ಶ್ರೀನಗರ-ಶಾರ್ಜಾ ನೇರ ವಿಮಾನಕ್ಕೆ ತನ್ನ ವಾಯುಪ್ರದೇಶದ ಬಳಕೆಯನ್ನು ನಿಷೇಧಿಸಿದ ಪಾಕಿಸ್ತಾನ

0
532

ಸನ್ಮಾರ್ಗ ವಾರ್ತೆ

ಶ್ರೀನಗರ: ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ನಿರ್ವಹಿಸುವ ಕಡಿಮೆ ವೆಚ್ಚದ ಶ್ರೀನಗರ-ಶಾರ್ಜಾ ನೇರ ವಿಮಾನಕ್ಕೆ ತನ್ನ ವಾಯು ಪ್ರದೇಶದ ಬಳಕೆಯನ್ನು ಪಾಕಿಸ್ತಾನ ನಿರಾಕರಿಸಿದೆ.

ಈ ಬೆಳವಣಿಗೆಯ ಬಗ್ಗೆ ನಾಗರಿಕ ವಿಮಾನ ಯಾನ, ವಿದೇಶಾಂಗ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳಿಗೆ ತಿಳಿಸಲಾಗಿದೆ ಎಂದು ಸರಕಾರಿ ಮೂಲಗಳು ಬುಧವಾರ ಸುದ್ದಿ ಸಂಸ್ಥೆ ANI ಗೆ ತಿಳಿಸಿವೆ.

ಪಾಕ್ ನ ಈ ನಿರಾಕರಣೆಯು ಹಾರಾಟದ ಕಾರ್ಯ ಸಾಧ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿಂದೆ 2009ರಲ್ಲಿ ಕೂಡ ಶ್ರೀನಗರ-ದುಬೈ ಸೇವೆಯನ್ನು ಪ್ರಾರಂಭಿಸಿದ ಸಂದರ್ಭ ಪಾಕ್ ತನ್ನ ಭೂಪ್ರದೇಶವನ್ನು ದಾಟಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಗರ-ಶಾರ್ಜಾ ನೇರ ವಿಮಾನಕ್ಕೆ ಇದೇ ಆತಂಕವನ್ನು ಹುಟ್ಟುಹಾಕಿದೆ.

ಈ ನಿರ್ಧಾರದಿಂದಾಗಿ ಶ್ರೀನಗರದಿಂದ ಶಾರ್ಜಾಕ್ಕೆ ವಿಮಾನಗಳು ಉದಯಪುರ, ಅಹಮದಾಬಾದ್ ಹಾಗೂ ಒಮಾನ್ ಮೂಲಕ ಹಾರಾಟ ನಡೆಸಬೇಕಾಗಿರುವುದರಿಂದ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ವಿಮಾನ ಪ್ರಯಾಣವೂ ದುಬಾರಿಯಾಗಲಿದೆ.

ಈ ಕ್ರಮವನ್ನು “ಅತ್ಯಂತ ದುರದೃಷ್ಟಕರ” ಎಂದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, “2009-2010ರಲ್ಲಿ ಶ್ರೀನಗರದಿಂದ ದುಬೈಗೆ ಏರ್ ಇಂಡಿಯಾ ಎಕ್ಸೆಸ್ ವಿಮಾನಕ್ಕೂ ಪಾಕಿಸ್ತಾನವು ಅದೇ ರೀತಿಯ ಕೆಲಸವನ್ನು ಮಾಡಿತ್ತು. ಪಾಕ್ ವಾಯುಪ್ರದೇಶವನ್ನು ಅತಿಕ್ರಮಿಸಲು ಗೋ ಫಸ್ಟ್ ಅನುಮತಿ ನೀಡಬೇಕೆಂದು ನಾನು ಆಶಿಸಿದ್ದೆ” ಎಂದು ಅವರು ಟ್ವಿಟ್ ಮಾಡಿದ್ದಾರೆ. ಸದ್ಯಕ್ಕೆ (ಪರ್ಯಾಯ ದಿನಗಳಲ್ಲಿ) ಸೇವೆಯನ್ನು ನೀಡುವುದನ್ನು ಮುಂದುವರಿಸಲು ಯೋಜಿಸಿದೆ ಎಂದು ಗೋ ಫಸ್ಟ್ ಹೇಳಿದೆ.