರು ಇದಕ್ಕೆ ತದ್ವಿರುದ್ಧವಾಗಿ ವರ್ತಿಸಿದರು. ಅವರು ಚೀನಾದತ್ತ ವಾಲಿದರು ಮತ್ತು ಅವರ ಸರಕಾರದ ಇಬ್ಬರು ಸಚಿವರು ಭಾರತದ ಬಗ್ಗೆ ಅತ್ಯಂತ ಕೇವಲವಾಗಿ ಮಾತಾಡಿ ವಿವಾದವನ್ನು ಹುಟ್ಟು ಹಾಕಿದ್ದರು. ಇದರ ನಡುವೆಯೇ ಭಾರತೀಯ ಸೇನೆಯನ್ನು ಮಾಲ್ದಿವ್ಸ್ ನಿಂದ ಹಿಂತೆಗೆಯುವಂತೆ ಮುಯಿಝು ಕಟುವಾಗಿ ಆದೇಶಿಸಿದರು. ಇದು ಮೋದಿ ಸರಕಾರಕ್ಕೆ ಮುಖಭಂಗವಾಗಿತ್ತು. ತನ್ನನ್ನು ಬಲಿಷ್ಠ ಎಂದು ಹೇಳುತ್ತಿದ್ದ ಮತ್ತು ವಿಶ್ವಗುರು ಎಂದು ಬಿಂಬಿಸುತ್ತಿದ್ದ ಮೋದಿ ಸರಕಾರಕ್ಕೆ ನೆರೆಯ ತೀರ ಪುಟ್ಟ ರಾಷ್ಟ್ರ ಈ ರೀತಿಯಲ್ಲಿ ಎದಿರೇಟು ಹಾಕುವುದನ್ನು ಮೋದಿ ಅವರು ಮತ್ತು ಅವರ ಬೆಂಬಲಿಗರು ಬಯಸಿರಲಿಲ್ಲ.

ಆದ್ದರಿಂದಲೇ ಈ ಸರಕಾರವನ್ನು ಬೀಳಿಸಲು ಭಾರತದ ಗುಪ್ತಚರ ಇಲಾಖೆ ರಾ ಮೂಲಕ ಷಡ್ಯಂತ್ರ ಹೆಣೆಯಲಾಯಿತು ಎಂದು ಅಂದುಕೊಳ್ಳಲಾಗಿದೆ. ವಾಷಿಂಗ್ಟನ್ ಪೋಸ್ಟ್ ವರದಿಯು ಇದನ್ನೇ ದೃಢೀಕರಿಸುತ್ತಿದೆ. ಅಂತೂ ಆಪರೇಷನ್ ಕಮಲವನ್ನು ವಿದೇಶದಲ್ಲಿಯೂ ಪ್ರಯೋಗಿಸಿ ನೋಡುವುದಕ್ಕೆ ಮೋದಿ ಸರಕಾರ ಮುಂದಾಗಿತ್ತು ಅನ್ನುವುದು ಕುತೂಹಲವನ್ನ ಕೆರಳಿಸಿದೆ