ಸನ್ಮಾರ್ಗ ವಾರ್ತೆ
ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ನೀಡಲಾಗುತ್ತಿರುವ ಶಿಶುಪಾಲನಾ ರಜೆಯನ್ನು ಒಂಟಿ ಪೋಷಕರಾಗಿರುವ ಪುರುಷ ಉದ್ಯೋಗಿಗಳಿಗೂ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.
ಒಂಟಿ ಪೋಷಕರಾದ ವಿವಾಹ ವಿಚ್ಛೇದಿತ ಅಥವಾ ವಿಧುರರು ಗರಿಷ್ಠ 6 ತಿಂಗಳವರೆಗೆ ಶಿಶುಪಾಲನಾ ರಜೆಯನ್ನು ತೆಗೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಅಡಿಯಲ್ಲಿ ನೌಕರರಾಗಿರುವ ಮಹಿಳೆಯರು ತಮ್ಮ ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳು (180 ದಿನಗಳು) ಶಿಶುಪಾಲನಾ ರಜೆ ಪಡೆಯಲು ಅವಕಾಶವಿದೆ. ಹಾಗೆಯೇ, ಇನ್ನು ಮುಂದೆ ಒಬ್ಬಂಟಿ ಪೋಷಕ ಪುರುಷ ನೌಕರರೂ ಕೂಡ ಶಿಶುಪಾಲನಾ ರಜೆ ಪಡೆದುಕೊಳ್ಳಲು ಅರ್ಹರು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್ ಕೊರಡೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಒಂಟಿ ಪುರುಷ ಪೋಷಕರಿಗೂ ಶಿಶುಪಾಲನಾ ರಜೆ ನೀಡಬೇಕೆಂಬ ಬಂದಿದ್ದ ಪ್ರಸ್ತಾವನೆಗಳು ಪರಿಶೀಲಿಸಿದ ಸರ್ಕಾರ, ಈ ಸೌಲಭ್ಯವನ್ನು ಪುರುಷ ನೌಕರರಿಗೂ ನೀಡುವುದು ನ್ಯಾಯಸಮ್ಮತ ಕ್ರಮವೆಂದು ಮನಗಂಡಿತು. ಇದೀಗ, ಒಂಟಿ ಪುರುಷರಿಗೆ ಅವಕಾಶ ಕಲ್ಪಿಸಲಾಗುವುದೆಂಬ ಆದೇಶ ನೀಡಿದೆ.
ಯಾವಾಗ ಬೇಕಾದರೂ ಪುರುಷ ನೌಕರ ಶಿಶುಪಾಲನಾ ರಜೆ ಪಡೆಯಬಹುದು. ಒಂದು ವೇಳೆ, ಆ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲನಾ ರಜೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.












