ಪಠ್ಯ ಪುಸ್ತಕಗಳಿಂದ ತಮ್ಮ ಹೆಸರು ತೆಗೆಯುವಂತೆ NCERT ಗೆ ಮನವಿ ಸಲ್ಲಿಸಿದ ಸಲಹೆಗಾರರು

0
639

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಶಾಲಾ ಪಠ್ಯ ಪುಸ್ತಕಗಳಲ್ಲಿ ಹಲವಾರು ಬದಲಾವಣೆ ಮಾಡಿರುವುದು ಹಾಗೂ ದೊಡ್ಡ ಪ್ರಮಾಣದಲ್ಲಿ ಪಠ್ಯಗಳನ್ನು ಕಿತ್ತು ಹಾಕಿರುವ ಕ್ರಮವನ್ನು ಆಕ್ಷೇಪಿಸಿರುವ ಮುಖ್ಯ ಸಲಹೆಗಾರರಾಗಿದ್ದ ಸುಹಾಸ್ ಪಲ್ಶಿಕರ್ ಹಾಗೂ ಯೋಗೇಂದ್ರ ಯಾದವ್ ಅವರು, ಹಾಲಿ ಪಠ್ಯ ಪುಸ್ತಕಗಳ ಸ್ವರೂಪದಿಂದ ತಾವು ದೂರ ನಿಲ್ಲುವುದಾಗಿ ಮತ್ತು ಪಠ್ಯ ಪುಸ್ತಕಗಳಿಂದ ತಮ್ಮ ಹೆಸರನ್ನು ಕೈಬಿಡಬೇಕಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ ಮನವಿ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್.ಕಾಮ್ ವರದಿ ಮಾಡಿದೆ.

ಇವರು 2006-07ರಲ್ಲಿ ಪ್ರಕಟವಾಗಿದ್ದ ಒಂಬತ್ತರಿಂದ ಹನ್ನೆರಡನೇ ತರಗತಿ ಪಠ್ಯ ಪುಸ್ತಕಗಳ ಮುಖ್ಯ ಸಲಹೆಗಾರರಾಗಿದ್ದರು.

ಕೋವಿಡ್-19 ಸಾಂಕ್ರಾಮಿಕದಿಂದ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಪಠ್ಯಕ್ರಮವನ್ನು ಕಡಿತಗೊಳಿಸಲು ಭಾರಿ ಬದಲಾವಣೆ ಹಾಗೂ ಪಠ್ಯಗಳನ್ನು ಕಿತ್ತು ಹಾಕಲು ಕಳೆದ ವರ್ಷ ನಿರ್ಣಯ ಕೈಗೊಂಡು, ಈ ವರ್ಷದಿಂದ ಜಾರಿಗೊಳಿಸಿರುವ NCERT ಕ್ರಮವು ಶಿಕ್ಷಣ ತಜ್ಞರು ಹಾಗೂ ರಾಜಕಾರಣಿಗಳಿಂದ ತೀವ್ರ ಟೀಕೆಗೆ ಗುರಿಯಾಗಿ ವಿವಾದಕ್ಕೆ ಕಾರಣವಾಗಿದೆ.

ಈ ತಿದ್ದುಪಡಿಯಲ್ಲಿ 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಉಲ್ಲೇಖಗಳು, ಮುಘಲ್ ಅವಧಿ ಹಾಗೂ ಜಾತಿ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಮತ್ತು ಪ್ರತಿಭಟನೆಗಳು ಹಾಗೂ ಸಾಮಾಜಿಕ ಚಳವಳಿಗಳ ಕುರಿತು ಪಠ್ಯಗಳನ್ನು ಕೈಬಿಡಲಾಗಿದೆ.

NCERT ನಿರ್ದೇಶಕ ಡಿ.ಎಸ್.ಸಕ್ಲಾನಿ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಯಾದವ್ ಹಾಗೂ ಪಲ್ಶಿಕರ್,
ಪಠ್ಯಕ್ರಮದ ಸುಧಾರಣಾ ಪ್ರಕ್ರಿಯೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ

“ಇಲ್ಲಿ ಯಾವುದೇ ಶೈಕ್ಷಣಿಕ ಸುಧಾರಣೆ ಕಾಣುವಲ್ಲಿ ನಾವು ವಿಫಲವಾಗಿದ್ದೇವೆ. ಪಠ್ಯಗಳನ್ನು ಗುರುತು ಸಿಗಲಾರದಷ್ಟು ತಿರುಚಿರುವುದು ನಮಗೆ ಕಾಣುತ್ತಿದೆ. ಅದರಿಂದ ಉಂಟಾಗಿರುವ ಕೊರತೆಯನ್ನು ತುಂಬಿಸುವ ಯಾವುದೇ ಪ್ರಯತ್ನವೂ ನಡೆದಿಲ್ಲ. ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತೋಚಿದಂತೆ ಕಡಿತ ಮಾಡುವ ಹಾಗೂ ಕಿತ್ತು ಹಾಕುವ ಪ್ರಕ್ರಿಯೆಯು ಪಠ್ಯದ ಸ್ಫೂರ್ತಿಯನ್ನು ಉಲ್ಲಂಘಿಸುತ್ತದೆ. ನಿರಂತರವಾಗಿ ಪಠ್ಯ ವಿಷಯವನ್ನು ಕಿತ್ತೊಗೆಯುವುದರ ಹಿಂದೆ ಅಧಿಕಾರದಲ್ಲಿರುವವರನ್ನು ಸಂಪ್ರೀತರನ್ನಾಗಿಸುವ ಇರಾದೆ ಕಾಣುತ್ತಿದೆಯೇ ಹೊರತು ಅದರ ಹಿಂದೆ ಯಾವುದೇ ತರ್ಕವಿಲ್ಲ” ಎಂದೂ ಪತ್ರದಲ್ಲಿ ಹೇಳಲಾಗಿದೆ.

ಆದರೆ, “ಸಾಂಕ್ರಾಮಿಕದ ಅವಧಿಯಲ್ಲಿ ವಿದ್ಯಾರ್ಥಿಗಳು ಎದುರಿಸಿದ್ದ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟು ವಿಷಯಗಳ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಅವಶ್ಯಕ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು NCERT ತನ್ನ ಇತ್ತೀಚಿನ ಪಠ್ಯ ಪುಸ್ತಕ ಸುಧಾರಣಾ ಕ್ರಮಗಳ ಕುರಿತು ಸರಣಿ ಟ್ವಿಟ್‌ಗಳ ಮೂಲಕ ಬಲವಾಗಿ ಸಮರ್ಥಿಸಿಕೊಂಡಿದೆ.