ಅಫ್ಘಾನಿಸ್ತಾನಕ್ಕೆ ಭಾರತದ ಸಹಾಯಹಸ್ತವನ್ನು ತಲುಪಿಸಲು ನೆಲ ಮಾರ್ಗ ಬಳಕೆಗೆ ಅನುಮತಿ ನೀಡಿದ ಪಾಕ್

0
215

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಫ್ಘಾನಿಸ್ತಾನದಿಂದ ಅಮೆರಿಕದ ಸಖ್ಯ ಸೇನೆಯ ವಾಪಸಾತಿ ಮುಗಿದಿದ್ದು ಯುದ್ಧ ಪರಿಣಾಮಗಳಿಂದ ಬಳಲುತ್ತಿರುವ ಅಫ್ಘಾನ್‌ಗೆ ಭಾರತ ಮಾನವೀಯ ನೆಲೆಯಲ್ಲಿ ಸಹಾಯದ ಭರವಸೆ ನೀಡಿದೆ. ಭಾರತದ ಸಹಾಯ ಹಸ್ತ ಪಾಕಿಸ್ತಾನದ ನೆಲ ಮಾರ್ಗದ ಮೂಲಕ ತಲುಪಿಸಲು ತನ್ನ ಸರಕಾರ ಅನುಮತಿಸುತ್ತದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. ಸಹಾಯ ಒದಗಿಸುವುದಕ್ಕೆ ಪಾಕಿಸ್ತಾನ ತಡ ಮಾಡುತ್ತಿರುವ ಬಗ್ಗೆ ಭಾರತ ಪ್ರತಿಭಟಿಸಿತ್ತು.

ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಅಫ್ಘಾನಿಸ್ತಾನದ ಕುರಿತ ಎಂಟು ದೇಶಗಳ ಪ್ರಾದೇಶಿಕ ಸುರಕ್ಷಾ ಚರ್ಚೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. 50ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಪಾಕಿಸ್ತಾನದ ಮೂಲಕ ಭಾರತ ಅಫ್ಘಾನಿಸ್ತಾನಕ್ಕೆ ಕಳುಹಿಸಲು ಸಿದ್ಧವಾಗಿದೆ. ಇದಕ್ಕೆ ಅನುಮತಿ ನಾವು ನೀಡುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಕಚೇರಿ ತಿಳಿಸಿತು.

ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ ಅಫ್ಘಾನ್ ರೋಗಿಗಳಿಗೆ ಮರಳಿ ಅಫ್ಘಾನಿಸ್ತಾನಕ್ಕೆ ಬರುವ ಪ್ರಕ್ತಿತೆ ಸುಲಭಗೊಳಿಸಲು ತೀರ್ಮಾನಿಸಲಾಗಿದೆ. ಪಾಕಿಸ್ತಾನದ ಘೋಷಣೆಗೆ ಭಾರತದ ವಿದೇಶ ಸಚಿವಾಲಯದಿಂದ ಪ್ರತಿಕ್ರಿಯೆ ಬಂದಿಲ್ಲ. ನವೆಂಬರ್ 11ಕ್ಕೆ ವಿದೇಶ ಸಚಿವಾಲಯ ವಕ್ತಾರ ಅರಿಂದಂ ಬಾಗ್ಚಿ ಸಹಾಯ ಹಸ್ತಾಂತರಿಸುವ ಎಲ್ಲ ಸಾಧ್ಯತೆಗಳನ್ನು ಭಾರತ ನೋಡುತ್ತಿದೆ ಎಂದು ಹೇಳಿದ್ದರು.

ಆಗಸ್ಟ್ 15ಕ್ಕೆ ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತ ಮರಳಿ ಹಿಡಿದಿತ್ತು. ಅಕ್ಟೋಬರ್ 20ಕ್ಕೆ ರಷ್ಯದಲ್ಲಿ ನಡೆದ ಮಾಸ್ಕೋ ಫಾರ್ಮೆಟ್ ಕಾನ್ಫರೆನ್ಸ್‌ನಲ್ಲಿ ತಾಲಿಬಾನ್ ಉಪ ಪ್ರಧಾನಿ ಅಬ್ದುಲ್ ಸಲಾಂ ಹನಫಿಯೊಂದಿಗೆ ಭಾರತದ ವಿದೇಶ ಸಚಿವಾಲಯದ ಪ್ರತಿನಿಧಿ ತಂಡ ಚರ್ಚೆ ನಡೆಸಿತ್ತು. ಈ ಸಂದರ್ಭದಲ್ಲಿ ಗೋಧಿ ಮತ್ತು ಇತರ ವೈದಕೀಯ ಸಹಾಯವನ್ನು ನೀಡುವ ಭರವಸೆ ನೀಡಲಾಗಿತ್ತು. ಇದರ ಮುಂದುವರಿದ ಕ್ರಮ ಈಗಿನದು.