ಒಮನ್: ಪ್ರವಾಹದಲ್ಲಿ ಕೊಚ್ಚಿ ಹೋದ ಭಾರತೀಯ ಕುಟುಂಬದ ಮಹಿಳೆಯ ಮೃತದೇಹ ಪತ್ತೆ

0
1312

ಮಸ್ಕತ್,ಮೇ 22: ಮಳೆ ನೀರಿನ ಪ್ರವಾಹದಲ್ಲಿ ಸಿಲುಕಿ ಕಾರು ಸಹಿತ ಕಾಣೆಯಾಗಿದ್ದ ಮಹಾರಾಷ್ಟ್ರದ ಕುಟುಂಬದ ಆರು ಮಂದಿಯಲ್ಲಿ ಓರ್ವ ಹಿರಿಯ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಶರ್ಖಿಯಾ ಗವರ್ನರೇಟ್‍ನ ವಾದಿ ಖಾಲಿದ್‍ನಲ್ಲಿ ಕಳೆದ ಶನಿವಾರ ಸಂಜೆ ಬಂದ ನೆರೆ ನೀರಲ್ಲಿ ಸರದಾರ್ ಫಝಲ್ ಅಹ್ಮದ್ ಪಠಾಣ್‍ರ ಕುಟುಂಬ ಕೊಚ್ಚಿ ಹೋಗಿತ್ತು.

ಫಝಲ್ ಅಹ್ಮದ್ ಮೃತ ಮಹಿಳೆಯನ್ನು ತನ್ನ ತಾಯಿಯೆಂದು ಗುರುತಿಸಿದ್ದಾರೆ. ಇಬ್ರ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದೆ. ಅವರ ತಾಯಿ ಶಬ್ನಾ ಬೇಗಂ ಖೈರುಲ್ಲ, ತಂದೆ ಖಾನ್ ಖೈರುಲ್ಲಾ ಸತ್ತಾರ್ ಖಾನ್, ಪತ್ನಿ ಅರ್ಷಿ ಖಾನ್, ಪುತ್ರಿ ಸಿದ್ರಾ ಖಾನ್(4), ಝೈದ್ ಖಾನ್(2), ಮತ್ತು ನೂಹ್ ಖಾನ್(28 ದಿವಸ) ನೆರೆಯಲ್ಲಿ ಸಿಲುಕಿ ಕಾಣೆಯಾಗಿದ್ದಾರೆ. ಇಬ್ನು ಹೈತಂ ಫಾರ್ಮಸಿಯಲ್ಲಿ ಫಾರ್ಮಿಸ್ಟ್ ಆಗಿರುವ ಸರದಾರ್ ಫಝಲ್ ಇಬ್ರದಲ್ಲಿ ಕುಟುಂಬ ಸಹಿತ ವಾಸಿಸುತ್ತಿದ್ದರು. ಸರದಾರ್ ಫಝಲ್ ನೆರೆಯಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಮರವೊಂದನ್ನು ಹಿಡಿದು ಪಾರಾಗಿದ್ದಾರೆ. ರವಿವಾರದಿಂದ ಸಿವಿಲ್ ಡಿಫೆನ್ಸ್ ಕಾಣೆಯಾದವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದೆ. ಕಾರು ನುಜ್ಜಾಗಿ ಪತ್ತೆಯಾಗಿದ್ದು, ಉಳಿದ ನಾಲ್ವರ ಪತ್ತೆಗೆ ಅವಿರತ ಪ್ರಯತ್ನ ನಡೆಯುತ್ತಿದೆ.