ಚೀತಾಗಳಿಗೆ ಆಹಾರ ಕೊಡಲು ರಾಜಸ್ಥಾನದಿಂದ ಜಿಂಕೆಗಳನ್ನು ತರಲಾಗಿಲ್ಲ: ಮಧ್ಯಪ್ರದೇಶ ಸರಕಾರ ಸ್ಪಷ್ಟನೆ

0
230

ಸನ್ಮಾರ್ಗ ವಾರ್ತೆ

ಭೋಪಾಲ್: ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಎಂಟು ಚಿರತೆಗಳಿಗೆ ಆಹಾರವಾಗಿ ರಾಜಸ್ಥಾನದಿಂದ ಚುಕ್ಕೆ ಜಿಂಕೆಗಳನ್ನು ತರಲಾಗಿದೆ ಎಂಬ ವರದಿಗಳನ್ನು ಮಧ್ಯಪ್ರದೇಶ ಸರ್ಕಾರ ನಿರಾಕರಿಸಿದೆ.

ಚಿರತೆಗಳಿಗೆ ಆಹಾರವಾಗಿ ರಾಜಸ್ಥಾನದಿಂದ ಚುಕ್ಕೆ ಜಿಂಕೆಗಳನ್ನು ತರಲಾಗಿದೆ ಎಂಬ ಸುದ್ದಿ ನಿನ್ನೆ ಹೊರಬಿದ್ದಿತ್ತು. ರಾಜಸ್ಥಾನದ ಮರುಭೂಮಿಯಲ್ಲಿ ಮಚ್ಚೆಯುಳ್ಳ ಜಿಂಕೆಗಳು ವಿನಾಶದ ಭೀತಿ ಎದುರಿಸುತ್ತಿದ್ದು, ಇಂತಹ ಅವಿವೇಕದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜಸ್ಥಾನದ ಬಿಷ್ಣೋಯ್ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಹರಿಯಾಣದ ಬಿಷ್ಣೋಯಿ ಸಮುದಾಯದ ಸದಸ್ಯರೊಬ್ಬರು ಸಚಿವಾಲಯದ ಹೊರಗೆ ಧರಣಿ ನಡೆಸಿ ಈ  ನಿರ್ಧಾರದ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಆದರೆ ಮಧ್ಯಪ್ರದೇಶದ ಅರಣ್ಯ ಇಲಾಖೆಯು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ರಾಜಸ್ಥಾನದಿಂದ ಇಂತಹ ಚುಕ್ಕೆ ಜಿಂಕೆಗಳನ್ನು ತರುವಂತಿಲ್ಲ ಎಂದು ಅರಣ್ಯ ಇಲಾಖೆ ವಿವರಣೆ ನೀಡಿದೆ.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 20ಸಾವಿರಕ್ಕೂ ಹೆಚ್ಚು ಚುಕ್ಕೆ ಜಿಂಕೆಗಳಿವೆ. ಹಾಗಾಗಿ ಇವುಗಳನ್ನು ಹೊರಗಿನಿಂದ ತರಲಾಗಿದೆ ಎಂಬ ಸುದ್ದಿ ಸುಳ್ಳಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚಿರತೆಗಳನ್ನು ತರಲಾಗಿತ್ತು.