ದಿಲ್ಲಿ ಪೊಲೀಸರಿಗೆ ಹೆದರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ವಿಚಾರಣೆ ಬಳಿಕ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್

0
652

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರಿಗೆ ನೆರವು ನೀಡುವ ಮೂಲಕ ತೊಡಗಿಸಿಕೊಂಡು ದೇಶಾದ್ಯಂತ ಗಮನಾರ್ಹ ಸಾಧನೆ ಮಾಡುತ್ತಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ ಶ್ರೀನಿವಾಸನ್‍ ರನ್ನು ದಿಲ್ಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ದಿಲ್ಲಿ ಪೊಲೀಸರ ಕ್ರೈಂ ಬ್ರಾಂಚ್ ವಿಭಾಗದ ಅಧಿಕಾರಿಗಳು ಶ್ರೀನಿವಾಸನ್‍ರನ್ನು ವಿಚಾರಣೆ ನಡೆಸಿದ್ದು, ಕೊರೋನ ಸಹಾಯ ಚಟುವಟಿಕೆಗಳಿಗಳ ಮೂಲಾಧಾರ ಎಲ್ಲಿಂದ ಸಿಕ್ಕಿತೆಂದು ತಿಳಿಸಲು ಶ್ರೀನಿವಾಸನ್ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಪೊಲೀಸರ ಕ್ರಮಕ್ಕೆ ಹೆದರಿ ತನ್ನ ಚಟುವಟಿಕೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಂತ್ರಸ್ತರಿಗೆ ನೆರವು ನೀಡುವ ಕಾಯಕದಲ್ಲಿ ಇನ್ನು ಮುಂದೆಯೂ ಸಕ್ರಿಯವಾಗಿರುತ್ತೇನೆ ಎಂದು ವಿಚಾರಣೆ ಬಳಿಕ ಶ್ರೀನಿವಾಸನ್ ಎನ್ ಡಿಟಿವಿ ಜೊತೆಗೆ ಮಾತನಾಡುತ್ತ ತಿಳಿಸಿದ್ದಾರೆ.

24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕೇಂದ್ರಗಳೂ, ಆಹಾರ, ನೀರು, ಆಕ್ಸಿಜನ್, ರಕ್ತ, ಪ್ಲಾಸ್ಮಾ ತಲುಪಿಸುವ ಕೆಲಸವು ಶ್ರೀನಿವಾಸನ್‍ ರವರ ನೇತೃತ್ವದಲ್ಲಿ ನಡೆದಿದೆ. ಯಾವ ಅಗತ್ಯಕ್ಕೂ ಶ್ರೀನಿವಾಸನ್ ವಾರ್ ರೂಮ್ ಸದಾ ಸಿದ್ಧವಾಗಿದೆ. ದಿಲ್ಲಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಆಹಾರ ಇತರ ಸೌಕರ್ಯಗಳನ್ನು ಇವರು ತಲುಪಿಸುತ್ತಿದ್ದಾರೆ. ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತ ಸೇವೆ ನೀಡುತ್ತಿರುವ ಇವರ ಕಾರ್ಯವನ್ನು ರಾಷ್ಟ್ರೀಯ ಮಾಧ್ಯಮಗಳು ಕೂಡ ಹೊಗಳಿದ್ದು, ಪಕ್ಷ ರಾಜಕೀಯ ಭೇದವಿಲ್ಲದ ಈ ಯುವ ನಾಯಕ ದೊಡ್ಡ ಕೆಲಸ ಮಾಡಿ ಜನರ ಪ್ರೀತಿ ಪಾತ್ರರಾಗಿದ್ದಾರೆ.

ಪೊಲೀಸರ ಕ್ರಮಕ್ಕೆ ಹೆದರುವುದಿಲ್ಲ. ಪ್ರತೀಕಾರ ಕ್ರಮದಿಂದ ಆತ್ಮಸ್ಥೈರ್ಯ ಸೋರಿ ಹೋಗದು ಎಂದು ಕಾಂಗ್ರೆಸ್ ವಕ್ತಾರ ಸೂರಜ್ ವಾಲಾ ಹೇಳಿದ್ದಾರೆ.