ನವದೀಪ್ ಕೌರ್‌ಗೆ ಜಾಮೀನು ಲಭಿಸಿದರೂ ಬಿಡುಗಡೆಯ ಭಾಗ್ಯವಿಲ್ಲ

0
526

ಸನ್ಮಾರ್ಗ ವಾರ್ತೆ

ಸೋನಿಪತ್: ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನವದೀಪ್ ಕೌರ್ ಅವರ ವಿರುದ್ಧ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಲಭಿಸಿದ್ದರೂ ಅವರಿಗೆ ಬಿಡುಗಡೆಯ ಭಾಗ್ಯ ಕೂಡಿಬಂದಿಲ್ಲ.

ಇನ್ನೊಂದು ಪ್ರಕರಣದಲ್ಲಿ ಜನವರಿ 12ರಂದು ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಕೌರ್ ಜೈಲಿನಲ್ಲಿಯೇ ಇರಬೇಕಾಗುತ್ತದೆ. ಸದ್ಯ ಅವರನ್ನು ಕರ್ನಾಲ್‌ನ ಜೈಲಿನಲ್ಲಿ ಇರಿಸಲಾಗಿದೆ.

ಕಳೆದ ವರ್ಷ ಡಿಸೆಂಬರ್ 28 ರಂದು ಕುಂಡಲಿ ಪೊಲೀಸ್ ಠಾಣೆಯಲ್ಲಿ ಕೌರ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಗುರುವಾರ ಅವರಿಗೆ ಜಾಮೀನು ನೀಡಿದೆ ಎಂದು ವಕೀಲರು ಶುಕ್ರವಾರ ಹೇಳಿದ್ದಾರೆ. ಕೌರ್ ಕಾರ್ಮಿಕ ಹಕ್ಕುಗಳ ಸಂಘಟನೆಯ ಸದಸ್ಯರಾಗಿದ್ದು, ಅವರ ಮೇಲೆ ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ ಮೂರು ಪ್ರಕರಣಗಳು ದಾಖಲಾಗಿವೆ.