ಸನ್ಮಾರ್ಗ ವಾರ್ತೆ
ಕೋಝಿಕ್ಕೋಡ್,ಸೆ.20: ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇರಳ ಪಿಡಿಪಿ ಅಧ್ಯಕ್ಷ ಅಬ್ದುನ್ನಾಸರ್ ಮಅದನಿ ಆರೋಗ್ಯ ಗಂಭೀರವಾಗಿದೆ ಎಂದು ಪಿಡಿಪಿ ತಿಳಿಸಿದೆ. ಕೇರಳ ಸರಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಪಿಡಿಪಿ ಆಗ್ರಹಿಸಿದ್ದು ಅವರ ಆರೋಗ್ಯ ಸ್ಥಿತಿ ದಿನಂಪ್ರತಿ ಹೆಚ್ಚೆಚ್ಚು ಬಿಗಡಾಯಿಸುತ್ತಿದೆ ಎಂದು ತಿಳಿಸಿದೆ. ಮೂರ್ಛೆ ಹೋಗುವುದು, ಹಲವು ಅವಯವಗಳ ಚಟುವಟಿಕೆಗೆ ಕಡಿಮೆಯಾಗಿ, ದೇಹದ ತೂಕ ಕಡಿಮೆಯಾಗಿ 44ಕೆಜಿಗೆ ತಲುಪಿದೆ ಎಂದು ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಜೀಬ್ ಹೇಳಿದರು.
ಕಳೆದ ದಿವಸ ವಿಚಾರಣೆ ವೇಳೆ ಅವರ ಅನಾರೋಗ್ಯ ಗಂಭೀರವಾಗಿತ್ತು. ನಂತರ ಅವರನ್ನು ಬೆಂಗಳೂರಿನ ಸೌಖ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಅವರ ವಿಚಾರಣೆಯು ಮುಂದುವರಿಯುತ್ತಲೇ ಇದೆ. ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ವಿಚಾರಣೆಯನ್ನು ನಾಲ್ಕು ತಿಂಗಳಲ್ಲಿ ಮುಗಿಸಲಾಗುವುದು ಎಂದು ಕರ್ನಾಟಕ ಸರಕಾರ ಹೇಳಿತ್ತಾದರೂ ಇದುವರೆಗೂ ಪೂರ್ತಿಗೊಳಿಸಿಲ್ಲ . ಕರ್ನಾಟಕ ಸರಕಾರವನ್ನು ಸಂಪರ್ಕಿಸಿ ವಿಚಾರಣೆಯನ್ನು ಪೂರ್ತಿಗೊಳಿಸುವ ಕ್ರಮಗಳನ್ನು ಶೀಘ್ರ ಗೊಳಿಸುವಂತೆ ಆಗ್ರಹಿಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರನ್ನು ಮುಹಮ್ಮದ್ ರಜೀಬ್ ವಿನಂತಿಸಿದ್ದಾರೆ.












