ಸೇನೆಯಿಂದ ನಿವೃತ್ತರಾದ ವರ್ಷದ ಬಳಿಕವೂ ಮಹಿಳಾ ಅಧಿಕಾರಿಗಳಿಗೆ ಸಿಗುತ್ತಿಲ್ಲ ಪಿಂಚಣಿ…!

0
205

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತೀಯ ಸೇನೆಯಿಂದ ನಿವೃತ್ತಿಯಾದ ಒಂದು ವರ್ಷದ ಬಳಿಕ ಕೂಡಾ ಹಲವು ಮಂದಿ ಮಹಿಳಾ ಅಧಿಕಾರಿಗಳಿಗೆ ತಮ್ಮ ಪಿಂಚಣಿ ಸಿಗುತ್ತಿಲ್ಲ ಎಂಬ ಅಂಶ ಬಹಿರಂಗವಾಗಿದೆ. ಲಿಂಗ ಸಮಾನತೆ ಸಂಬಂಧ 2020ರಲ್ಲಿ ನೀಡಿದ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಪಿಂಚಣಿಗೆ ಅರ್ಹರಾಗಿದ್ದರೂ ಕೂಡ ಪಿಂಚಣಿ ದೊರೆಯುತ್ತಿಲ್ಲ ಎಂಬ ವಿಷಯವನ್ನು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಸಾಲಗಳ ಮರುಪಾವತಿಗೆ ಹೆಣಗಾಡಬೇಕಾದ ಪರಿಸ್ಥಿತಿ ಮತ್ತು ಭವಿಷ್ಯನಿಧಿ ಹಣದಲ್ಲೇ ಜೀವನ ಸಾಗಿಸಬೇಕಾದ ಹಿನ್ನೆಲೆಯಲ್ಲಿ ಹಣಕಾಸು ಒತ್ತಡದಿಂದಾಗಿ ಉದ್ವಿಗ್ನತೆ ಮತ್ತು ಖಿನ್ನತೆ ಎದುರಾಗಿದೆ ಎಂದು ಹಲವು ಮಂದಿ ಮಹಿಳಾ ಅಧಿಕಾರಿಗಳು ದೂರಿದ್ದಾರೆ. ಕೇಂದ್ರ ಸರ್ಕಾರ ಕಳೆದ ವರ್ಷ ಆರಂಭಿಸಿರುವ ಹೊಸ ಪಿಂಚಣಿ ವಿತರಣೆ ವ್ಯವಸ್ಥೆಯೇ ಈ ಸಮಸ್ಯೆಗೆ ಮೂಲ ಕಾರಣ. ಅಲ್ಲದೇ ಪಿಂಚಣಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೂಚನೆಗಳು ಕೂಡಾ ಗೊಂದಲದಿಂದ ಕೂಡಿರುವುದು ಕೂಡ ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದುಸ್ಥಾನ್ ಟೈಮ್ಸ್ ಹೇಳಿದೆ.

ಕನಿಷ್ಠ 15 ಶಾರ್ಟ್ ಸರ್ವೀಸ್ ಕಮಿಷನ್ (ಎಸ್‌ಎಸ್‌ಸಿ) ಮಹಿಳಾ ಅಧಿಕಾರಿಗಳು 20 ವರ್ಷಗಳ ಸೇವೆ ಸಲ್ಲಿಸಿ 2021ರಲ್ಲಿ ನಿವೃತ್ತರಾಗಿದ್ದು, ಇವರೆಲ್ಲರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಹಲವು ಬಾರಿ ಸರ್ಕಾರದ ಪಂಚಣಿ ವಿತರಣೆ ಅಧಿಕಾರಿಗಳಿಗೆ ಕೂಡಾ ವಿವರಿಸಿದ್ದಾರೆ. ಸರ್ಕಾರದ ರಕ್ಷಣಾ ಸೇವಾ ಅಧಿಕಾರಿಗಳು ಪಿಂಚಣಿಗೆ ಅರ್ಹರಾಗಬೇಕಾದರೆ ಕನಿಷ್ಠ 20 ವರ್ಷ ಸೇವೆ ಸಲ್ಲಿಸಿರಬೇಕು.

ಸಶಸ್ತ್ರ ಪಡೆಗಳಲ್ಲಿ ಲಿಂಗ ಅಂತರವನ್ನು ಕಡಿತಗೊಳಿಸುವ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಎರಡು ವರ್ಷ ಬಳಿಕವಷ್ಟೇ ಎಸ್‌ಎಸ್‌ಸಿ ಮಹಿಳಾ ಅಧಿಕಾರಿಗಳು ಕಾಯಂ ಕಮಿಷನ್ (ಪಿಸಿ)ಗೆ ಮತ್ತು ಪಿಂಚಣಿಗೆ ಅರ್ಹರಾಗಿದ್ದರು. ನಲವತ್ತು ವಯಸ್ಸಿನ ಆಸುಪಾಸಿನಲ್ಲಿ ನಿವೃತ್ತರಾದ ಮಹಿಳಾ ಲೆಫ್ಟಿನೆಂಟ್ ಕರ್ನಲ್‌ಗಳಿಗೆ ಪಿಂಚಣಿ ಮಂಜೂರಾಗಿಲ್ಲ. ಏಕೆಂದರೆ ಅವರ ಪ್ರಕರಣಗಳನ್ನು ಸ್ಪರ್ಷ್ ಎಂಬ ಹೊಸ ಆನ್‌ಲೈನ್ ಪಿಂಚಣಿ ವಿತರಣೆ ವ್ಯವಸ್ಥೆಯಲ್ಲಿ ಸಂಸ್ಕರಿಸಲಾಗುತ್ತಿದೆ. ಇದನ್ನು ಅಲಹಾಬಾದ್ ಮೂಲದ ಪ್ರಿನ್ಸಿಪಲ್ ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್ (ಪಿಂಚಣಿ) ನಿಯಂತ್ರಿಸುತ್ತಾರೆ ಎಂದು ವರದಿಯಾಗಿದೆ.

“ನಾನು ನನ್ನ ಜೀವನದ ಅತ್ಯುತ್ತಮ ವರ್ಷಗಳನ್ನು ಸೇನೆಗೆ ನೀಡಿದ್ದೇನೆ. ನನಗೆ ನನ್ನದೇ ಆದ ಹಣಕಾಸಿನ ಅಗತ್ಯಗಳಿವೆ. ಇನ್ನೂ ನಿವೃತ್ತಿಯಾಗಿ ವರ್ಷ ಕಳೆದರೂ ಪಿಂಚಣಿ ಮಾತ್ರ ದೊರೆಯುತ್ತಿಲ್ಲ. ಇದು ನನಗೆ ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ನೀಡುತ್ತಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಸರಿತಾ ಸತಿಜಾ ಹೇಳಿದ್ದಾರೆ. ಸರಿತಾರವರು ಏಪ್ರಿಲ್ 2021 ರಲ್ಲಿ ನಿವೃತ್ತರಾಗಿದ್ದರು. ಅದಕ್ಕೂ ಮೊದಲು ಸುಮಾರು 21 ವರ್ಷಗಳ ಕಾಲ ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ (AOC) ನಲ್ಲಿ ಸೇವೆ ಸಲ್ಲಿಸಿದ್ದರು.